×
Ad

2017-18ನೆ ಸಾಲಿನ ಬಜೆಟ್ ನಲ್ಲಿ ಏಳನೆ ವೇತನ ಆಯೋಗ ರಚನೆ: ಸಿಎಂ ಸಿದ್ದರಾಮಯ್ಯ

Update: 2017-01-20 16:17 IST

ಶಿವಮೊಗ್ಗ, ಜ.20: 2017-18ನೆ ಸಾಲಿನ ಬಜೆಟ್ ಮಾರ್ಚ್ ತಿಂಗಳಲ್ಲಿ ಮಂಡನೆಯಾಗಲಿದ್ದು, ಬಜೆಟ್ ನಲ್ಲಿ ಸರಕಾರಿ ನೌಕರರ ಬೇಡಿಕೆಯಂತೆ ಏಳನೆ ವೇತನ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸರಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ನೌಕರರಿಗೆ ಹಾಲಿ ಸಿಗುತ್ತಿರುವ ಸಂಬಳ, ಸವಲತ್ತುಗಳ ಬಗ್ಗೆ ಹಾಗೂ ರಾಜ್ಯ-ಕೇಂದ್ರ ಸರಕಾರಿ ನೌಕರರ ನಡುವೆ ಇರುವ ವೇತನ ತಾರತಮ್ಯ ಕುರಿತು ಹೊಸ ವೇತನ ಆಯೋಗ ಪರಿಶೀಲಿಸಿ ವರದಿ ನೀಡಲಿದ್ದು, ಆ ಬಳಿಕ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ಏಳನೆ ವೇತನ ಆಯೋಗ ರಚನೆಯಾಗಿ ಆ ಆಯೋಗ ನೀಡುವ ವರದಿಯನ್ನು ಶೀಘ್ರವಾಗಿ ಜಾರಿಗೆ ತರುತ್ತೇನೆ. ನಾನು ಎಂದೆಂದೂ ಸರಕಾರಿ ನೌಕರರ ಪರವಾಗಿ ಇರುತ್ತೇನೆ. ಸರಕಾರ ಮತ್ತು ಜನರ ನಡುವೆ ರಾಯಭಾರಿಗಳಾಗಿ ಕೆಲಸ ಮಾಡುವವರು  ನೌಕರರು. ಆದರೆ ನಾನು ಸರಕಾರಿ ನೌಕರರ ವಿರೋಧಿ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. 

2012ರಲ್ಲಿ ಆರನೆ ವೇತನ ಸಮಿತಿ ಶಿಫಾರಸು ಜಾರಿಯಾಗಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಆರು ಅಥವಾ ಏಳು ವರ್ಷಗಳಿಗೆ ಒಮ್ಮೆ ವೇತನ ಆಯೋಗ ಅಥವಾ ಸಮಿತಿ ರಚನೆಯಾಗುತ್ತದೆ.  ಸರಕಾರಿ ಕಚೇರಿಗಳಲ್ಲಿನ ಪ್ರತಿ ಕಡತದಲ್ಲೂ ಬಡವರ ಕಣ್ಣೀರು ಇರುತ್ತದೆ. ಆ ಕಣ್ಣೀರು ಒರೆಸುವ ಕೆಲಸ ಮಾಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News