​ಕಡೂರು ಮೆಸ್ಕಾಂಗೆ 58 ಕೋ.ರೂ. ಮಂಜೂರು: ಶಾಸಕ ವೈ.ಎಸ್.ವಿ. ದತ್ತ

Update: 2017-01-21 17:45 GMT

ಕಡೂರು, ಜ.21: ಕಡೂರು ಕ್ಷೇತ್ರದ ಮುಖ್ಯ ಕಾಮಗಾರಿಗಳಿಗಾಗಿ ಮೆಸ್ಕಾಂಗೆ ಸುಮಾರು 58 ಕೋಟಿ ರೂ.ಯನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಂಜೂರು ಮಾಡಿದ್ದಾರೆ ಎಂದು ಶಾಸಕ ವೈ.ಎಸ್.ವಿ. ದತ್ತಾ ತಿಳಿಸಿದರು. ಅವರು ತಮ್ಮ ಸ್ವಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಹಾಗೂ ಕಡೂರು ಕ್ಷೇತ್ರಕ್ಕೆ ಅನುದಾನ ಮಂಜೂರಾತಿಗಾಗಿ ಇಂಧನ ಸಚಿವರು ಹಾಗೂ ಕೆಪಿಸಿಟಿಸಿಎಲ್ ಸಮಿತಿ ಮುಖ್ಯಸ್ಥರನ್ನು ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ಈ ಸಂಬಂಧ 58 ಕೋ.ರೂ. ಮಂಜೂರು ಮಾಡಿರುವುದಾಗಿ ತಿಳಿಸಿದರು.


ಯಗಟಿ ಹೋಬಳಿಯ ಕುಂಕಾನಾಡು, ಮರವಂಜಿ, ಹೋಚಿಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ವಿದ್ಯುತ್ ಸರಬರಾಜಾಗುತ್ತಿತ್ತು. ಇದರಿಂದ ಆ ಭಾಗಕ್ಕೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಇದನ್ನು ಪರಿಹರಿಸಲು ಕುಂಕಾನಾಡು ಗ್ರಾಮದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 15.20 ಕೋಟಿ ರೂ. ಮಂಜೂರಾತಿ ಪಡೆಯಲಾಗಿದೆ ಎಂದರು.


ಕುಂಕಾನಾಡು ಗ್ರಾಮದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಗೊಂಡರೆ, ಹೋಚಿಹಳ್ಳಿ, ಮರವಂಜಿ, ಪಂಚನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಸಿಂಗಟಗೆರೆಹಲ್ಲಿ ಸದ್ಯ ಇರುವ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಕೇಂದ್ರವನ್ನು 10 ಮೆಗಾವ್ಯಾಟ್ ಶಕ್ತಿ ಸಾಮರ್ಥ್ಯಕ್ಕೆ ಹೆಚ್ಚಿಸಲು ಸುಮಾರು 8 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಕಡೂರು ತಾಲೂಕಿನ ವೆಂಕಟ ಲಕ್ಷ್ಮಮ್ಮ ನಗರದಲ್ಲಿ ಪ್ರಸ್ತಿತ ಇರುವ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಕೇಂದ್ರವನ್ನು 20 ಮೆಗಾವ್ಯಾಟ್ ಶಕ್ತಿ ಸಾಮರ್ಥ್ಯಕ್ಕೆ ಹೆಚ್ಚಿಸಲು 5 ಕೋಟಿ ರೂ. ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.


ರೈತರಿಗೆ ಸರಕಾರ ಮೂಲೂತ ಸೌಕರ್ಯ ಕಲ್ಪಿಸಲು ಕಡೂರು ಕ್ಷೇತ್ರಕ್ಕೆ 30 ಕೋಟಿ ರೂ. ಮಂಜೂರು ಮಾಡಿದೆ. ಫೆಬ್ರವರಿ ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅಂತರಘಟ್ಟೆಯಲ್ಲಿ ಮೆಸ್ಕಾಂ ಸರ್ವಿಸ್ ಸೆಂಟರ್ ತೆರೆಯಲು ಈಗಾಗಲೇ ಅನುದಾನ ಮಂಜೂರಾಗಿದೆ ಎಂರು.
ಗೋಮಾಳ ಜಾಗ ಸಕ್ರಮಗೊಳಿಸಲು ಆದೇಶ ಬಂದಿದ್ದು, ಜಾಗದ ಸಮಸ್ಯೆ ನಿವಾರಣೆಯಾಗಿದೆ. ಫೆೆಬ್ರವರಿ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಸೋಮಶೇಖರ್, ರೋಟರಿ ಕೃಷ್ಣಮೂರ್ತಿ, ಎಪಿಎಂಸಿ ನೂತನ ಸದಸ್ಯರಾದ ಕೆ.ಎಚ್.ಲಕ್ಕಣ್ಣ, ಚಂದ್ರಕಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News