ಮಾಜಿ ಶಾಸಕ ಕುಮಾರಸ್ವಾಮಿಗೆ ಪತ್ನಿಯಿಂದ ನೋಟಿಸ್

Update: 2017-01-23 17:31 GMT

ಮೂಡಿಗೆರೆ, ಜ.23: ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತು ಸವಿತಾ ಅವರ ದಾಂಪತ್ಯ ಜೀವನದಲ್ಲಿ ಮತ್ತೆ ಬಿರುಕು ಬಿಟ್ಟಿದ್ದು, ಸವಿತಾ ಕುಮಾರಸ್ವಾಮಿ ಅವರು ಜೀವನಾಂಶ, ಆಸ್ತಿ ಮತ್ತು ನ್ಯಾಯಾಲಯದ ವೆಚ್ಚ ಇವುಗಳನ್ನು ಕೋರಿ ಮೈಸೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಆಸ್ತಿಯ ಪಾಲು 2.50 ಕೋಟಿ ರೂ., ತಿಂಗಳ ಜೀವನಾಂಶ 1.50 ಲಕ್ಷ ರೂ., ಕೋರ್ಟ್ ವೆಚ್ಚ 5 ಲಕ್ಷ ರೂ. ನೀಡುವಂತೆ ತಮ್ಮ ವಕೀಲರ ಮೂಲಕ ಮೈಸೂರಿನಲ್ಲಿ ದಾವೆ ಹೂಡಿದ್ದಾರೆ.


ಈ ಸಂಬಂಧ ಎಂ.ಪಿ. ಕುಮಾರಸ್ವಾಮಿ ಅವರಿಗೆ ಜ.18ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ಮೂಲಕ ಮಾಜಿ ಶಾಸಕರ ದಾಂಪತ್ಯ ಕಲಹ ಕೋರ್ಟಿಗೆ ವಿಚ್ಛೇದನಕ್ಕಾಗಿ ಮೊರೆ ಹೋದಂತಾಗಿದೆ.
ಎಂ.ಪಿ.ಕುಮಾರಸ್ವಾಮಿ ಮತ್ತು ಸವಿತಾ ದಾಂಪತ್ಯ ಜೀವನದಲ್ಲಿ ಹಿಂದಿನಿಂದಲೂ ಅನೇಕ ಬಾರಿ ಬಿರುಕು ಉಂಟಾಗಿತ್ತು. ಇತ್ತೀಚೆಗಷ್ಟೆ ಮೂಡಿಗೆರೆಯ ಕೆಲ ಹಿರಿಯ ಮುಖಂಡರ ಸಮ್ಮುಖದಲ್ಲಿ ರಾಜಿಯಾಗಿದ್ದರು. ಬಳಿಕ ದಂಪತಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಒಂದಾಗಿದ್ದೇವೆ ಎಂದಿದ್ದರು. ಅಲ್ಲದೆ ಹಳ್ಳಿಯಲ್ಲಿ ವಾಸವಾಗಿರಲು ಪತ್ನಿ ಒಪ್ಪದಿದ್ದ ಕಾರಣ ಪಟ್ಟಣದ ಬಿಳಗುಳದಲ್ಲಿ ಸುಸಜ್ಜಿತ ಬಾಡಿಗೆ ಮನೆ ಮಾಡಿ ಸಂಸಾರ ಹೂಡಿದ್ದರು. ತಮ್ಮ ಮೊಬೈಲನ್ನೂ ಪತ್ನಿ ಸುಪರ್ದಿಗೆ ವಹಿಸಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಸವಿತಾ ಅವರು ಕುಮಾರಸ್ವಾಮಿ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆಂಬ ಕಾರಣಕ್ಕೆ ಮತ್ತೆ ಜಗಳವಾಗಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿದೆ.

ಇದೀಗ ಸವಿತಾ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎಂ.ಪಿ.ಕೆ. ಹೆಸರಿನಲ್ಲಿದ್ದ ಬೆಂಗಳೂರಿನ ಮನೆ ಬಾಡಿಗೆ ಹಣ ಪತ್ನಿ ಸವಿತಾ ಅಕೌಂಟ್‌ಗೆ ಜಮಾ ಆಗುತ್ತಿತ್ತು. ಎಂಪಿಕೆಯ ಎಟಿಎಂ ಕಾರ್ಡ್ ಕೂಡ ಅವರ ಬಳಿ ಇದ್ದು, ಅದನ್ನು ಮತ್ತೆ ವಾಪಸು ಪಡೆದಿರುವ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News