ಪಕ್ಷದ ವತಿಯಿಂದ ಬರ ಪರಿಹಾರ ಕಾರ್ಯ ರೂಪುರೇಷೆ ಸಿದ್ದ: ಬಿಎಸ್ ವೈ

Update: 2017-01-22 09:36 GMT

ಕಲಬುರಗಿ, ಜ.22: ರಾಜ್ಯದಲ್ಲಿ  ಭೀಕರ ಬರ ಸ್ಥಿತಿ ಇರುವ ಕಾರಣ ಈಗಾಗಲೇ 139 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇನ್ನೂ 25 ತಾಲೂಕುಗಳು ಶೀಘ್ರ ಘೋಷಣೆಯಾಗಲಿದೆ. ಈಗಾಗಲೇ ಪಕ್ಷದ ವತಿಯಿಂದ  ಕಲಬುರಗಿ ದಕ್ಷಿಣ ಕ್ಷೇತ್ರದ ಬೋಸಗ ಕೆರೆಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತೀ ಕ್ಷೇತ್ರದಲ್ಲಿ ಶ್ರೀಮಂತರು, ಮಠಾಧೀಶರುಗಳ ಸಹಯೋಗದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಕಲಬುರಗಿಯಲ್ಲಿ ಹೇಳಿದರು.

ಪಕ್ಷದ ವತಿಯಿಂದ ಬರ ಪರಿಹಾರ ಕಾರ್ಯದ ರೂಪುರೇಷೆಯನ್ನು ಅವರು ಸಭೆಯಲ್ಲಿ ಮಂಡಿಸಿದರು. ಬಿಜೆಪಿಯ 5 ರಾಜ್ಯ ಸಭಾ ಸದಸ್ಯರು 1ಕೋಟಿ ನೀಡಲು ಒಪ್ಪಿದ್ದು, ಅದರಂತೆ ಇತರ ಎಂಪಿಗಳಿಗೂ, ಶಾಸಕರು 25 ಲಕ್ಷ ಕೊಡಲು ಒಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಹಕಾರ ನೀಡಲು ಸಿದ್ಧರಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. 

ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಶ್ರೀಮಂತರಿಂದ 10 ಲಕ್ಷ ರೂ.ಸಂಗ್ರಹಿಸಿ ಪರಿಹಾರ ಕೈಗೊಳ್ಳಬೇಕು. ನಾವು ಸರಕಾರದಲ್ಲಿದ್ದಾಗ ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿದ್ದೆವು. ಇನ್ನೂ ಮೂರು ತಿಂಗಳು ವಿಧಾನಸಭೆ ,ಲೋಕಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ವಿರೋಧ ಪಕ್ಷದ ನಾಯಕರು ಡಿ.ಸಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಜನರಿಗೆ ಭರವಸೆ ನೀಡಿದರು. 

ರಮೇಶ್ ಜಿಗಜಿಣಗಿ ಅವರ ಸಮಾರೋಪ ಭಾಷಣ ಮತ್ತು ಶ್ರೀ ಬಿ.ಎಸ್ ಯಡಿಯೂರಪ್ಪ ಅವರ ಅಧ್ಯಕ್ಷೀಯ ಭಾಷಣದೊಂದಿಗೆ ಕಲಬುರಗಿಯಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ತೆರೆ ಬಿತ್ತು. ಮುಂದಿನ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮೈಸೂರಿನಲ್ಲಿ ಮೇ 6,7ರಂದು ನಿಗದಿಯಾಗಿದೆ.                                           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News