ಎನ್.ಆರ್.ಪುರ ಹನಿಟ್ರ್ಯಾಪ್ ಪ್ರಕರಣ

Update: 2017-01-21 17:17 GMT

ಚಿಕ್ಕಮಗಳೂರು, ಜ.21: ಎನ್.ಆರ್.ಪುರದಲ್ಲಿ ಹನಿಟ್ರ್ಯಾಪ್ ಮೂಲಕ ಶ್ರೀಮಂತರಿಂದ ಲಕ್ಷಾಂತರ ರೂ. ಸುಲಿಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ 7 ಮಂದಿ ಆರೋಪಿಗಳಲ್ಲಿ ಠಾಣೆಯಿಂದ ತಪ್ಪಿಸಿ ಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.


ಬಂಧಿತರನ್ನು ಎನ್.ಆರ್.ಪುರ ತಾಲೂಕಿನ ಮು ತ್ತಿನಕೊಪ್ಪದ ರುಕ್ಸಾನಾ ಪರ್ವಿನ್(19), ಅದೇ ಗ್ರಾಮದ ಖೈರುನ್ನಿಸಾ(35) ಮತ್ತು ಎನ್.ಆರ್.ಪುರದ ಮಸೀವುಲ್ಲಾ(39) ಎಂದು ತಿಳಿದು ಬಂದಿದೆ. ಉಳಿದ ಮೂವರು ಆರೋಪಿಗಳಾದ ಪ್ರಕಾಶ್, ಲೀಜೇಶ್ ಮತ್ತು ನರೇಂದ್ರ ಎಂಬವರು ಶಿವಮೊಗ್ಗ ಪೊಲೀಸರು ಬೇರೆ ಪ್ರಕರಣಗಳಲ್ಲಿ ಬಂಧಿಸಿದ್ದು, ಆರೋಪಿಗಳು ಶಿವಮೊಗ್ಗ ಜೈಲಿನಲ್ಲಿದ್ದಾರೆ.


ಕೊಪ್ಪದ ಇಬ್ಬರು ಶ್ರೀಮಂತರನ್ನು 10 ತಿಂಗಳ ಹಿಂದೆ ಆರೋಪಿ ಅರುಣ ಎಂಬಾತ ದೂರವಾಣಿ ಮೂಲಕ ಪರಿಚಯ ಮಾಡಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿ ಯಶಸ್ವಿಯಾಗಿದ್ದ. ಆದರೆ, ಕೆಲ ದಿನಗಳ ಬಳಿಕ ಹಣ ನೀಡದಿದ್ದರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸಿಡಿಯನ್ನು ಅಂತರ್ಜಾಲ ಮಾಧ್ಯಮಗಳಲ್ಲಿ ಬಿತ್ತರಿಸುವ ಬೆದರಿಕೆಯೊಡ್ಡಿ ಸುಮಾರು 2 ಲಕ್ಷ ರೂ. ವಂಚಿಸಿದ್ದಾರೆ ಎಂದು ವಂಚನೆಗೆ ಒಳಗಾಗಿದ್ದ ಓರ್ವರು ದೂರುನಲ್ಲಿ ತಿಳಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಆರೋಪಿಗಳಾದ ಖೈರುನ್ನಿಸಾ, ರುಕ್ಷಾನ ಪರ್ವೀನ್, ಮಸಿವುಲ್ಲಾ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದರು. ಆದರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ಸದಾನಂದ ಅಲಿಯಾಸ್ ಅರುಣ(41)ಪರಾರಿಯಾಗಿರಲಿಲ್ಲ.


ಜ.17ರಂದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳು ಪರಾರಿಯಾಗಲು ಕಾರಣರಾದ 5 ಮಂದಿ ಪೊಲೀಸ್ ಸಿಬ್ಬಂದಿಯನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಈ ಕುರಿತು ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನಡೆಸಲಿದ್ದು, ವಿಚಾರಣಾ ವರದಿಯ ಬಳಿಕ ಪೇದೆಗಳ ಮೇಲೆ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News