ಬಸವಣ್ಣನ ಪ್ರತಿಮೆಗೆ ಅಪಮಾನ : ಮೂರು ಮಂದಿ ಬಿಜೆಪಿ ಕಾರ್ಯಕರ್ತರ ಸೆರೆ

Update: 2017-01-21 14:17 GMT

ವಿಜಯಪುರ, ಜ. 21: ಇಲ್ಲಿನ ನಿಡೋಣಿ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿಗೆ ಚಪ್ಪಲಿ ಹಾರಹಾಕಿ ಅಪಮಾನ ಮಾಡಿದ ಪ್ರಕರಣ ಸಂಬಂಧ ಮೂರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಲ್ಲಿ ಬಬ್ಬಳೇಶ್ವರ ಸಮೀಪದ ನಿಡೋಣಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ನಿಡೋಣಿ ಗ್ರಾಮದ ಬಿಜೆಪಿಯ ನಿಡೋಣಿ ತಾ.ಪಂ. ಸದಸ್ಯ ಲಕ್ಷ್ಮಣ ಗುಣದಾಳ ಅವರ ಪುತ್ರ ಅರ್ಜುನ ಗುಣದಾಳ(22), ಚನ್ನವೀರ ವಿದ್ಯಾಸಂಸ್ಥೆ ಅಧ್ಯಕ್ಷ ಮಹೇಶ್ ಗುಣದಾಳ(22) ಹಾಗೂ ರಮೇಶ್ ಶಿವನಗೌಡ ಪಾಟೀಲ ಎಂದು ಗುರುತಿಸಲಾಗಿದೆ.

ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿ ವಿಜಯೋತ್ಸವ ಆಚರಿಸುತ್ತಿದ್ದುದರಿಂದ ಕುಪಿತರಾಗಿ, ಬಿಜೆಪಿ ಅಭ್ಯರ್ಥಿ ಸೋಲಿನ ಹಿನ್ನೆಲೆಯಲ್ಲಿ ಪ್ರತೀಕಾರಕ್ಕಾಗಿ ಕೃತ್ಯ ನಡೆಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿ ಸಂದೀಪ ಗುಣಾಳ ತಲೆ ಮರೆಸಿಕೊಂಡಿದ್ದಾನೆ. ರಾಜಕೀಯ ದ್ವೇಷ ಹಾಗೂ ಕೋಮು ಸಾಮರಸ್ಯ ಕದಡುವ ಉದ್ದೇಶದಿಂದಲೇ ಬಸವೇಶ್ವರ ಪುತ್ಥಳಿಗೆ ಅಪಮಾನ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿದ್ದರಾಮಪ್ಪ ತಿಳಿಸಿದ್ದಾರೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ನಿಡೋಣಿ ಠಾಣಾ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿ ಸಂದೀಪ ಗುಣದಾಳ ಎಂಬವನ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ನಿಡೋಣಿ ಠಾಣಾ ಇನ್ಸ್‌ಪೆಕ್ಟರ್ ರಮೇಶ ಅವಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News