ಕಾರ್ಮಿಕನ ಮೇಲೆ ಹುಲಿ ದಾಳಿ
ಮಡಿಕೇರಿ, ಜ.20: ಜಾನುವಾರು ಹಿಡಿಯಲೆಂದು ಬಂದಿದ್ದ ಹುಲಿ ಯೊಂದು ಕಾರ್ಮಿಕನ ಮೇಲೆ ದಾಳಿ ನಡೆಸಿದ ಘಟನೆ ದೇವನೂರು ಗ್ರಾಮದಲ್ಲಿ ನಡೆದಿದೆ. ಕಾಫಿ ಬೆಳೆಗಾರ ಆದೇಂಗಡ ತಾರಾ ಅಯಮ್ಮ ಎಂಬವರ ತೋಟದ ಮನೆ ಯಲ್ಲಿದ್ದ ಬೊಳ್ಳ(56) ಗಾಯಗೊಂಡ ಕಾರ್ಮಿಕ. ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗಾಯಾಳುವನ್ನು ಮೈಸೂರು ಕೆಆರ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿದ್ದ ಜಾನುವಾರಗಳ ಮೇಲೆ ದಾಳಿ ನಡೆಸಲು ಹುಲಿ ಮುಂದಾಗಿದೆ. ಕೊಟ್ಟಿಗೆ ಸಮೀಪ ಲೈನ್ ಮನೆಯಲ್ಲಿದ್ದ ಬೊಳ್ಳ ಶಬ್ದ ಕೇಳಿ ಹೊರಬಂದ ಸಂದರ್ಭ ಹುಲಿ ಬೊಳ್ಳನ ತಲೆಯ ಹಿಂಭಾಗಕ್ಕೆ ದಾಳಿ ನಡೆಸಿದ್ದು, ಗಂಭೀರ ಗಾಯಗಳಾಗಿವೆ.
ದಾಳಿ ನಡೆಸಿದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ. ಮೂರು ಸಾಕಾನೆಗಳ ಮೂಲಕ ಲಕ್ಷ್ಮಣತೀರ್ಥ ಹೊಳೆ ದಂಡೆಯಲ್ಲಿ ಕೂಂಬಿಂಗ್ ನಡೆಸಲಾಯಿತು. ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳಾದ ಅಭಿಮನ್ಯು, ಕೃಷ್ಣ ಹಾಗೂ ದ್ರೋಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು. ಸ್ಥಳೀಯರ ಮಾಹಿತಿಯಂತೆ ಹುಲಿಯ ಮುಖದ ಭಾಗದಲ್ಲಿ ಗಾಯವಾಗಿದ್ದು, ಕಳೆದ 4 ದಿನಗಳಿಂದ ಗ್ರಾಮದ 3 ಜಾನುವಾರುಗಳ ಮೇಲೆ ದಾಳಿ ನಡೆಸಿದೆ. ಸಿಸಿಎಫ್ ಮನೋಜ್ ಕುಮಾರ್, ವನ್ಯಜೀವಿ ಡಿಸಿಎಫ್ ಎಂ.ಎಂ.ಜಯ, ಎಸಿಎಫ್ ಬೆಳ್ಯಪ್ಪ, ಪ್ರಸನ್ನಕುಮಾರ್, ಆರ್‌ಎಫ್‌ಒಗಳಾದ ಗೋಪಾಲ್, ಕಿರಣ್ ಕುಮಾರ್, ಶಿವರಾಮ್, ಉತ್ತಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.