×
Ad

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ‘ರಾಯಣ್ಣ ಬ್ರಿಗೇಡ್’ ಚರ್ಚೆ

Update: 2017-01-20 19:30 IST

ಕಲಬುರ್ಗಿ, ಜ. 20: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ ನಾಳೆ(ಜ.21)ಯಿಂದ ಆರಂಭಗೊಳ್ಳಲಿರುವ ಬಿಜೆಪಿ ಕಾರ್ಯಕಾರಿಣಿಯತ್ತ ಎಲ್ಲರ ಚಿತ್ತನೆಟ್ಟಿದೆ.

ಉಭಯ ನಾಯಕರು, ಮತ್ತವರ ಬೆಂಬಲಿಗರ ನಡುವೆ ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ವ್ಯಕ್ತವಾಗುತ್ತಿದ್ದು, ರಾಜ್ಯ ಕಾರ್ಯಕಾರಿಣಿಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಪಕ್ಷದಲ್ಲಿನ ಗುಂಪುಗಾರಿಕೆ, ಕಾರ್ಯಕರ್ತರಲ್ಲಿನ ‘ಕ್ಷೋಭೆ’ ಪರಿಸ್ಥಿತಿ ನಿವಾರಿಸಿ, ಈಶ್ವರಪ್ಪ ಸೇರಿದಂತೆ ಅತೃಪ್ತರ ಮನವೊಲಿಕೆ ದೃಷ್ಟಿಯಿಂದ ನಿನ್ನೆ ಪಕ್ಷದ ಕಚೇರಿಯಲ್ಲಿ ಬಿಎಸ್‌ವೈ ಕರೆದಿದ್ದ ಸಭೆಯನ್ನು ಭಿನ್ನಮತೀಯರು ಬಹಿಷ್ಕರಿಸಿದ್ದರು. ಆ ಮೂಲಕ ಯಡಿಯೂರಪ್ಪನವರಿಗೆ ಭಿನ್ನರು ತಿರುಗೇಟು ನೀಡಿದ್ದರು.

ಈ ಮಧ್ಯೆಯೇ ರಾಯಣ್ಣ ಬ್ರಿಗೇಡ್ ಚುಟುವಟಿಕೆಯಲ್ಲಿ ತೊಡಗಿರುವ ಈಶ್ವರಪ್ಪ, ‘ಹೊಸ ನೀರು ಎಂದಿಗೂ ತಲೆಯ ವರೆಗೂ ಬರಬಾರದು. ಪಕ್ಷಕ್ಕಾಗಿ ತ್ಯಾಗ ಮಾಡಿದ ಹಿರಿಯರ ಕಡೆಗಣನೆ ಸರಿಯಲ್ಲ. ಪಕ್ಷದಲ್ಲಿ ಪ್ರಜಾಪ್ರಭುತ್ವ ವಾತಾವರಣವಿರಬೇಕು’ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

 ಕಲಬುರಗಿಯ ಸೇಡಂ ರಸ್ತೆಯಲ್ಲಿನ ಹಾರಕೂಡ ಕಲ್ಯಾಣ ಮಂಟಪದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಆಗಮಿಸಿದ ಯಡಿಯೂರಪ್ಪ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ವರಿಷ್ಟರಿಂದ ಸೂಕ್ತ ಕ್ರಮ: ರಾಯಣ್ಣ ಬ್ರಿಗೇಡ್ ಹಾಗೂ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಪಕ್ಷದ ವರಿಷ್ಟರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶೀಘ್ರದಲ್ಲೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಲಬುರಗಿಯಲ್ಲಿ ಹೇಳಿದರು.

ಪಕ್ಷದಲ್ಲಿ ಕೆಲ ಸಣ್ಣ-ಪುಟ್ಟ ವ್ಯತ್ಯಾಸಗಳಿರುವುದು ಸತ್ಯ. ಅವುಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ. ಆ ನಿಟ್ಟಿನಲಿ ಅಭೂತಪೂರ್ವ ಜನಸ್ಪಂದನೆ ದೊರೆಯುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಆವರಿಸಿದ್ದು, ಜನ-ಜಾನುವಾರುಗಳು ನೀರು ಮತ್ತು ಮೇವಿಗಾಗಿ ಹಾಹಾಕಾರದ ಸ್ಥಿತಿ ಸೃಷ್ಟಿಯಾಗಿದೆ. ಆದರೆ, ಕೇಂದ್ರ ಸರಕಾರ ಬರ ಪರಿಹಾರ ಕಾರ್ಯಕ್ಕೆ ನೀಡಿದ ಅನುದಾನ ಸದ್ಬಳಕೆ ಮಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News