ಯುವಕರು ನೆಚ್ಚಿನ ಕ್ಷೇತ್ರದಲ್ಲಿ ಬೆಳೆದು ಮಾದರಿಯಾಗಲಿ: ಪ್ರೊ. ಸವದತ್ತಿ
ದಾವಣಗೆರೆ,ಜ.20: ದೇಸೀ ನೈಪುಣ್ಯ ಹಾಗೂ ಜಾಣ್ಮೆಯ ಮೂಲಕ ಶೈಕ್ಷಣಿಕವಾಗಿ ಹಿಂದುಳಿದವರು, ರ್ಯಾಂಕ್ ಪಡೆಯದ ಯುವಕರು ತನ್ನ ನೆಚ್ಚಿನ ಕ್ಷೇತ್ರದಲ್ಲಿ ಬೆಳೆದು ಇನ್ನೊಬ್ಬರಿಗೆ ಆದರ್ಶವಾಗಬೇಕು ಎಂದು ಯುಜಿಸಿಯ ಮಾಜಿ ಸದಸ್ಯ, ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಐ. ಸವದತ್ತಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.
ದಾವಣಗೆರೆಯ ಶಿವಗಂಗೋತ್ರಿ ಆವರಣದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ 4ನೆ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರೊ.ಎಂ.ಐ. ಸವದತ್ತಿ ಅವರ ಅನುಪಸ್ಥಿತಿಯಲ್ಲಿ ಘಟಿಕೋತ್ಸವದ ಭಾಷಣವನ್ನು ವೌಲ್ಯಮಾಪನ ಕುಲಸಚಿವ ಪ್ರೊ.ಟಿ.ವಿ. ವೆಂಕಟೇಶ್ ಓದಿದರು.
ಶೈಕ್ಷಣಿಕ ಗುಣಮಟ್ಟ ಹಾಗೂ ರ್ಯಾಂಕ್ ಗಳಿಕೆ ನಿಮ್ಮ ಜ್ಞಾನ ಅಥವಾ ಶಕ್ತಿಗೆ ಆವಶ್ಯಕವಲ್ಲ. ಶೈಕ್ಷಣಿಕವಾಗಿ ಹಿಂದುಳಿದಿರುವವರು ಹಾಗೂ ರ್ಯಾಂಕ್ ಗಳಿಸದೇ ಇರುವವರು ಚಿಂತಿಸಬೇಕಿಲ್ಲ. ಬದಲಿಗೆ, ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿರುವ ಬಿಲಗೇಟ್ಸ್, ಸ್ಟೀವ್‌ಜಾಬ್ಸ್ ಯಾವುದೇ ವಿವಿಗಳಿಂದ ಪದವಿ, ರ್ಯಾಂಕ್ ಪಡೆದಿಲ್ಲ. ಆದರೂ, ಅವರು ಅಸಾಧ್ಯವಾದುದನ್ನು ಸಾಧಿಸಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಈ ನಿದರ್ಶನಗಳನ್ನು ಅರಿತು, ದೇಸೀ ನೈಪುಣ್ಯ ಹಾಗೂ ಜಾಣ್ಮೆ ಉಪಯೋಗಿಸಿಕೊಂಡು ನಿಮಗಿಷ್ಟವಾದ ಕ್ಷೇತ್ರದಲ್ಲಿ ಬೆಳೆಯಬೇಕೆಂದರು.
ಇದು ಜ್ಞಾನದ ಯುಗವಾಗಿದ್ದು, ಜ್ಞಾನದ ಶಕೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಲೇ ಹೋಗುತ್ತಿದೆ. ಇದರಿಂದ ನಿಮ್ಮ ಆಸಕ್ತ ಕ್ಷೇತ್ರಗಳಲ್ಲಿನ ಜ್ಞಾನವನ್ನು ಬೆರಳ ತುದಿಯಲ್ಲೇ ಪಡೆದು ಸಾಧನೆ ಮಾಡಬಹುದಾಗಿದೆ. ಅಲ್ಲದೆ, ಇಲ್ಲಿ ಸ್ವಂತಕ್ಕೂ ಕಲಿತು ಹಣಕಾಸು, ಅಕೌಂಟಿಂಗ್, ಮ್ಯಾನೇಜ್‌ಮೆಂಟ್, ತಾಂತ್ರಿಕ ಶಿಕ್ಷಣ, ಇಂಜಿನಿಯರಿಂಗ್, ಹಾಸ್ಪಿಟಾಲಿಟಿ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಬಹುದು. ನಿಮಗೆ ಉದ್ಯೋಗ ಬೇಡ ಎನಿಸಿದರೆ, ಒಬ್ಬ ಯಶಸ್ವಿ ಉದ್ಯಮಿಯಾಗುವ ಜೊತೆಗೆ ಉದ್ಯೋಗದಾತರೂ ಆಗಬಹುದು ಎಂದು ಹೇಳಿದರು.
ಕಲಾ ನಿಕಾಯದ ಮುಖ್ಯಸ್ಥ ಎನ್.ಕೆ. ಗೌಡ, ವಾಣಿಜ್ಯ ನಿಕಾಯದ ಪ್ರೊ.ಬಕ್ಕಪ್ಪ, ವಿಜ್ಞಾನ ನಿಕಾಯದ ಮಧುಸೂಧನ್ ಹಾಗೂ ಶಿಕ್ಷಣ ನಿಕಾಯದ ಪ್ರೊ.ವಿ. ಮುರಿಗಯ್ಯ ಅವರು ತಮ್ಮ ನಿಕಾಯದ ಅಡಿ ಪದವಿ, ರ್ಯಾಂಕ್, ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಉಪಸ್ಥಿತರಿದ್ದರು.
ಘಟಿಕೋತ್ಸವದಲ್ಲಿ 2014- 15ನೆ ಸಾಲಿನಲ್ಲಿ ಪದವಿ ಪಡೆದಿದ್ದ, 9,961 ಹಾಗೂ 2015-16ನೆ ಸಾಲಿನಲ್ಲಿ ಪಡೆದಿದ್ದ 11,462 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಹಾಗೂ 2015-16ರಲ್ಲಿ ಪದವಿ ಪಡೆದ 2,029 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ ಮೂವರಿೆ ಪಿಎಚ್‌ಡಿ ಪ್ರದಾನ ಮಾಡಲಾಯಿತು.
ಕನ್ನಡದಲ್ಲಿಯೇ ನಾಲ್ಕು ಚಿನ್ನದ ಒಡತಿಯಾಗುವ ಮೂಲಕ ವಿವಿಗೆ ಮೊದಲಿಗರಾಗಿದ್ದು ಖುಷಿ ತಂದಿದೆ. ನನ್ನ ಸಾಧನೆಗೆ ಪತಿ, ತಂದೆ, ತಾಯಿ ಮೂಲ ಪ್ರೇರಣೆ. ಡಿಗ್ರಿಯಲ್ಲಿ 1ನೆ ಸ್ಥಾನ ಬಯಸಿದ್ದ ನನಗೆ 4ನೆ ಸ್ಥಾನ ಧಕ್ಕಿದ್ದು ಬೇಸರ ಮೂಡಿಸಿತ್ತು. ಅಂದಿನಿಂದಲೇ ಮತ್ತಷ್ಟು ಶ್ರಮ, ಛಲದಿಂದ ಓದಿದ ಪರಿಣಾಮ ಇಂದು ವಿವಿಗೆ ಮೊದಲಿಗಳಾಗಿರುವೆ. ಪಿಎಚ್‌ಡಿ ಮಾಡುವ ಮೂಲಕ ಉಪನ್ಯಾಸಕಿಯಾಗುವ ಆಸೆಯಿದೆ.
ದಿನದ ಕೆಲ ಅವಧಿಯಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡುವ ಜೊತೆಗೆ ಉಪನ್ಯಾಸಕರ ಪಾಠವನ್ನು ಕೇಳಿದರೆ ಎಲ್ಲರೂ ಖಂಡಿತಾ ರ್ಯಾಂಕ್ ಗಳಿಸಲು ಸಾಧ್ಯ. ನಮ್ಮಿಂದ ಆಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆ ಕೈಬಿಟ್ಟು ಸಕಾರಾತ್ಮಕವಾಗಿ ಚಿಂತಿಸುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ರೂಢಿಸಿಕೊಳ್ಳಬೇಕು. ಪಿಎಚ್‌ಡಿ ಮುಗಿಸಿ ಸೈಂಟಿಸ್ಟ್ ಆಗುವ ಗುರಿ ಇದೆ.