×
Ad

ದಿಡ್ಡಳ್ಳಿ ಪ್ರಗತಿಯ ವರದಿ ನೀಡಲು ಡಿಸಿ ಸೂಚನೆ

Update: 2017-01-19 23:36 IST

ಮಡಿಕೇರಿ, ಜ.19: ದಿಡ್ಡಳ್ಳಿಯ ಮೂಲನಿವಾಸಿ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಪ್ರಗತಿಯ ಪಿಪಿಟಿ ಸಹಿತ ಅಗತ್ಯ ಮಾಹಿತಿ ಸಿದ್ಧತೆ ಮಾಡಿಕೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿಸೋಜಾ, ಮೂಲನಿವಾಸಿ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಗುರುತಿಸಲಾಗಿರುವ ಜಾಗ ಸಮತಟ್ಟು ಮಾಡುವ ಕಾರ್ಯ ನಡೆದಿದೆ ಎಂದರು.
ಅಲ್ಲದೆ, ಪುನರ್ವಸತಿ  
ಗಾಗಿ ಈ ವರೆಗೆ 611 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ಪರಿಶೀಲನಾ ಕಾರ್ಯ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಜಿ.ಪಂ. ಸಿಇಒ ಅವರ ಜೊತೆ ಚರ್ಚಿಸಿ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್, ಪುನರ್ವಸತಿಗಾಗಿ ಸಲ್ಲಿಕೆಯಾಗಿರುವ 611 ಅರ್ಜಿಗಳಲ್ಲಿ 150 ಕ್ಕೂ ಹೆಚ್ಚು ಅರ್ಜಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಉಳಿದ ದಾಖಲೆಗಳ ಪರಿಶೀಲನಾ ಕಾರ್ಯವು ಆಯಾಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು. ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸುವಂತೆ ಪಿಡಿಒಗಳು, ಕಂದಾಯಾಧಿಕಾರಿಗಳ ಹಾಗೂ ಇತರ ಸಭೆಗಳಲ್ಲಿ ಚರ್ಚೆಗಳು ನಡೆದಿವೆ. ಆದರೆ ಪ್ರಗತಿ ಕಾರ್ಯ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದರ ಬಗ್ಗೆಯೂ ಅವಲೋಕನ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ನದಿಗೆ ಕಲುಷಿತ ನೀರು ಹೋಗದಂತೆ ನೋಡಿಕೊಳ್ಳುವುದು, ಪ್ಲಾಸ್ಟಿಕ್ ಬಿಸಾಡದಂತೆ ಎಚ್ಚರಿಕೆ ವಹಿಸುವುದು ಮತ್ತಿತರ ಸಂಬಂಧ ವಿಶೇಷವಾಗಿ ಗಮನಹರಿಸಬೇಕು. ಜೊತೆಗೆ ಜಿಲ್ಲೆಯ ಗ್ರಾ.ಪಂ. ಹಾಗೂ ಪಟ್ಟಣಗಳಲ್ಲಿ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಗುರುತಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸುವ ಕೆಲಸವಾಗಬೇಕು. ಈಗಾಗಲೇ ಸರಕಾರ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, 3 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವಾಗಲಿದೆ. ಆದ್ದರಿಂದ ಕೂಡಲೇ ಜಾಗ ನಿಗದಿಪಡಿಸುವಂತೆ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ಸೂಚನೆ ನೀಡಿದರು. ಹಾಗೆಯೇ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಭವನ, ರೈತ ಸಂಪರ್ಕ ಕೇಂದ್ರ, ವಿದ್ಯಾರ್ಥಿ ನಿಲಯ, ಅಂಗನವಾಡಿ ನಿರ್ಮಾಣ ಸಂಬಂಧ ಆದ್ಯತೆ ಮೇಲೆ ನಿವೇಶನ ಒದಗಿಸುವಂತೆ ತಹಶೀಲ್ದಾರ್‌ಗೆ ತಿಳಿಸಿದರು.

ಸರಕಾರದ ನಾನಾ ಇಲಾಖೆಗಳ ವ್ಯಾಪ್ತಿಯಲ್ಲಿರುವ ಸರಕಾರಿ ಭೂಮಿಯನ್ನು ಸಂರಕ್ಷಣೆ ಮಾಡಿಕೊಳ್ಳುವತ್ತ ವಿಶೇಷ ಗಮನಹರಿಸಬೇಕೆಂದು ಇದೇ ವೇಳೆ ಜಿಲ್ಲಾಧಿಕಾರಿ ಹೇಳಿದರು. ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ಡಾಟಾ ಎಂಟ್ರಿ ಮಾಡಬೇಕು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್‌ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಡ್ನೇಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್.ಗಿರೀಶ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ನಾಗರಾಜು, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್ ತಮ್ಮ ಇಲಾಖಾ ವ್ಯಾಪ್ತಿಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ್‌ಗಳಾದ ಕುಸುಮ, ಮಹದೇವ ಸ್ವಾಮಿ, ಕೃಷ್ಣ, ಶಿರಸ್ತೇದಾರರಾದ ಭಾಗ್ಯಲಕ್ಷ್ಮೀ, ಶ್ರೀಷ, ನಾನಾ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News