ಬಲಾತ್ಕಾರದಲ್ಲಿ ವಿದ್ಯಾರ್ಥಿಗಳನ್ನು ತರಗತಿಯಿಂದ ಕರೆತಂದರೆ ಕಠಿಣ ಕ್ರಮ: ಎಸ್ಪಿ ಅಣ್ಣಾಮಲೈ ಎಚ್ಚರಿಕೆ

Update: 2017-01-22 07:51 GMT

ಚಿಕ್ಕಮಗಳೂರು, ಜ.22: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವವರಿಗೆ ಪೊಲೀಸ್ ರಕ್ಷಣೆ ನೀಡಲಾಗುವುದು. ಬಲಾತ್ಕಾರದ ಮೂಲಕ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಕರೆತಂದು ಕಾನೂನು ಸುವ್ಯವ್ಯವಸ್ಥೆ ಹದಗೆಡಿಸುವ ಪ್ರಯತ್ನ ನಡೆಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಸ್ಪಿ ಕೆ.ಅಣ್ಣಾಮಲೈ ಎಚ್ಚರಿಸಿದ್ದಾರೆ.

ಅವರು ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶೃಂಗೇರಿಯ ಜೆಸಿಎಂ ಕಾಲೇಜ್ ನಲ್ಲಿ ನಡೆಯುತ್ತಿದ್ದ ಎಬಿವಿಪಿ ಹಾಗೂ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಗಳ ತಿಕ್ಕಾಟ, ಚಕ್ರವರ್ತಿ ಸೂಲಿಬೆಲೆಯನ್ನು ಕರೆಸುವ ಬಗೆಗಿನ ವಿವಾದ, ಥಳಿತ, ನಿಂದನೆ ಪ್ರಕರಣದ ಜೊತೆಗೆ ಎನ್‌ಎಸ್‌ಯುಐಗೆ ಸೇರಿದ ವಿದ್ಯಾರ್ಥಿಯ ದೂರು ಆದರಿಸಿ ಪೊಲೀಸರು ದಾಖಲಿಸಿದ ಮೊಕದ್ದಮೆ, ಅದರಿಂದ ನೊಂದ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆಯ ಘಟನೆಗಳನ್ನು ವಿವರಿಸಿದರು.

ಕೆ.ಪಿ.ಅಂಜನ್ ಎಂಬ ವಿದ್ಯಾರ್ಥಿ ಮೇಲಿನ ಹಲ್ಲೆಯ ದೂರಿನನ್ವಯ ಐವರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಪತ್ರಿಕಾಗೋಷ್ಠಿ ನಡೆಸಿದ್ದನ್ನು ಪ್ರಶ್ನಿಸಿ ಅಭಿಷೇಕ್ ಸೇರಿದಂತೆ ಐವರು ಥಳಿಸಿದ್ದಾರೆ ಎಂದು ದೂರಿದ್ದರು. ಮರುದಿನ ಅಭಿಷೇಕ್ ತಮ್ಮ ಮನೆ ಪಕ್ಕದ ಮರಕ್ಕೆ ನೇಣುಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಈ ಹಿನ್ನೆಲೆಯಲ್ಲಿ ಮೃತ ವಿದ್ಯಾರ್ಥಿಯ ತಂದೆ ಕಳಸಪ್ಪಗೌಡ ಅವರು ಪ್ರಾಂಶುಪಾಲರು, ಕಾಲೇಜಿನ ಆಡಳಿತಗಾರರು, ಅರ್ಜುನ್ ಮತ್ತು ಅಶ್ವಥ್ ಎಂಬ ವಿದ್ಯಾರ್ಥಿಯ ವಿರುದ್ಧ ದೂರು ನೀಡಿದ್ದಾರೆ. ಅಂದೇ ವಿದ್ಯಾರ್ಥಿಗಳು ಶೃಂಗೇರಿಯಲ್ಲಿ ಪ್ರತಿಭಟಿಸಿದ್ದು, ತಾವು ಸ್ಥಳಕ್ಕೆ ತೆರಳಿ ಜ.19ರೊಳಗೆ ಕ್ರಮದ ಭರವಸೆ ನೀಡಿದ್ದಾಗಿ ತಿಳಿಸಿದರು.

ಆದರೆ ಮರುದಿನ ನಗರವೂ ಸೇರಿದಂತೆ ಜಿಲ್ಲೆಯ ಕೆಲವು ಕಡೆ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅದರೊಂದಿಗೆ ಜ.17ರಂದು ಶೃಂಗೇರಿಯಲ್ಲಿ ವಿದ್ಯಾರ್ಥಿಗಳು ಯುವಶಕ್ತಿ ಜಾಗೃತಿ ಹೆಸರಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು ಚಕ್ರವರ್ತಿ ಸೂಲಿಬೆಲೆ ಭಾಗಿಯಾಗಿದ್ದಾರೆ. ಜ.18 ರಂದು ಅದೇ ಸಂಘಟನೆ ಮೂಡಿಗೆರೆಯಲ್ಲಿ ಪ್ರತಿಭಟನೆ ನಡೆಸಿದೆ. ಅಂದೇ ತಾವು ಜೆಸಿಬಿಎಂ ಕಾಲೇಜಿಗೆ ತೆರಳಿ ಪ್ರಕರಣದ ಬಗ್ಗೆ ಪೊಲೀಸರು ತೆಗೆದುಕೊಂಡಿರುವ ಕ್ರಮದ ಬಗ್ಗೆ ಮನವರಿಕೆ ಮಾಡಿದ್ದಾಗಿ ತಿಳಿಸಿದರು.

ಅದೇ ದಿನ 17 ಮಂದಿ ಎಬಿವಿಪಿ ಕಾರ್ಯಕರ್ತರು ಕೆಲವು ಕಾಲೇಜುಗಳಿಗೆ ತೆರಳಿ ಬಲಾತ್ಕಾರವಾಗಿ ಕಾಲೇಜ್ ಬಂದ್‌ಗೊಳಿಸಲು ಪ್ರಯತ್ನಿಸಿ ಧರಣಿ ನಡೆಸಿದರು. ಈ ಹಿನ್ನೆಲೆಯಲ್ಲಿ ಬಸವನಹಳ್ಳಿ ಠಾಣೆಯಲ್ಲಿಮೊಕದ್ದಮೆ ದಾಖಲಿಸಿ ಠಾಣಾ ಜಾಮೀನಿನಡಿ ಬಿಡುಗಡೆ ಮಾಡಲಾಗಿತ್ತು. ಜ.19 ರಂದು ತಾವು ನಗರದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಅಭಿಷೇಕ್ ಸಾವಿನ ಪ್ರಕರಣ ಹಾಗೂ ಆ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡಿರುವ ಕ್ರಮ ವಿವರಿಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದಾಗಿ ವಿವರಿಸಿದರು.

ಅಭಿಷೇಕ್ ಪ್ರಕರಣದಲ್ಲಿ ಕಳಸಪ್ಪಗೌಡ 4 ಮಂದಿ ವಿರುದ್ಧ ದೂರು ನೀಡಿದ್ದಾರೆ. ಎಬಿವಿಪಿ 10 ಮಂದಿಯ ಮತ್ತು ಎನ್‌ಎಸ್‌ಯುಐ 8 ಮಂದಿಯ ವಿರುದ್ಧ ದೂರು ನೀಡಿದ್ದು ಒಟ್ಟು ಈ ಪ್ರಕರಣದಲ್ಲಿ 22 ಮಂದಿ ಇದ್ದಾರೆ. ಸಾಕ್ಷ್ಯಾಧಾರಗಳಿಲ್ಲದಿರುವ ಹಿನನೆಲೆಯಲ್ಲಿ ಅವರೆಲ್ಲರನ್ನೂ ಬಂಧಿಸಲು ಸಾಧ್ಯವಿಲ್ಲ. ಆತ್ಮಹತ್ಯೆ ಪ್ರಚೋದನೆ ಕುರಿತಂತೆ ಸುಪ್ರೀಂಕೋರ್ಟ್ ಸೂಚನೆಯಂತೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನೇರಪಾತ್ರ ಅಥವಾ ನೇರ ಸಹಾಯ ಎಂಬ ಅಂಶವಿಲ್ಲದಿದ್ದರೆ ಅಂತಹವರನ್ನು ಬಂಧಿಸಲು ಅವಕಾಶವಿಲ್ಲ ಎಂದು ನುಡಿದರು.

ಕೆಲವೆಡೆ ರಾತ್ರಿ ಬೈಕಿನಲ್ಲಿ ಏರಿದ ವಿದ್ಯಾರ್ಥಿಗಳು ಕೆಲವು ಕಾಲೇಜುಗಳಿಗೆ ಕಲ್ಲು ಹೊಡೆದು ಗಾಜು ಒಡೆದಿದ್ದಾರೆ. ಆ ಬಗ್ಗೆ ಸಿ.ಸಿ.ಕ್ಯಾಮೆರಾ ದೃಶ್ಯ ದೊರೆತ್ತಿದೆ. ಅಂತಹವರ ವಿರುದ್ದ ಕ್ರಮ ಜರುಗಿಸಲಾಗುವುದು. ತಾವು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸ್ನೇಹ ಸಂಬಂಧ ಹೊಂದುವುದರ ದುರ್ಬಳಕೆ ನಡೆದರೆ ಸಹಿಸುವುದಿಲ್ಲ ಎಂದು ತಿಳಿಸಿದರು.

ಎಬಿವಿಪಿ ಮುಖಂಡರು ಅಭಿಷೇಕ್ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿ ಸರಕಾರ ಮತ್ತು ಪೊಲೀಸರಿಗೆ 48 ಗಂಟೆಗಳ ಗಡುವು ನೀಡಿದ್ದಾರೆ. ಹಾಗೆ ಗಡುವು ನೀಡುವುದು ಖಂಡನಾರ್ಹ. ಸಂವಿಧಾನ ಹಕ್ಕನ್ನು ದುರ್ಬಳಕೆ ಮಾಡಿಕೊಂಡರೆ ವಿದ್ಯಾರ್ಥಿಗಳು ಎಂಬುದನ್ನು ಮರೆತು ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಕೆಲವು ಪೂರ್ಣಾವಧಿ ಕಾರ್ಯರ್ತರು ವಿದ್ಯಾರ್ಥಿ ಮುಖವಾಡ ಧರಿಸಿ ತಾವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದಾಗಿ ಪ್ರತಿಪಾದಿಸುತ್ತಾ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುತ್ತಿದ್ದಾರೆ.

ಅಭಿಷೇಕ್ ಮೊಬೈಲ್ ಲಾಕ್ ತೆರೆಯಲು ಸಾಧ್ಯವಿಲ್ಲದರಿಂದ  ವಾಟ್ಸ್‌ಅಪ್ ಬಗ್ಗೆ ವಿವರ ತಿಳಿಯಲು ಹೈದರಾಬಾದ್‌ಗೆ ಸೆಟ್ ಕಳುಹಿಸಲಾಗಿದೆ. ಆತನ ಮೊಬೈಲ್ ಮೂಲಕ ಮಾತಾಡಿದವರನ್ನು ಕರೆಸಿ ವಿವರ ಪಡೆಯಲಾಗಿದೆ. ಎಲ್ಲಿಯೂ ಆತನ ಆತ್ಮಹತ್ಯೆಗೆ ಪ್ರಚೋದನೆ ಕಂಡುಬಂದಿಲ್ಲ. ಈ ಎಲ್ಲಾ ಮಾಹಿತಿಗಳನ್ನು ವಿವರಿಸಿದ್ದರೂ ವಿದ್ಯಾರ್ಥಿಗಳ ಮುಖವಾಡ ಧರಿಸಿ ಕಾಲೇಜಿನ ತರಗತಿಗಳಲ್ಲಿರುವ ವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ.

ಮೊನ್ನೆ ಬಂಧನಕ್ಕೆ ಒಳಗಾದ ವಿದ್ಯಾರ್ಥಿಗಳ ವಿರುದ್ಧ ಆಲ್ದೂರು ಭಾಗದಲ್ಲೂ ಕೆಲವು ಪ್ರಕರಣಗಳಿದ್ದು, ಅಪರಾಧಗಳಲ್ಲಿ ಭಾಗಿಗಳಾಗುವುದನ್ನು ಚಾಳಿಮಾಡಿಕೊಂಡಿರುವ ಮಾಹಿತಿಯೂ ಇದೆ. ಅವರುಗಳು ಎಚ್ಚರ ತಪ್ಪಿದರೆ ವಿದ್ಯಾರ್ಥಿ ಬದುಕಿನ ನಂತರ ತೊಂದರೆ ಎದುರಿಸಬೇಕಾಗುತ್ತದೆ. ವೊಕದ್ದಮೆಗಳು ದಾಖಲಾದರೆ ಮುಂದೆ ಸರಕಾರಿ ಮಾತ್ರವಲ್ಲ, ಖಾಸಗಿ ಉದ್ಯೋಗ ಸಿಗುವುದಿಲ್ಲ. ಪಾಸ್ ಪೋರ್ಟ್, ವೀಸಾ ದೊರೆಯುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ನೆನಪಿಡಬೇಕು

-ಕೆ.ಅಣ್ಣಾಮಲೈ, ಎಸ್ಪಿ, ಚಿಕ್ಕಮಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News