ಪಿಎಫ್‌ಐ ರಾಜ್ಯಾಧ್ಯಕ್ಷರಾಗಿ ಮುಹಮ್ಮದ್ ಶಾಕಿಬ್ ಆಯ್ಕೆ

Update: 2017-01-22 16:28 GMT

ಮಂಗಳೂರು, ಜ. 22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮುಹಮ್ಮದ್ ಶಾಕಿಬ್ ಆಯ್ಕೆಯಾಗಿದ್ದಾರೆ.

 ಮಿತ್ತೂರಿನ ಫ್ರೀಢಂ ಕಮ್ಯುನಿಟಿ ಹಾಲ್‌ನಲ್ಲಿ ಜ.20, 21, 22ರಂದು ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ನಾಸಿರ್ ಪಾಷ, ಪ್ರಧಾನ ಕಾರ್ಯದರ್ಶಿಯಾಗಿ ಯಾಸಿರ್ ಹಸನ್, ಕಾರ್ಯದರ್ಶಿಯಾಗಿ ಇಬ್ರಾಹೀಂ ಮಜೀದ್ ತುಂಬೆ ಮತ್ತು ಕೋಶಾಧಿಕಾರಿಯಾಗಿ ಫಾರೂಕುರ್ರಹ್ಮಾನ್ ಮೈಸೂರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಪುತ್ತೂರು, ಶರೀಫ್ ಕೊಡಾಜೆ, ಇಕ್ಬಾಲ್ ನಂದರಬೆಟ್ಟು, ರಿಯಾಝ್ ಪಾಷ, ಅಯ್ಯೂಬ್ ಅಗ್ನಾಡಿ, ಸಿದ್ಧೀಕ್ ಜಿ.ಎಸ್., ಅನ್ವರ್ ಸಾದತ್, ಅಬ್ದುಲ್ ರಝಾಕ್ ಕೆಮ್ಮಾರ, ಶಾಫಿ ಬೆಳ್ಳಾರೆ, ಮುಹಮ್ಮದ್ ವಳವೂರು ಆಯ್ಕೆಯಾದರು.

  ಎಸ್‌ಜಿಎ ಯು ಸಂಘಟನೆಯ 2016ನೇ ಸಾಲಿನ ಕಾರ್ಯಚಟುವಟಿಕೆಗಳ ಅವಲೋಕನ ನಡೆಸಿತು ಮತ್ತು ಸಂಘಟನೆಯ ಬೆಳವಣಿಗೆ ಮತ್ತು ಅಭಿವೃದ್ಧಿಯ ಕುರಿತಂತೆ ವಿವಿಧ ಚರ್ಚೆಗಳು ನಡೆದವು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆಯ ನಿರ್ಣಯಗಳು

    1.ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತಿತರ ಕರಾಳ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು  . ದೇಶದಲ್ಲಿ ಯುಎಪಿಎಯಂತಹ ಕಾನೂನುಗಳು ಕೇವಲ ಮುಸ್ಲಿಮ್, ದಲಿತ ಸಮುದಾಯಗಳ ಮತ್ತು ಮಾನವಹಕ್ಕು ಹೋರಾಟಗಾರರ ವಿರುದ್ಧ ದುರ್ಬಳಕೆಯಾಗುತ್ತಿದೆ. ದಕ್ಷಿಣ ಭಾತರದಲ್ಲಿ ಅದರಲ್ಲೂ ರಾಜ್ಯದ ಬೆಂಗಳೂರು, ಮೈಸೂರು ಮುಂತಾದ ಪ್ರದೇಶಗಳಲ್ಲಿ ಸಾಮಾನ್ಯ ಅಪರಾಧದಲ್ಲೂ ಮುಸ್ಲಿಮ್ ಅರೋಪಿಗಳ ಮೇಲೆ ನಿರ್ದಯವಾಗಿ ಈ ಕಾನೂನನ್ನು ಉಪಯೋಗಿಸುವುದು ಆತಂಕಕಾರಿಯಾಗಿದೆ.

 2008,2011 ಮತ್ತು 2013 ರಲ್ಲಿನ ತಿದ್ದುಪಡಿಗಳು ಯುಎಪಿಎ ಗೆ ದೇಶದ ಕಾನುನೂ ವ್ಯವಸ್ಥೆಯಲ್ಲಿ ಶಾಶ್ವತ ರೂಪ ನೀಡಿದೆ. ಇಂತಹ ಕಾನೂನುಗಳ ವಿರುದ್ಧ ಧ್ವನಿಯತ್ತುವವರನ್ನು ಸರ್ಕಾರಿ ಯಂತ್ರಗಳನ್ನು ಉಪಯೋಗಿಸಿ ಹತ್ತಿಕ್ಕಲಾಗುತ್ತದೆ. ಯುಎಪಿಎ ಸೇರಿದಂತೆ ಎಲ್ಲ ಕರಾಳ ಕಾನೂನುಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕೆಂದು ರಾಜ್ಯ ಪ್ರತಿನಿಧಿ ಸಭೆಯು ಒತ್ತಾಯಿಸುತ್ತದೆ.

     2. ನೋಟು ರದ್ದತಿ ಅತ್ಯಂತ ಜನವಿರೋಧಿ : ನವೆಂಬರ್ 8 , 2016 ರಂದು ದೇಶದ ಜನತೆಯ ಮುಂದೆ ಪ್ರಧಾನಿ ಮೋದಿಯವರು 500- 1000 ರೂ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಮುಂದಿನ 50 ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯುದೆಂದು ಹೇಳಿದ್ದಾರೆ. ಆದರೆ ಇಂದಿಗೆ 74 ದಿನಗಳು ಕಳೆದರೂ ಯಾವುದೇ ರೀತಿಯ ಪರಿಹಾರವು ಕಂಡು ಬರದೆ ಇರುವುದು ಅತ್ಯಂತ ಶೋಚನೀಯವಾಗಿದೆ. ಬಡ ಮಧ್ಯಮ ವರ್ಗದ ದುಡಿಮೆಯ ಹಣವನ್ನು ಮೋದಿ ಸರ್ಕಾರ ಲೂಟಿ ಮಾಡಿದೆ. ರೈತರು, ಸಣ್ಣ ಪುಟ್ಟ ವ್ಯಾಪರಿಗಳು ಸಂಪೂರ್ಣವಾಗಿ ಕಂಗಲಾಗಿದ್ದಾರೆ. ನೂರಕ್ಕೂ ಮಿಕ್ಕಿ ಜೀವಗಳು ಬಲಿಯಾಗಿದೆ. ಅಪಮೌಲ್ಯಗಳಿಂದ ನೋಟುಗಳು ಎಷ್ಟು ವಾಪಸ್ ಬಂದಿದೆಯೆಂದು ಆರ್ ಬಿ ಐ ಇಷ್ಷರವರೆಗೆ ನಿಖರವಾಗಿ ಹೇಳಿಲ್ಲ .

ಆರ್ ಬಿ ಐ ಒಂದು ಸ್ವಾಯತ್ತೆ ಸಂಸ್ಥೆಯಾಗಿದ್ದು ಇದೀಗ ಕೇಂದ್ರ ಬಿಜೆಪಿ ಸರ್ಕಾರ ಅದರಲ್ಲೂ ತನ್ನ ಸರ್ವಾಧಿಕಾರಿ ದರ್ಪವನ್ನು ಪ್ರದರ್ಶಿಸಿದೆ. 500 ಮತ್ತು 1000 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳು ದೇಶದಲ್ಲಿ 86 % ಇದ್ದು ನೋಟು ರದ್ದತಿಯ ದಿನ ಕೇವಲ 6 % ಮಾತ್ರವೇ 2000 ಮುಖಬೆಲೆಯ ಹೊಸ ನೋಟು ಮಾತ್ರವೇ ತಯಾರಿದ್ದು ಇದು ಸಕಾರದ ಪೂರ್ವ ತಯಾರಿಯ ನಿರ್ಲರ್ಕ್ಷ್ಯವನ್ನು ತೋರಿಸುತ್ತಿದೆ. ನೋಟು ರದ್ದತಿ ಮೂಲಕ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವುದೆಂದು ಘೋಷಿಸಿದ ಪ್ರಧಾನ ಮಂತ್ರಿಗಳು ನಂತರ  ಕ್ಯಾಶ್‌ಲೆಶ್ ಎಕಾನಮಿಗೆ ಉಲ್ಟಾ ಹೊಡೆದಿದ್ದು ದೇಶದ ಜನರನ್ನು ಮೂರ್ಖಗೊಳಿಸಿದ್ದಾರೆ.

ಸ್ವಿಸ್ ಬ್ಯಾಂಕ್ ಕಪ್ಪು ಹಣದ ಕುಳದ 685 ಜನರ ಹೆಸರಿನ ಪಟ್ಟಿಯನ್ನು ನೀಡಿದ್ದರೂ, ಇದುವರೆಗೂ ಯಾವುದೇ ಒರ್ವನ ಕಪ್ಪುಹಣ ದೇಶಕ್ಕೆ ಮರಳಿಬಂದಿಲ್ಲ. ಆದರೆ ಬಡ ಜನರ ಹಣವನ್ನು ಬಲವಂತವಾಗಿ ಕೈವಶಪಡಿಸಿಕೊಂಡ ಮೋದಿ ಸರ್ಕಾರ ತನ್ನ ದುಷ್ಟತನವನ್ನು ಪ್ರಕಟಿಸಿದೆ. ಕಪ್ಪುಹಣವನ್ನು ಹೊಂದಿದ ಮಂದಿ ಬ್ಯಾಂಕ್ ಅಧಿಕಾರಿಗಳ ಮೂಲಕವೇ ತಮ್ಮ ಹಣವನ್ನು ಬಿಳಿಯಾಗಿಸಿಕೊಂಡಿದ್ದಾರೆ ಮತ್ತು ಸಹಕಾರಿ ಬ್ಯಾಂಕ್ ಮೂಲಕವು ಬದಲಾವಣೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ ಅಕ್ರಮ ಬದಲಾವಣೆಯಲ್ಲಿ ಖುದ್ದು ಆರ್‌ಬಿಐ ನ 51 ನೌಕರರು ಸಿಕ್ಕಿಬಿದ್ದಿದ್ದಾರೆ. ಮೋದಿ ಸರ್ಕಾರವು ವಿಧಿಸಿದ ಆನ್ ಲೈನ್ ವಹಿವಾಟು ಶುಲ್ಕ, ಕ್ರೆಡಿಟ್/ಡೆಬಿಟ್ ಕಾರ್ಡ್ ಶುಲ್ಕ ಬಡವರಿಗೆ ಹೊರೆಯಾಗಿದೆ. ಕಪ್ಪುಹಣವನ್ನು ಘೋಷಿಸಿದವರಿಗೆ 50% ತೆರಿಗೆ ಪಾವತಿ ಮಾಡಿ ಎಂದು ಹೇಳಿರುವುದು ಇನ್ನೊಂದು ಬ್ರಷ್ಟಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ. ಒಟ್ಟಿನಲ್ಲಿ ಸ್ವತಂತ್ರ ಇಂಡಿಯಾದಲ್ಲಿ ಇಲ್ಲಿಯವರೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಹಗರಣವು ನಡೆದಿಲ್ಲ. ಮಾತ್ರವಲ್ಲ ದೇಶದ ಆರ್ಥಿಕ ಸ್ಥಿತಿಯು ಅತ್ಯಂತ ದಾರುಣ ಪರಿಸ್ಥಿತಿಯನ್ನು ಕಂಡಿದೆ. ರಾಜ್ಯ ಪ್ರತಿನಿಧಿ ಸಭೆಯು ಇದನ್ನು ಅತ್ಯಂತ ತೀಕ್ಷ್ಣವಾಗಿ ಖಂಡಿಸುತ್ತದೆ.

   3. ಮುಂಬರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 10000 ಕೋಟಿ ಮೀಸಲಿಡಬೇಕು :

     ಸರಕಾರ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನುದಾನದ ಕೊರತೆಯಿಂದ ಯೋಜನೆಗಳು ಜನಸಾಮನ್ಯರಿಗೆ ತಲುಪುತ್ತಿಲ್ಲ . ಶಾದಿ ಭಾಗ್ಯ ಯೋಜನೆಯಡಿ ಕಳೆದ ಮೂರು ವರ್ಷಗಳ 27,000 ಅರ್ಜಿಗಳು ಪಾವತಿ ಮಾಡದೇ ಬಾಕಿ ಉಳಿದಿದೆ. ನವೋದಯ ಮಾದರಿಯಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಜಿಲ್ಲೆಗೊಂದರಂತೆ ಶಾಲೆಗಳನ್ನು ತೆರೆಯುದಾಗಿ ಘೋಷನೆಯಾಗಿದ್ದರೂ ಅನುದಾನದ ಕೊರತೆಯಿಂದ 2 ಜಿಲ್ಲೆಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಈ ರೀತಿ ಬಹುತೇಕ ಎಲ್ಲಾ ಯೋಜನೆಗಳು ಕೇವಲ ಆಶ್ವಾಸನೆ ಮಾತ್ರವಾಗಿ ಉಳಿದಿದೆ. ಆದುದರಿಂದ ಮುಂಬರುವ ಬಜೆಟ್‌ನಲ್ಲಿ ಸರಕಾರ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ 10000 ಕೋಟಿ ರುಪಾಯಿ ಮೀಸಲಿಡಬೇಕೆಂದು ರಾಜ್ಯ ಪ್ರತಿನಿಧಿ ಸಭೆ ಆಗ್ರಹಿಸುತ್ತದೆ.

    4.  ಅಕ್ರಮವಾಗಿ ಕಬಳಿಕೆಯಾಗಿರುವ ವಕ್ಫ್ ಭೂಮಿಯನ್ನು ತಕ್ಷಣವೇ ಸ್ವಾಧೀನಪಡಿಸಬೇಕು :

ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಕಬಳಿಕೆಯಾಗಿರುವ ವಕ್ಫ್ ಭೂಮಿಯನ್ನು ತಕ್ಷಣವೇ ಸ್ವಾಧೀನಪಡಿಸಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ರಾಜ್ಯ ಪ್ರತಿನಿಧಿ ಸಭೆ ಕರ್ನಾಟಕ ಸರಕಾರವನ್ನು ಆಗ್ರಹಿಸುತ್ತದೆ.  ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಸಮುದಾಯವಾದ ಮುಸ್ಲಿಂ ಸಮುದಾಯ ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿದ್ದು , ಸರಕಾರವು ಯಾವುದೇ ಫಲಫ್ರದ ಯೋಜನೆಗಳು ಜಾರಿಗೊಳಿಸಿರುವುದಿಲ್ಲ . ಇನ್ನೊಂದೆಡೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ವಿನಿಯೋಗಿಸಬೇಕಾದ ವಕ್ಪ್ ಆಸ್ತಿಯು ಕೆಲವೊಂದು ರಾಜಕೀಯ ಮತ್ತು ಪ್ರಭಾವಿ ನಾಯಕರು ಕಬಳಿಕೆಯಲ್ಲಿರುವುದು ದುರಂತವಾಗಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಕಿಸಿದಂತೆ 2 ವರ್ಷದೊಳಗೆ ಎಲ್ಲಾ ವಕ್ಫ್ ಭೂಮಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿತ್ತು. ಆದರೆ ಇದುವರೆಗೂ ಒಂದೇ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳದಿರುವುದು ವಚನಭ್ರಷ್ಟತೆಯಾಗಿದೆ. ಆದುದರಿಂದ ಸರಕಾರ ತಕ್ಷಣವೇ ಕಬಳಿಕೆಯಾಗಿರುವ ವಕ್ಪ್ ಭೂಮಿಯನ್ನು ಸ್ವಾಧೀನಪಡಿಸಿ ಮುಸ್ಲಿಮರ ಅಭಿವೃಧ್ದಿಗಾಗಿ ವಿನಿಯೋಗಿಸಬೇಕೆಂದು ಎಸ್ ಜಿ ಎ ಆಗ್ರಹಿಸುತ್ತದೆ.

      
5.ಎಂ. ಎಂ ಕಲ್ಬುರ್ಗಿ ಹತ್ಯೆ ಆರೋಪಿಗಳ ಪತ್ತೆಹಚ್ಚಲು ವಿಫಲವಾಗಿರುವುದು ದುರದೃಷ್ಟಕರ . 

ಕರ್ನಾಟಕ ಖ್ಯಾತ ಸಂಶೋಧಕರೂ, ವಿಚಾರವಾದಿಯೂ ಆಗಿದ್ದಂತಹ ಎಂ . ಎಂ ಕಲ್ಬುರ್ಗಿಯವರ ಹತ್ಯೆ ಆರೋಪಿಗಳನ್ನು ಇದುವರೆಗೂ ಪತ್ತೆಹಚ್ಚದಿರುವುದು ದುರದೃಷ್ಟಕರವಾಗಿದೆ. ಸರಕಾರ ಈ ವಿಚಾರವನ್ನು ಗಂಬೀರವಾಗಿ ಪರಿಗಣಿಸಬೇಕಾಗಿದೆ. ಇದೇ ರೀತಿ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯೆಯ ತನಿಖೆ ವಿಳಂಭವಾಗುತ್ತಿರುವ ಬಗ್ಗೆ ಬಾಂಬೈ ಹೈಕೋರ್ಟ್ ಕೂಡಾ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

ಈ ಪ್ರಕರಣಗಳು ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಬೆದರಿಕೆಯಾಗಿದ್ದು , ರಾಜ್ಯದಲ್ಲಿರುವ ಇನ್ನಿತರ ಹಲವಾರು ಪ್ರಗತಿಪರರ ಮೇಲೆ ಜೀವ ಬೆದರಿಕೆ ಇರುವುದನ್ನು ನಾವು ಅವಲೋಕಿಸುವಾಗ ದುಷ್ಟ ಶಕ್ತಿಗಳು ನಿರಾತಂಕವಾಗಿ ತಮ್ಮ ದುಷ್ಕೃತ್ಯಗಳನ್ನು ಮುಂದುವರಿಸುತ್ತಿರುವುದು ಕಂಡು ಬರುತ್ತಿದೆ. ಇದು ಅತ್ಯಂತ ಅಘಾತಕಾರಿ ಬೆಳವಣಿಗೆಯಾಗಿದೆ. ಸರಕಾರ ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಿ ಸಮಾಜದಲ್ಲಿ ಭಯಮುಕ್ತ ವಾತರವಣವನ್ನು ನಿರ್ಮಿಸುವ ಅಗತ್ಯವಿದೆ. ಎಂ ಎಂ ಕಲ್ಬುರ್ಗಿಯವರ ಹತ್ಯೆ ಆರೋಪಿಗಳನ್ನು ಇದುವರೆಗೂ ಪತ್ರೆ ಹಚ್ಚದಿರುವುದು ಸಮಾಜದ್ರೋಹಿಗಳಿಗೆ ಶ್ರೀರಕ್ಷೆಯಾಗಿದ್ದು ಸರಕಾರ ಈ ಕುರಿತು ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ರಾಜ್ಯ ಪ್ರತಿನಿದಿ ಸಭೆ ಆಗ್ರಹಿಸುತ್ತದೆ.
   

6.ಕಾರಾಗೃಹದಲ್ಲಿ ಕೈದಿಗಳ ಕೊಲೆ ಸರಕಾರವೇ ನೇರ ಹೊಣೆ

ಸರಕಾರದ ಅಧೀನದಲ್ಲಿರುವ ಕಾರಗೃಹದಲ್ಲಿ ಕೈದಿಗಳ ರಕ್ಷಣೆಯ ಹೊಣೆ ಸರಕಾರದ ಮೇಲಿದ್ದು ಜೈಲಿನ ಒಳಗಡೆ ಕೈದಿಗಳ ಕೊಲೆ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ಮೈಸೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಕಾವೂರು ಮುಸ್ತಫರವರ ಹತ್ಯೆಯು     ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು ಅತ್ಯಂತ ಹೆಚ್ಚು ಭದ್ರತೆಯಿರುವ ಜೈಲಿನಲ್ಲಿ ನಡೆದಿರುವ ಕೊಲೆಯಲ್ಲಿ ಅಧಿಕಾರಿಗಳ ಪಾತ್ರವಿರುವುದು ಅಥವಾ ನಿರ್ಕ್ಷ್ಯವಿರುವುದು ವಾಸ್ತವವಾಗಿದೆ.

ಆದುದರಿಂದ ಈ ಕೊಲೆಗೆ ಸರಕಾರವೇ ನೇರ ಹೊಣೆಯಾಗಿದ್ದು , ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿ ಒ ಡಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಮುಸ್ತಫಾ ಕುಟುಂಬಕ್ಕೆ 50ಲಕ್ಷ ಪರಿಹಾರ ನೀಡಬೇಕೆಂದೂ ರಾಜ್ಯದ ಎಲ್ಲಾ ಜೈಲುಗಳಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಕೈದಿಗಳ ಭದ್ರತೆಯ ಬಗ್ಗೆ ಖಾತರಿ ಪಡಿಸಬೇಕೆಂದು ಎಸ್ ಜಿ ಎ ಆಗ್ರಹಿಸುತ್ತದೆ

7.  ಸಾಚಾರ್ ವರದಿ ಮತ್ತು ರಂಗನಾಥ ಮಿಶ್ರಾ ವರದಿ ಜಾರಿಗೊಳಿಸಿ :

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು 14% ಅಂದಾಜು 1 ಕೋಟಿಯಷ್ಟು ಮುಸ್ಲಿಂ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವೆಂದು ಹಲವಾರು ವರದಿಗಳು ಬಹಿರಂಗ ಪಡಿಸಿದೆ. ರಾಜ್ಯದ ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿವವೆ ಎಂದು ಹಲವು ಹಿಂದುಳಿದ ಆಯೋಗಗಳು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ಮೂರು ವರ್ಷಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದ ವರ್ಗಾವಾರು ಫಲಿತಾಂಶ ಪರಿಶೀಲಿಸಿದರೆ ಸಾಮಾನ್ಯ ವರ್ಗಕ್ಕಿಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಫಲಿತಾಂಶ ಶೇ.10 ಷ್ಟು ಹಿಂದುಳಿದೆ. ಸರಕಾರಿ ಉದ್ಯೋಗ, ಬ್ಯಾಂಕ್ ಕ್ಷೇತ್ರ, ಕೈಗಾರಿಕಾ ಕ್ಷೇತ್ರದಲ್ಲಿ ಮತ್ತು ರಾಜಕೀಯ ಕ್ಷೇತರದಲ್ಲೂ ಮುಸ್ಲಿಮ್ ಸಮುದಾಯಕ್ಕೆ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇದೆ.

ಈ ಬಗ್ಗೆ ಕಾಂಗ್ರೆಸ್ ಪಕ್ಷ 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಮೊದಲ ಅಂಶವಾಗಿ ಘೋಷಣೆ ಮಾಡಿದ್ದು ನಾವು ಆಡಳಿತಕ್ಕೆ ಬಂದರೆ ರಾಜೇಂದರ್ ಸಾಚಾರ್ ವರದಿಯು ಮತ್ತು ರಂಗನಾಥ್ ಮಿಶ್ರ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಆದರೆ 3 ವರ್ಷ 8 ತಿಂಗಳಿಂದ ಯಾವುದೇ ಅಂಶಗಳು ಜಾರಿಗೆ ಜಾರಿಗೆ ಬಂದಿರುವುದಿಲ್ಲ. ಈ ಎಲ್ಲಾ ಅಂಶ ಪರಿಗಣಿಸಿ ರಾಜ್ಯದಲ್ಲಿ ರಾಜೇಂದ್ರ ಸಾಚಾರ್ ಮತ್ತು ರಂಗನಾಥ್ ಮಿಶ್ರ ವರದಿಯನ್ನು ಜಾರಿಗೆ ತರಬೇಕೆಂದು ಪಾಪ್ಯುಲರ್ ಫ್ರಂಟ್‌ನ ಎಸ್‌ಜಿಎ ಅಗ್ರಹಿಸುತ್ತದೆ.

   8.  ಆದಿವಾಸಿಗಳು ಮತ್ತು ವಸತಿ ರಹಿತರಿಗೆ ಪುನರ್ವಸತಿ ಕಲ್ಪಿಸಿ:

ರಾಜ್ಯಾದ್ಯಂತ ನೂರಾರು ವರ್ಷಗಳಿಂದ ಕಾಡಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಅದೇ ರೀತಿ ರಾಜ್ಯದಲ್ಲಿ ಲಕ್ಷಾಂತರ ವಸತಿ ರಹಿತ, ಭೂ ರಹಿತ ಬಡ ಕುಟುಂಬಗಳಿಗೆ ಸ್ವಾತಂತ್ಯ ಬಂದು 70 ವರ್ಷಗಳಾದರೂ ಭೂಮಿ ಮತ್ತು ವಸತಿ ಭಾಗ್ಯ ಸಿಕ್ಕಿರುವುದಿಲ್ಲ.  ರಾಜ್ಯ ಸರಕಾರ ಒಕ್ಕಲೆಬ್ಬಿಸುತ್ತಿರುವ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು, ಅಕ್ರಮ ಸಕ್ರಮ ಫಾರಂ 50,53,94C ಮತ್ತು 94CCಅರ್ಜಿಗಳನ್ನು 6 ತಿಂಗಳೊಳಗೆ ವಿಲೇವಾರಿ ಮಾಡಿ ಹಕ್ಕು ಪತ್ರಗಳನ್ನು ನೀಡಬೇಕೆಂದು ರಾಜ್ಯ ಪ್ರತಿನಿಧಿ ಸಭೆ ಆಗ್ರಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News