ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರದಿಂದ ಮಾಸಿಕ ಗೌರವ ಧನ: ಸಚಿವ ರಮೇಶ್ ಕುಮಾರ್ ಭರವಸೆ
ಚಿಕ್ಕಮಗಳೂರು, ಜ.20: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗೌರವ ಧನ ನೀಡುವುದಾಗಿ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷೆ ತಾರಾಕೃಷ್ಣ ತಿಳಿಸಿದ್ದಾರೆ.
ಅವರು ವಿಧಾನಸೌಧದ ಸಭಾಂಗಣದಲ್ಲಿ ಸಂಘದ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಚಿವರು ಆಶಾ ಕಾರ್ಯಕರ್ತೆಯರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಆರ್ಥಿಕ ಸಬಲೀಕರಣಕ್ಕಾಗಿ ಐದು ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ಒದಗಿಸಲಾಗುವುದು. ಮಾರಣಾಂತಿಕ ಕಾಯಿಲೆಗೆ ತುತ್ತಾದ ಕಾರ್ಯಕರ್ತೆಯರಿಗೆ ಸರಕಾರದಿಂದ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಆರ್ಥಿಕ ನೆರವು ನೀಡುವುದಾಗಿ ಹಾಗೂ ಸೇವೆಯಲ್ಲಿರುವಾಗಲೇ ಮೃತರಾದವರ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು. ಆಶಾ ಕಾರ್ಯಕರ್ತೆಯರಿಗೆ ಸರಕಾರದಿಂದ ಬರಬೇಕಾದ ಬಾಕಿ ಹಣವನ್ನು ಆದಷ್ಟು ಶೀಘ್ರವಾಗಿ ನೀಡುವುದರ ಜೊತೆಗೆ ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ತಾರಾಕೃಷ್ಣ ತಿಳಿಸಿದ್ದಾರೆ.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಹಿರಿಯ ಕಾರ್ಮಿಕ ಮುಖಂಡರಾದ ಹೆಚ್.ವಿ.ಅನಂತಸುಬ್ಬರಾವ್, ಎಂ.ಎನ್.ಶ್ರೀರಾಮ್, ಎಂ.ಶಶಿಧರ್, ಟಿ.ಸಿ.ರಮಾ ಸಭೆಯಲ್ಲಿ ಹಾಜರಿದ್ದರು ಎಂದಿದ್ದಾರೆ.