ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳಿಗೆ ಕೊಳೆತ ತರಕಾರಿ ವಿತರಣೆ : ಆರೋಗ್ಯದಲ್ಲಿ ಏರುಪೇರು

Update: 2017-01-22 16:38 GMT

ಸಿದ್ದಾಪುರ, ಜ.22: ಕಳೆದ ಒಂದು ತಿಂಗಳಿನಿಂದ ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಇತ್ತೀಚಿಗೆ ಒಬ್ಬರು ಹೃದಯಾಘಾತದಿಂದ ಮೃತಪಟ್ಟರೆ ಇನ್ನೂ 5ಕ್ಕೂ ಹೆಚ್ಚು ಮಂದಿ ವಾಂತಿ ಭೇದಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಿದ್ದಾಪುರ ಹಾಗೂ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕೆಲವರಿಗೆ ಜ್ವರ ಕಾಣಿಸಿಕೊಂಡು ಚೇತರಿಸಿಕೊಂಡಿದ್ದಾರೆ. ಆದಿವಾಸಿಗಳ ತಾತ್ಕಾಲಿಕ ವ್ಯವಸ್ಥೆಗೆ ಒಂದು ಕೋಟಿ ರೂ ಬಿಡುಗಡೆ ಮಾಡಿದ್ದು, ಆದರೆ ಜಿಲ್ಲಾಡಳಿತ ಉತ್ತಮ ಆಹಾರ ನೀಡಲು ವಿಫಲವಾಗಿದೆ ಎಂದು ಗಿರಿಜನ ಮುಖಂಡ ಸ್ವಾಮಿ ಆರೋಪಿಸಿದ್ದಾರೆ.

 ಆರಂಭದಲ್ಲಿ ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ಆಹಾರದ ವ್ಯವಸ್ಥೆ ಮಾಡಿದರೂ ನಂತರದ ದಿನಗಳಲ್ಲಿ ಸ್ಥಗಿತಗೊಳಿಸಿ ಅಕ್ಕಿ, ತರಕಾರಿ ಸೇರಿದಂತೆ ಹಲವು ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದು, ಕೆಲವು ಪದಾರ್ಥಗಳ ಪೊಟ್ಟಣದಲ್ಲಿ ಯಾವುದೇ ಮುದ್ರಿತ ವಿವರಣೆಗಳಿಲ್ಲದೆ ಕಳಪೆ ಗುಣ ಮಟ್ಟದಿಂದ ಕೂಡಿದೆ. ಇದೀಗ ಆಲೂಗಡ್ಡೆ, ಬೀಟ್ರೂಟ್ ಸೇರಿದಂತೆ ತರಕಾರಿಗಳು ಕೊಳತೆ ಸ್ಥಿತಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದ್ದು, ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕೆಂದು ಆದಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲೇ ನಿವೇಶನ ನೀಡಲು ಕಾನೂನು ತೊಡಕಿಲ್ಲ

ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರಿಗೆ ತಿಂಗಳುಗಳೇ ಕಳೆದರೂ ಶಾಶ್ವತ ನಿವೇಶನ ದೊರೆಯಲಿಲ್ಲ. ಗುಡಿಸಲು ತೆರವುಗೊಳಿಸಿದ ಸ್ಥಳ ಪೈಸಾರಿ ಜಾಗ ಎಂದು ದಾಖಲೆಯಲ್ಲಿ ಇರುವುದರಿಂದ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿ ನಿವೇಶನ ನೀಡಬೇಕೆಂದು ಹಿರಿಯ ಹೋರಾಟಗಾರ ಎ.ಕೆ ಸುಬ್ಬಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
 

ರವಿವಾರ ದಿಡ್ಡಳ್ಳಿ ನಿರಾಶ್ರಿತರ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಹಿಂದೆ ಜಿಲ್ಲೆಗೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ದಿಡ್ಡಳ್ಳಿಯಲ್ಲಿ ಕಾನೂನು ತೊಡಕುಗಳು ಇಲ್ಲದಿದ್ದರೆ ಅಲ್ಲಿಯೇ ನಿವೇಶನ ನೀಡಲಾಗುವುದು. ತೊಡಕುಗಳು ಇದ್ದಲ್ಲಿ ಬೇರೆ ಕಡೆ ಜಾಗ ಗುರುತಿಸಿ ನಿವೇಶನ ನೀಡಲಾಗುವುದು ಹಾಗೂ ತಾತ್ಕಾಲಿಕ ಸೌಲಭ್ಯಕ್ಕಾಗಿ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು ಎಂದು ಹೇಳಿದರು . 

ದಿಡ್ಡಳ್ಳಿಯಲ್ಲಿ ಇರುವುದು ಪೈಸಾರಿ ಜಾಗವೇ ಹೊರತು ಅರಣ್ಯ ಜಾಗವಲ್ಲ. ತೊಡಕುಗಳು ಇದ್ದಲ್ಲಿ ನಿವಾರಣೆ ಮಾಡಿ ದಿಡ್ಡಳ್ಳಿಯಲ್ಲೇ ನಿವೇಶನ ಕೊಡಬೇಕು. ಈ ಭಾಗದ ಸುತ್ತಮುತ್ತಲಿನಲ್ಲಿ ಸಾಕಷ್ಟು ಕಾಫಿ ತೋಟಗಳು, ಮನೆ, ಆಶ್ರಮ ಶಾಲೆ, ವಿಧ್ಯುತ್, ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳು ಇಲ್ಲಿರುವಾಗ ಆದಿವಾಸಿಗಳಿಗೆ ಮಕ್ಕಳ ಮುಂದಿನ ಭವಿಷ್ಯ ಹಾಗೂ ಅವರ ಅಭಿವೃದ್ಧಿಗೆ ದಿಡ್ಡಳ್ಳಿಯೇ ಸೂಕ್ತವಾಗಿದೆ. ಎಲ್ಲಾ ವ್ಯವಸ್ಥೆಗಳು ಇಲ್ಲಿ ಇರುವಾಗ ಅರಣ್ಯ ಪ್ರದೇಶವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಿರಾಶ್ರಿತರಿಗೆ ಇಲ್ಲಿಯೇ ನಿವೇಶನ ಒದಗಿಸಲಿ ಹಾಗೂ ಜಿಲ್ಲೆಯಲ್ಲಿರುವ ಇತರ ನಿವೇಶನ ರಹಿತ ಆದಿವಾಸಿಗಳಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುತಿಸಿರುವ ಸ್ಥಳಗಳನ್ನು ಅಲ್ಲಿಯ ಸ್ಥಳೀಯ ಆದಿವಾಸಿಗಳಿಗೆ ನೀಡಬೇಕೆಂದರು.

    ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಎಲ್ಲಾ ನಿವೇಶನ ರಹಿತರಿಗೂ ಜಾಗ ಸಿಗಬೇಕೆಂದು ಹೋರಾಟ ಮಾಡುತ್ತಿದ್ದು, ಇದನ್ನು ಸಹಿಸದ ಕೆಲವರು ಇಲ್ಲಸಲ್ಲದ ಅಪಪ್ರಚಾರ ನಡೆಸಿ ಆದಿವಾಸಿಗಳಿಗೆ ಸಿಗಬೇಕಾದ ಸೌಲಭ್ಯವನ್ನು ಸಿಗದಂತೆ ಮಾಡುತ್ತಿದ್ದಾರೆ. ಆದಿವಾಸಿಗಳು ಪೊಳ್ಳು ಭರವಸೆಯ ಮಾತುಗಳಿಗೆ ಮರಳಾಗದೆ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಂದೆ ಬರಬೇಕೆಂದು ಕಿವಿ ಮಾತು ಹೇಳಿದರು.

     ಸರಕಾರ ಆದಿವಾಸಿಗಳಿಗೆ ಸೌಲಭ್ಯ ನೀಡಲು ಮುಂದಾಗಿದ್ದು, ಜಿಲ್ಲೆಯ ಅಧಿಕಾರಿಗಳು ಕೆಲ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಪ್ಪು ಮಾಹಿತಿ ನೀಡುವ ಮೂಲಕ ಸರಕಾರವನ್ನು ಧಿಕ್ಕು ತಪ್ಪಿಸುತ್ತಿದ್ದಾರೆ. ಕೆಲವು ಹೊಟ್ಟೆಪಾಡಿನ ಸಂಘಟನೆಗಳು ದಿಡ್ಡಳ್ಳಿಯಲ್ಲಿ ನಕ್ಸಲರಿದ್ದಾರೆ ಹಾಗೂ ನಿರಾಶ್ರಿತರು ಹೊರ ಜಿಲ್ಲೆಯವರು ಮತ್ತು ಅಸ್ಸಾಂ ರಾಜ್ಯದಿಂದ ಬಂದವರು ಎಂಬ ಸುಳ್ಳುಗಳನ್ನು ಹೇಳಿ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳಿಗೆ ಎಂದೂ ಜಯ ಸಿಗಲ್ಲ ಆದಿವಾಸಿಗಳ ನ್ಯಾಯವಾದ ಹೋರಾಟಕ್ಕೆ ಜಯ ಸಿಗಲಿದೆ ಎಂದು ಅಭಿಪ್ರಯಾಪಟ್ಟರು .

 1067ಎ ಸರ್ವೆ ಸಂಖ್ಯೆಯ 8559 ಏಕರೆ ಜಾಗ ಸೇರಿದಂತೆ ಸುತ್ತಮುತ್ತಲಿನ ವಿವಿಧ ಸರ್ವೆ ಸಂಖ್ಯೆಗಳಲ್ಲಿ 500ಕ್ಕಿಂತ ಹೆಚ್ಚು ಏಕರೆ ಜಾಗದಲ್ಲಿ ಮರಗಿಡಗಳನ್ನು ನಡಲು ಅರಣ್ಯ ಇಲಾಖೆಗೆ 1999 ರಲ್ಲಿ ಹಸ್ತಾಂತರಿಸಿದರು. ಅಲ್ಲಿಯವರೆಗೆ ಸದರಿ ಜಾಗ ಪೈಸಾರಿಯಾಗಿತ್ತು ಎಂದು ಮಾಹಿತಿ ನೀಡಿದ ಅವರು, ದಿಡ್ಡಳ್ಳಿಯಲ್ಲಿ ನಿವೇಶನ ನೀಡಲು ಯಾವುದೇ ತೊಡಕುಗಳು ಇರುವುದಿಲ್ಲ. ಇದರ ಬಗ್ಗೆ ಕಂದಾಯ ಸಚಿವರ ಜೊತೆ ಮಾತನಾಡಿದ್ದು, ಕಾನೂನು ತೊಡಕುಗಳು ಇಲ್ಲದಿದ್ದರೆ ಅಲ್ಲಿಯೇ ಕೊಡಬಹುದು ಎಂದಿದ್ದಾರೆ. ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ಸಮಾಜ ಕಲ್ಯಾಣ ಹಾಗೂ ಕಂದಾಯ ಸಚಿವರು ಸೇರಿ ಮುಂದಿನ ದಿನದಲ್ಲಿ ಸಭೆ ಸೇರಲಿದ್ದು, ದಿಡ್ಡಳ್ಳಿಯಲ್ಲೇ ನಿವೇಶನ ಸಿಗುವ ವಿಶ್ವಾಸವಿದೆ ಎಂದು ಎಂದು ಹೇಳಿದರು.

 ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ, ಕಾಂಗ್ರಸ್ ಮುಖಂಡ ಸಂದೀಪ್ ಗಿರಿಜನ ಮುಖಂಡರಾದ ಅಪ್ಪಾಜಿ, ಮುತ್ತಮ್ಮ, ಸ್ವಾಮಿ, ಅನಿತಾ ಸೇರಿದಂತೆ ಮತ್ತಿತರರು ಇದ್ದರು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News