ನೋಟು ರದ್ದತಿಯನ್ನು ಕಟುವಾಗಿ ಟೀಕಿಸಿದ ಚರ್ಚ್

Update: 2017-01-23 10:07 GMT

ಪಣಜಿ,ಜ.23 : ಬಡವರ ಉದ್ಧಾರವನ್ನು ತನ್ನ ಮುಖ್ಯ ಉದ್ದೇಶವಾಗಿಸದೆ ಕ್ಯಾಶ್ ಲೆಸ್ ಆರ್ಥಿಕತೆಗೆ ಒತ್ತು ನೀಡಲಾರಂಭಿಸಿದ ಕೇಂದ್ರ ನೀತಿಗಳಿಗೆ ಗೋವಾದ ಚರ್ಚ್ ಸಂಘಟನೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಮುಂಬರುವ ಗೋವಾ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಕ್ಯಾಥೋಲಿಕ್ ಮತದಾರರಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಗೋವಾ ಚರ್ಚ್ ಸಂಘಟನೆ ‘ಕೌನ್ಸಿಲ್ ಫಾರ್ ಸೋಶಿಯಲ್ ಜಸ್ಟಿಸ್ ಎಂಡ್ ಪೀಸ್’ ‘‘ಬಡವರ ಉದ್ಧಾರದ ರೋಟಿ, ಕಪಡಾ ಔರ್ ಮಕಾನ್ ನೀತಿಯಿಂದ ಡಿಜಿಟಲ್ ಹಾಗೂ ಕ್ಯಾಶ್ ಲೆಸ್ ಆರ್ಥಿಕತೆಗೆ ಒತ್ತು ನೀಡಿ, ಸ್ಮಾರ್ಟ್ ಫೋನ್,ಎಟಿಎಂ ಕಾರ್ಡು ಹಾಗೂ ಪೇಟಿಎಂ ಆ್ಯಪ್ ಇವುಗಳನ್ನು ಸರಕಾರಿ ಸೌಲಭ್ಯಗಳನ್ನು ಪಡೆಯಲು ಮೂಲಭೂತ ಅಗತ್ಯವನ್ನಾಗಿಸಿದ ಬೆಳವಣಿಗೆ ಆತಂಕಕಾರಿ’’ ಎಂದು ಹೇಳಿದೆಯಲ್ಲದೆ ಇದರಿಂದ ಕೆಲವೇ ಕೆಲವು ಆಯ್ದ ಉದ್ಯಮಗಳು ಲಾಭ ಪಡೆಯುತ್ತಿವೆ ಎಂದು ಆರೋಪಿಸಿ ಸರಕಾರದ ನೋಟು ಅಮಾನ್ಯ ಹಾಗೂ ಡಿಜಿಟಲ್ ಇಕಾನಮಿ ಮಂತ್ರವನ್ನು ಚರ್ಚ್ ಟೀಕಿಸಿದೆ.

ಈ ಟೀಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ‘‘ಅದು ಅವರ ಅಭಿಪ್ರಾಯವಾದರೆ, ನಮ್ಮ ಅಭಿಪ್ರಾಯ ಬೇರೆಯೇ ಆಗಿದೆ. ಇದು (ಕ್ಯಾಶ್ ಲೆಸ್ ವ್ಯವಹಾರ) ಎಂದೋ ಆಗಬೇಕಿತ್ತು ಎಂಬುದು ದೇಶದ ಅಭಿಪ್ರಾಯವಾಗಿದೆ’’ ಎಂದಿದ್ದಾರೆ.

‘‘ದೇಶದಲ್ಲಿ ಪರ್ಯಾಯ ಆರ್ಥಿಕತೆ ಬೆಳೆಯುತ್ತಿದೆ. ನಮ್ಮ ನೆರೆ ರಾಷ್ಟ್ರ ಉಗ್ರವಾದಿಗಳಿಗೆ ಹಣ ನೀಡಿ ಬೆಂಬಿಸುತ್ತಿದೆ. ಹವಾಲಾ ಉದ್ಯಮ, ಡ್ರಗ್ಸ್ ಕಳ್ಳಸಾಗಣೆ ಹಾಗೂ ಮಾನವ ಕಳ್ಳಸಾಗಣೆ ಎಲ್ಲವೂ ಪರ್ಯಾಯ ಆರ್ಥಿಕತೆ, ನಕಲಿ ಹಾಗೂ ಕಪ್ಪು ಹಣದಿಂದ ನಡೆಯುತ್ತಿವೆ. ಇದೀಗ ನೋಟು ಅಮಾನ್ಯೀಕರಣ ಅವರನ್ನೆಲ್ಲಾ ಬಾಧಿಸಿದೆ,’’ಎಂದು ನಾಯ್ಡು ಹೇಳಿದ್ದಾರೆ.

‘‘ತನ್ನ ಸರಕಾರದ ಅಮಾನ್ಯೀಕರಣ ನಿರ್ಧಾರದ ಬಗ್ಗೆ ಬಿಜೆಪಿಗೆ ವಿಷಾದವಿಲ್ಲ. ಈ ನಿರ್ಧಾರ ಚರ್ಚು, ದೇವಳ ಅಥವಾ ಮಸೀದಿಗಳನ್ನು ಗುರಿಯಾಗಿಸಿಲ್ಲ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು,’’ ಎಂದು ನಾಯ್ಡು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News