ಅಘೋಷಿತ ತುರ್ತು ಪರಿಸ್ಥಿತಿಯ ಅವಾಂತರಗಳು

Update: 2017-01-22 18:51 GMT

ತುರ್ತು ಪರಿಸ್ಥಿತಿ ಜಾರಿಗೊಳಿಸದೆ ಭಿನ್ನಮತ ಹೇಗೆ ಹೊಸಕಿ ಹಾಕಬೇಕೋ, ಹಾಗೆ ಹೊಸಕಿ ಹಾಕಲಾಗುತ್ತಿದೆ. ಸದ್ದುಗದ್ದಲವಿಲ್ಲದೆ ಕೊರಳಿಗೆ ಹಗ್ಗ ಬಿಗಿಯಲಾಗುತ್ತಿದೆ. ಸಿಬಿಐ ಎಂಬ ಅಸ್ತ್ರವನ್ನು ಮನಬಂದಂತೆ ಬಳಸಿಕೊಳ್ಳಲಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಮಲ್ಲಿಕಾ ಸಾರಾಭಾಯ್, ಬಂದೂಕವಾಲಾ ಅವರಂತಹವರ ದನಿಗಳನ್ನು ನಾನಾ ಕುತಂತ್ರದ ಮೂಲಕ ಹತ್ತಿಕ್ಕಿದ ಕಾರ್ಪೊರೇಟ್ ಕಂಪೆನಿಗಳ ಪ್ರಧಾನ ಸೇವಕರು ದಿಲ್ಲಿಗೆ ಬಂದ ನಂತರವೂ ಅದನ್ನೇ ಮುಂದುವರಿಸಿದ್ದಾರೆ.

ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಜಾರಿಯಲಿಲ್ಲ. ಯಾರನ್ನೂ ಬಂಧಿಸಿ ಜೈಲಿನಲ್ಲಿ ಇಟ್ಟಿಲ್ಲ. ಬೀದಿ, ಪ್ರತಿಭಟನೆಗಳಿಗೆ ನಿರ್ಬಂಧವಿಲ್ಲ. ಸಂಸತ್ತಿನ ಕಲಾಪಗಳು ಎಂದಿನಂತೆ ನಡೆಯುತ್ತಿವೆ. ಪತ್ರಿಕೆಗಳು ಸೆನ್ಸಾರ್ ರಹಿತವಾಗಿ ಪ್ರಕಟವಾಗುತ್ತಿವೆ. ಟಿವಿಯಲ್ಲಿ ಸುದ್ದಿಗಳು ಬರುತ್ತಿವೆ. ಆದರೆ ಎಲ್ಲ ಮೊದಲಿನಂತಿಲ್ಲ. ಭಿನ್ನಮತ ವ್ಯಕ್ತಪಡಿಸುವವರ ಬಾಯಿ ಮುಚ್ಚಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಪ್ರಭುತ್ವಕ್ಕೆ ಎದುರಾಗಿ ಮಾತನಾಡುವವರನ್ನು ಹತ್ತಿಕ್ಕುವ ಯತ್ನಗಳು ನಮ್ಮ ಸಾಮಾಜಿಕ ಜೀವನದಲ್ಲಿ ನಡೆಯುತ್ತಿವೆ. ಪ್ರಭುತ್ವದ ಅಧಿಪತಿಗೆ ಬಹುಪರಾಕು ಹೇಳುವ ಭಕ್ತರು ಹಿಟ್ಲರ್‌ನ ನಾಝಿ ಪಡೆಗಳಂತೆ ವಿರೋಧಿಗಳ ಮೇಲೆ ಹಲ್ಲೆಗೆ ಬರುತ್ತಿದ್ದಾರೆ.

ತುರ್ತು ಪರಿಸ್ಥಿತಿ ಜಾರಿಗೊಳಿಸದೆ ಭಿನ್ನಮತ ಹೇಗೆ ಹೊಸಕಿ ಹಾಕಬೇಕೋ, ಹಾಗೆ ಹೊಸಕಿ ಹಾಕಲಾಗುತ್ತಿದೆ. ಸದ್ದುಗದ್ದಲವಿಲ್ಲದೆ ಕೊರಳಿಗೆ ಹಗ್ಗ ಬಿಗಿಯಲಾಗುತ್ತಿದೆ. ಸಿಬಿಐ ಎಂಬ ಅಸ್ತ್ರವನ್ನು ಮನಬಂದಂತೆ ಬಳಸಿಕೊಳ್ಳಲಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಮಲ್ಲಿಕಾ ಸಾರಾಭಾಯ್, ಬಂದೂಕವಾಲಾ ಅವರಂತಹವರ ದನಿಗಳನ್ನು ನಾನಾ ಕುತಂತ್ರದ ಮೂಲಕ ಹತ್ತಿಕ್ಕಿದ ಕಾರ್ಪೊರೇಟ್ ಕಂಪೆನಿಗಳ ಪ್ರಧಾನ ಸೇವಕರು ದಿಲ್ಲಿಗೆ ಬಂದ ನಂತರವೂ ಅದನ್ನೇ ಮುಂದುವರಿಸಿದ್ದಾರೆ.

ಕಾರ್ಪೊರೇಟ್ ಕಂಪೆನಿಗಳ ಎಂಜಲ ಕಾಸು ಮತ್ತು ಕೋಮುವಾದ ಎಂಬ ಮತ್ತೇರಿಸುವ ಅಫೀಮು ಇವರೆಡು ಇದ್ದರೆ ಸಾಕು ಎಂತಹ ಭಿನ್ನಮತದ ಬೆನ್ನುಮೂಳೆಯನ್ನು ಹತ್ತಿಕ್ಕಬಹುದು ಎಂಬುದಕ್ಕೆ ನಮ್ಮ ಪ್ರಧಾನ ಸೇವಕರ ಪರಾಕ್ರಮಗಳೇ ಪ್ರತ್ಯಕ್ಷ ಉದಾಹರಣೆ. ಈ ಪ್ರಧಾನ ಸೇವಕರಿಗೊಬ್ಬ ಆಪ್ತ ಸೇವಕ ಇದ್ದಾರೆ. ಅವರ ಹೆಸರು ಅಮಿತ್ ಶಾ. ಗುಜರಾತ್‌ನಲ್ಲಿ ಗೃಹಮಂತ್ರಿಯಾಗಿದ್ದಾಗ ನಕಲಿ ಎನ್‌ಕೌಂಟರ್‌ನಲ್ಲಿ ಕುಖ್ಯಾತಿ ಗಳಿಸಿದ್ದ ಇವರು ಜೈಲಿಗೂ ಹೋಗಿ ಬಂದಿದ್ದರು. ನಾನಾ ಕಸರತ್ತು ಮಾಡಿ ಕಾನೂನಿನ ಬಲೆಯಿಂದ ಹೊರ ಬಂದ ಇವರು ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ.

ದೇಶದಲ್ಲಿ ಇರುವ ಬಿಜೆಪಿಯೇತರ ಸರಕಾರಗಳನ್ನು ಉರುಳಿಸಲು ಸುಪಾರಿ ನೀಡುತ್ತಿರುವ ಅಮಿತ್ ಶಾ, ಈಗಾಗಲೇ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮುಗಿಸಲು ಸಿಬಿಐ ಎಂಬ ಗುಪ್ತಚರ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಮುಲಾಯಂ ಸಿಂಗ್‌ರಿಗೂ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗಿದೆ. ಗುಜರಾತ್‌ನಲ್ಲಿ ಪಟೇಲ್ ಮೀಸಲಾತಿ ಚಳವಳಿಗಾರ ಹಾರ್ದಿಕ್ ಪಟೇಲ್ ಇವರಿಂದ ತನ್ನ ಜೀವಕ್ಕೆ ಅಪಾಯವಿದೆಯೆಂದು ತಲೆಮರೆಸಿಕೊಂಡು ಓಡಾಡಿದರು.

ದಿಲ್ಲಿಯ ಸಿಂಹಾಸನ ಹಿಡಿದು ಕೂತ ಈ ಕುಖ್ಯಾತ ಜೋಡಿಯಿಂದ ಈಗ ತೊಂದರೆ ಅನುಭವಿಸುತ್ತಿರುವವರು ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ಟೀಸ್ತಾ ಸೆಟಲವಾಡ್. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಧಾನ ಸೇವಕರು ಯತ್ನಿಸಿದಾಗ, ಟೀಸ್ತಾ ಸೆಟಲವಾಡ್ ನ್ಯಾಯಾಲಯದ ಮೆಟ್ಟಿಲು ಹತ್ತಿ ಹತ್ಯೆಗೀಡಾದ ಜನರ ಪ್ರತೀ ಪ್ರಕರಣವನ್ನು ಬಯಲಿಗೆ ಎಳೆದರು. ಕೋಮು ಹಿಂಸಾಚಾರದಲ್ಲಿ ಬೀದಿಗೆ ಬಿದ್ದಿದ್ದ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾದರು. ಈ ಎಲ್ಲ ಪ್ರಕರಣಗಳನ್ನು ಮುಕ್ತವಾಗಿ ವಿಚಾರಣೆಗೆ ಒಳಪಡಿಸಿದ್ದರೆ, ಪ್ರಧಾನ ಸೇವಕರು ಮತ್ತು ಅವರ ಆಪ್ತ ಸೇವಕರು ಜೈಲಿನಲ್ಲಿ ಇರಬೇಕಾಗುತ್ತಿತ್ತು.

ತಮ್ಮನ್ನು ಬೆಂಬತ್ತಿ ಕಾಡುತ್ತಿರುವ ಟೀಸ್ತಾ ಸೆಟಲವಾಡ್ ಅವರನ್ನು ಬಾಯ್ಮುಚ್ಚಿಸಲು ಸಾಧ್ಯವಿಲ್ಲ ಎಂದು ಮನಗಂಡಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ, ಟೀಸ್ತಾ ನಡೆಸುವ ಸ್ವಯಂ-ಸೇವಾ ಸಂಸ್ಥೆಯೊಂದರ ಲೆಕ್ಕಪತ್ರ ತಪಾಸಣೆ ಮಾಡಿ ವಿದೇಶದಿಂದ ಪಡೆದ ದೇಣಿಗೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ದುರುಪಯೋಗವೆಂದರೆ, ಈ ಹಣವನ್ನು ಟೀಸ್ತಾ ಬಳಸಿಕೊಂಡಿಲ್ಲ. ಬದಲಾಗಿ ಗುಜರಾತ್ ಗಲಭೆಪೀಡಿತರ ಪುನರ್ವಸತಿಗಾಗಿ ಉಪಯೋಗಿಸಿದ್ದಾರೆ. ವಾಸ್ತವವಾಗಿ ಸಾರ್ವಜನಿಕರ ಹಣಕಾಸನ್ನು ದುರುಪಯೋಗ ಮಾಡಿಕೊಳ್ಳುವ ಹೀನಾಯ ಸ್ಥಿತಿ ಟೀಸ್ತಾ ಅವರಿಗೆ ಬಂದಿಲ್ಲ. ಅವರದ್ದು ಆಗರ್ಭ ಶ್ರೀಮಂತ ಮನೆತನ. ಅವರ ತಾತಾ ಎಂ.ಸಿ.ಸೆಟಲವಾಡ್ ಒಂದು ಕಾಲದಲ್ಲಿ ಸುಪ್ರೀಂ ಕೋರ್ಟ್‌ನ ಹೆಸರಾಂತ ನ್ಯಾಯವಾದಿಯಾಗಿದ್ದರು. ಮೈಸೂರು ಮಹಾರಾಜರಿಗೆ ಸಂಬಂಧಿಸಿದ ಕೇಸು ನಡೆಸಲು ಮುಂಬೈಯಿಂದ ಬೆಂಗಳೂರಿಗೆ ತಮ್ಮದೇ ಪ್ರತ್ಯೇಕ ರೈಲಿನಲ್ಲಿ ಬರುತ್ತಿದ್ದರು. ಟೀಸ್ತಾ ತಂದೆ ಕೂಡ ಹೆಸರಾಂತ ವಕೀಲರು. ಇಂತಹ ಹಿನ್ನೆಲೆಯಿಂದ ಬಂದ ಟೀಸ್ತಾ ಅವರು ಜಾತಿ ಸಂಪ್ರದಾಯಗಳನ್ನು ಧಿಕ್ಕರಿಸಿ ತಾನು ಪ್ರೀತಿಸಿದ ಮುಸ್ಲಿಂ ಮಿತ್ರನನ್ನು ಮದುವೆಯಾಗಿದ್ದರು. ಈ ಗಂಡ ಹೆಂಡತಿ ಸೇರಿ, ಸಬರಂಗ್ ಎಂಬ ಸ್ವಯಂ-ಸೇವಾ ಸಂಸ್ಥೆ ನಡೆಸುತ್ತಾರೆ.

ಟೀಸ್ತಾ ಮಾತ್ರವಲ್ಲದೆ ಕೋಮು ಸೌಹಾರ್ದಕ್ಕಾಗಿ, ದಲಿತರಿಗಾಗಿ, ಪರಿಸರಕ್ಕಾಗಿ, ಲೈಂಗಿಕ ಅಲ್ಪಸಂಖ್ಯಾತರಿಗಾಗಿ, ಮಹಿಳೆಯರಿಗಾಗಿ ಸೇವೆ ಸಲ್ಲಿಸುವ ಎಲ್ಲಾ ಸ್ವಯಂ-ಸೇವಾ ಸಂಸ್ಥೆಗಳು ಪಡೆಯುವ ವಿದೇಶಿ ನಿಧಿಯನ್ನು ಮೋದಿ ಸರಕಾರ ನಿರ್ಬಂಧಿಸಿದೆ. ಆದರೆ ಕೋಮು ದ್ವೇಷ ಹಬ್ಬಿಸಲು ಆರೆಸ್ಸೆಸ್ ಪಡೆಯುತ್ತಿರುವ ಕೋಟ್ಯಂತರ ಡಾಲರ್ ವಿದೇಶಿ ನೆರವು ಅನಿರ್ಬಂಧಿತವಾಗಿ ಹರಿದು ಬರುತ್ತಿದೆ. ಉದಾಹರಣೆಗೆ, ಕಳೆದ ಮೂರು ವರ್ಷಗಳಿಂದ ಮಹಿಳೆಯರಿಗಾಗಿ, ಅನಾಥ ಮಕ್ಕಳಿಗಾಗಿ, ಅಸಂಘಟಿತ ಕಾರ್ಮಿಕರಿಗಾಗಿ ಉಚಿತ ಕಾನೂನು ನೆರವು ನೀಡುತ್ತ ಬಂದಿರುವ ದಿಲ್ಲಿಯ ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ಅವರ ನೇತೃತ್ವದ ವಕೀಲರ ತಂಡಕ್ಕೆ ವಿದೇಶದಿಂದ ಬರುತ್ತಿದ್ದ ನೆರವನ್ನು ಮೋದಿ ಸರಕಾರ ನಿರ್ಬಂಧಿಸಿದೆ.

ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ ಮಾನವ ಹಕ್ಕು ಸಂಘಟನೆಗಳು, ಪರಿಸರ ರಕ್ಷಣೆಗಾಗಿ ದುಡಿಯುವ ಸಂಸ್ಥೆಗಳು ಈಗ ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿವೆ. ಮೇಧಾ ಪಾಟ್ಕರ್ ಅವರ ಬಾಯ್ಮುಚ್ಚಿಸುವ ಯತ್ನವೂ ನಡೆದಿದೆ. ತನಗೆ ಭಿನ್ನಮತ ಎಂಬುದು ಇರಬಾರದು ಎಂಬುದು ಇಂದಿನ ಪ್ರಧಾನಿಯವರ ನಿಲುವು ಆಗಿದೆ.

ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಸಂಘ ಪರಿವಾರದ ಫ್ಯಾಶಿಸ್ಟ್ಟ್ ಶಕ್ತಿಗಳು ತೀವ್ರಗೊಂಡವು. ಗೋರಕ್ಷಣೆ ಹೆಸರಿನಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೇಶದ ಎಲ್ಲಾ ಕಡೆ ಹಲ್ಲೆಗಳು ಆರಂಭವಾದವು. ದಲಿತರ ಪರವಾಗಿ ಹೋರಾಟಕ್ಕಿಳಿದ ನವಸರ್ಜನ್ ಟ್ರಸ್ಟ್ ಸ್ವಯಂ-ಸೇವಾ ಸಂಸ್ಥೆ ಪಡೆಯುತ್ತಿದ್ದ ವಿದೇಶಿ ನೆರವನ್ನು ಮೋದಿ ಸರಕಾರ ನಿರ್ಬಂಧಿಸಿದೆ.

ಇನ್ನು ಪ್ರಜಾಪ್ರಭುತ್ವಕ್ಕಾಗಿ ಇಡಬೇಕಾದ ಮಾಧ್ಯಮಗಳು ಸರಕಾರ ನಿರ್ಬಂಧಿಸುವ ಮುನ್ನವೇ ಪ್ರಭುತ್ವಕ್ಕೆ ಶರಣಾಗಿವೆ. ದೃಶ್ಯಮಾಧ್ಯಮದ ಬಹುತೇಕ ಚಾನೆಲ್‌ಗಳು ಮೋದಿ ಸರಕಾರದ ದುರಾಡಳಿತವನ್ನು ಟೀಕಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಇನ್ನೂ ಕೆಲ ಮಾಧ್ಯಮಗಳನ್ನು ಜಾಹೀರಾತು ನೀಡಿ ಬಾಯ್ಮುಚ್ಚಿಸಲಾಗಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಸಾಹಿತ್ಯೋತ್ಸವಗಳಲ್ಲೂ ಈಗ ಸಂಘ ಪರಿವಾರದ ಪ್ರವೇಶವಾಗಿದೆ. ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಎಲ್.ಭೈರಪ್ಪ ಇತರರ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವ ಹಕ್ಕು ಇರಬೇಕು ಮತ್ತು ಜಾತಿ ಆಧಾರಿತ ಮೀಸಲಾತಿ ರದ್ದುಗೊಳಿಸಲು ಹೇಳಿದ್ದಾರೆ. ಈ ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಕಮ್ಯುನಿಸ್ಟ್ ನಾಯಕ ಎಂ.ಎ.ಬೇಬಿ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಆರೆಸ್ಸೆಸ್ ನಾಯಕರು ಅಲ್ಲಿ ಪಾಲ್ಗೊಳ್ಳುವುದರಿಂದ ತಾನು ಬರುವುದಿಲ್ಲವೆಂದು ಬೇಬಿ ಸ್ಪಷ್ಟವಾಗಿ ಹೇಳಿದರು.

ಭಿನ್ನಾಭಿಪ್ರಾಯಗಳ ನಡುವೆ ಸಂವಾದ ಇರಬಾರದೆಂದು ಇದರ ಅರ್ಥವಲ್ಲ. ಆದರೆ ನಮ್ಮ ದೇಶ ಒಪ್ಪಿಕೊಂಡ ಸಂವಿಧಾನದ ಅಡಿಪಾಯಕ್ಕೆ ಗಂಡಾಂತರ ತರುವ ಹಿಂದೂ ರಾಷ್ಟ್ರ ನಿರ್ಮಾಣದ ಅಜೆಂಡಾ ಹೊಂದಿರುವವರೊಂದಿಗೆ ಸಂವಾದ ಸಾಧ್ಯವಿಲ್ಲವೆಂದು ಬೇಬಿ ಸ್ಪಷ್ಟವಾಗಿ ಹೇಳಿದರು. ಧಾರವಾಡದ ಸಾಹಿತ್ಯ ಸಂಭ್ರಮದಲ್ಲೂ ಎಡ ಬಲವಲ್ಲದ ಮಧ್ಯ ಮಾರ್ಗದ ಹೆಸರಿನಲ್ಲಿ ಬಲ ಪಂಥೀಯರಿಗೆ ವೇದಿಕೆ ಕಲ್ಪಿಸುವ ಹುನ್ನಾರ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರಿಗೆ ಬರಲಿರುವ ದಿನಗಳಲ್ಲಿ ಇಂತಹ ಇನ್ನಷ್ಟು ಹೊಸ ಸವಾಲುಗಳು ಎದುರಾಗಲಿವೆ.

ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟ, ಸಾಮಾಜಿಕ ನ್ಯಾಯದ ಸಮಾಧಿ ಮೇಲೆ ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸಲು ಹೊರಟ ಫ್ಯಾಶಿಸ್ಟ್ಟ್ ಶಕ್ತಿಗಳೊಂದಿಗೆ ಎಂದಿಗೂ ಸಂವಾದ ಸಾಧ್ಯವಾಗುವುದಿಲ್ಲ. ಫ್ಯಾಶಿಸ್ಟ್ಟ್ ಶಕ್ತಿಗಳನ್ನು ನಿರ್ನಾಮ ಮಾಡಿ, ಈಗಿರುವ ಪ್ರಜಾಪ್ರಭುತ್ವ ಉಳಿಸಿಕೊಂಡು ಅದನ್ನು ನಿಜವಾದ ಜನತೆಯ ಪ್ರಜಾಪ್ರಭುತ್ವವನ್ನಾಗಿ ಮಾರ್ಪಡಿಸುವುದು ಪ್ರಜ್ಞಾವಂತರೆಲ್ಲರ ಆದ್ಯತೆ ಆಗಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News