ವಿದ್ಯಾವಂತರ ನಿರ್ಲಕ್ಷಕ್ಕೆ ಕೃಷಿಯ ಅಳಿವು: ಸಚಿವ ಕಾಗೋಡು

Update: 2017-01-21 17:44 GMT


ಸಾಗರ, ಜ.21: ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಕೃಷಿ ಕ್ಷೇತ್ರ ಇನ್ನಷ್ಟು ವೈಭವ ಸ್ಥಿತಿಗೆ ತಲುಪುತ್ತದೆ ಎನ್ನುವ ನನ್ನ ನಿರೀಕ್ಷೆ ಹುಸಿಯಾಗಿದೆ. ವಿದ್ಯಾವಂತರಾದ ತಕ್ಷಣ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗ್ರಾಮೀಣ ಕೃಷಿ ಉಳಿಸಿ ಕೊಳ್ಳುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಿಸಿದ್ದಾರೆ. ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತಾಲೂಕು ಮಟ್ಟದ ಕೃಷಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೃಷಿ ಲಾಭದಾಯಕವಲ್ಲ ಎನ್ನುವ ಗಟ್ಟಿ ಮನಸ್ಥಿತಿ ವಿದ್ಯಾವಂತ ಯುವಜನರಲ್ಲಿ ಬೇರುಬಿಟ್ಟಿರುವುದು ದುರದೃಷ್ಟದ ಸಂಗತಿ. ಉದ್ಯೋಗ ಅರಸಿ ಪಟ್ಟಣಕ್ಕೆ ಹೋಗಿ ಅಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಅವರಲ್ಲಿ ಕೃಷಿಯ ಮಹತ್ವ ಕುರಿತು ತಿಳಿಸಿ ಹೇಳುವ ಕೆಲಸವನ್ನು ಇಂತಹ ಉತ್ಸವಗಳು ಮಾಡಬೇಕು. ಕೃಷಿ ಉಳಿಯದಿದ್ದಲ್ಲಿ ಭವಿಷ್ಯ ಭೀಕರವಾಗಲಿದೆ ಎಂದರು.
ಬದಲಾದ ದಿನಮಾನಗಳಲ್ಲಿ ಕೃಷಿ ಕ್ಷೇತ್ರವನ್ನು ಹೆಚ್ಚೆಚ್ಚು ಯಂತ್ರಗಳ ವ್ಯಾಪಿಸಿಕೊಳ್ಳುತ್ತಿದೆ. ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆಯಿಂದಾಗಿ ಶೇ.20ರಷ್ಟು ಇರುವ ಕೃಷಿಕೂಲಿ ಕಾರ್ಮಿಕರ ಬದುಕಿನ ಪ್ರಶ್ನೆ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಯಂತ್ರ ನಾಗರಿಕತೆ ಹೆಚ್ಚಿದಂತೆ ಕೃಷಿ ಕೂಲಿಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗ ಬೀದಿ ಪಾಲಾಗುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯಿಸಿದರು. ಭೂಮಿ ಸಂಪತ್ತು ಸೃಷ್ಟಿ ಮಾಡುವ ವಸ್ತು. ಅದನ್ನು ಬಳಸಿಕೊಂಡು ಬದುಕಿನ ಅಭಿವೃದ್ಧಿ ಕಾಣುವ ಮನಸ್ಥಿತಿ ನಮ್ಮಲ್ಲಿ ಇಂದಿಗೂ ಜಾಗೃತವಾಗಿಲ್ಲ. ಭೂಮಿಯನ್ನು ಬಳಸಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ನಾವು ವಿಫಲರಾಗುತ್ತಿದ್ದೇವೆ. ಕೃಷಿಯನ್ನು ಬದುಕಿನ ಅವಿಭಾಜ್ಯ ಅಂಗವೆಂದು ಪರಿಗಣಿಸಿ, ಕೃಷಿ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಪ್ರಯತ್ನಗಳು ನಡೆಯಬೇಕಾಗಿದೆ ಎಂದರು. 
ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಂದರೇಶ್ ಮಾತನಾಡಿ, ಬದಲಾದ ದಿನಮಾನಗಳಲ್ಲಿ ನಾವು ಕೃಷಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಯುವ ಜನರು ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಇನ್ನಷ್ಟು ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸುತ್ತಿರುವ ಇಂತಹ ಕೃಷಿ ಉತ್ಸವಗಳು ಮುಳುಗುತ್ತಿರುವ ಕೃಷಿಕ್ಷೇತ್ರವನ್ನು ಮೇಲೆತ್ತುವ ಹೊಸ ಆಶಯವನ್ನು ಸೃಷ್ಟಿಸುತ್ತಿದೆ ಎಂದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ತಾಲೂಕು ಪಂಚಾಯತ್ ಸದಸ್ಯ ಚಂದ್ರಪ್ಪ ಕಲಸೆ, ಕಾಡಾ ವ್ಯವಸ್ಥಾಪಕ ಅಂಬಾಡಿ ಮಹಾದೇವ್, ಧ್ವನಿ ಬೆಳಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಕೆ.ವಿ.ಗಂಗಾಧರ್, ಯೋಜನಾಧಿಕಾರಿ ನಂದಿನಿ ಶೇಟ್ ಇನ್ನಿತರರು ಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News