​ಸರ್ವೋತ್ತಮ ಸೇವಾ ಪ್ರಶಸ್ತಿ

Update: 2017-01-23 17:34 GMT


ಬಿ. ರೇಣುಕೇಶ್
ಶಿವಮೊಗ್ಗ, ಜ. 23: ಪ್ರಸ್ತುತ ಪ್ರಶಸ್ತಿ - ಬಿರುದು - ಸಮ್ಮಾನಗಳು ನಾನಾ ಕಾರಣಗಳಿಂದ ತನ್ನ ಮಹತ್ವ ಕಳೆದುಕೊಳ್ಳುತ್ತಿವೆ. ನಿಜವಾಗಿಯೂ ಅರ್ಹರು, ಪ್ರಾಮಾಣಿಕರಿಗೆ ಪ್ರಶಸ್ತಿ ದೊರಕುವುದೇ ದುರ್ಲಭ ಎನ್ನವಂತಾಗಿದೆ. ಜಾತಿ, ಲಾಬಿ, ಒತ್ತಡ, ರಾಜಕಾರಣಿಗಳ ಶಿಫಾರಸು, ಪ್ರಭಾವ ಬಳಸುವವರಿಗೆ ಪ್ರಶಸ್ತಿ ಖಾಯಂ ಎನ್ನುವಂತಹ ಸ್ಥಿತಿಯಿದೆ. ಇದರಿಂದ ಅನರ್ಹರು ಪ್ರಶಸ್ತಿ - ಬಿರುದು - ಸಮ್ಮಾನಗಳಿಗೆ ಭಾಜನರಾಗುವಂತಾಗಿದೆ.


ಜಿಲ್ಲಾಡಳಿತದಿಂದ ಸರಕಾರಿ ನೌಕರರಿಗೆ ನೀಡಲಾಗುವ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಕೂಡ ಪ್ರಭಾವ-ಒತ್ತಡಗಳಿಂದ ಮುಕ್ತವಾಗಿಲ್ಲ ಎಂಬ ಆರೋಪವಿದೆ. ಕೆಲ ನೌಕರರು ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಭಾರೀ ದೊಡ್ಡ ಪ್ರಮಾಣದಲ್ಲಿ ಲಾಬಿ ನಡೆಸುವ, ಪ್ರಭಾವಿ ರಾಜಕಾರಣಿಗಳ ಮೂಲಕ ಒತ್ತಡ ಹಾಕಿಸುವ ಕೆಲಸ ನಡೆಸುತ್ತಿರುವ ಮಾಹಿತಿಗಳು ಸ್ವತಃ ಸರಕಾರಿ ನೌಕರರ ವಲಯದಿಂದಲೇ ಕೇಳಿಬರುತ್ತಿವೆ. ಇದರಿಂದ ಅದೆಷ್ಟೋ ಪ್ರಾಮಾಣಿಕ, ನಿಷ್ಠಾವಂತ, ದಕ್ಷ ನೌಕರರು ಈ ಪ್ರಶಸ್ತಿಯಿಂದ ವಂಚಿರಾಗುವಂತಾಗಿದೆ.

ಲಾಬಿ, ಪ್ರಭಾವ ಬಳಸುವ ನೌಕರರಿಗೆ ಪ್ರಶಸ್ತಿ ಖಾಯಂ ಎನ್ನುವಂತಾಗಿದೆ. ಪ್ರಸ್ತುತ ವರ್ಷ ಮತ್ತೊಮ್ಮೆ ಜಿಲ್ಲಾಡಳಿತ ಪ್ರಶಸ್ತಿಗೆ ಸರಕಾರಿ ನೌಕರರಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಹಲವು ನೌಕರರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು, ಇಷ್ಟರಲ್ಲಿಯೇ ಜಿಲ್ಲಾಡಳಿತವು ಪ್ರಶಸ್ತಿಗೆ ನೌಕರರ ಆಯ್ಕೆ ಪ್ರಕ್ರಿಯೆ ನಡೆಸಲಿದೆ.

ಏನಿದು ಪ್ರಶಸ್ತಿ?: ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಣೆ ಮಾಡುವವರನ್ನು ಗುರುತಿಸುವುದು ಹಾಗೂ ಸರಕಾರಿ ನೌಕರರಲ್ಲಿ ಸೇವಾ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತವು ಪ್ರತಿವರ್ಷ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಎ, ಬಿ ಹಾಗೂ ಸಿ ವರ್ಗಗಳಲ್ಲಿ ತಲಾ ಈರ್ವರು ನೌಕರರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ನೌಕರರಿಂದ ಅರ್ಜಿ ಆಹ್ವಾನಿಸುತ್ತದೆ. ಈ ಅರ್ಜಿಗಳ ಕೂಲಂಕಷ ಪರಿಶೀಲನೆ ನಡೆಸಿ, ಅರ್ಹ ನೌಕರರನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಅಧಿಕಾರಿಗಳ ಸಮಿತಿಯು ಆಯ್ಕೆ ಮಾಡುತ್ತದೆ.

ಗಣರಾಜೋತ್ಸವ ಸಮಾರಂಭದಂದು ಈ ಪ್ರಶಸ್ತಿ
ುನ್ನು ಪ್ರದಾನಿಸಿ ಗೌರವಿಸಲಾಗುತ್ತದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಈ ಬಾರಿ ಪ್ರಶಸ್ತಿ ಕೋರಿ ಸುಮಾರು 22ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಪ್ರಶಸ್ತಿಗೆ ಭಾರೀ ಪೈಪೋಟಿ ಕಂಡು ಬಂದಿದೆ. ಪ್ರಾಮಾಣಿಕರಿಗೆ ಸಿಗಲಿ: ಇತರ ಕೆಲ ಪ್ರಶಸ್ತಿಗಳಂತೆ ಈ ಪ್ರಶಸ್ತಿಯೂ ಕೂಡ ಆರೋಪದಿಂದ ಮುಕ್ತವಾಗಿಲ್ಲ. ಲಾಬಿ, ಪ್ರಭಾವ, ಜಾತಿ, ರಾಜಕಾರಣಗಳ ಶಿಫಾರಸು ಪ್ರಮುಖ ಪಾತ್ರವಹಿಸುತ್ತಿರುವ ಆರೋಪಗಳು ನೌಕರರ ವಲಯದಿಂದ ಕೇಳಿಬರುತ್ತಿವೆ.

ಕೆಲ ನೌಕರರು ಪ್ರಶಸ್ತಿ ಪಡೆಯಲು ನಾನಾ ರೀತಿಯ ಕಸರತ್ತು ನಡೆಸುವ ಮಾಹಿತಿಗಳೂ ಕೇಳಿಬರುತ್ತಿವೆ. ‘ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಭಾವ, ಒತ್ತಡಗಳಿಂದ ಮುಕ್ತವಾಗಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನೌಕರರಿಗಷ್ಟೇ ಸಿಗುವಂತಾಗಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಭಾರೀ ಪೈಪೋಟಿ ಕಂಡು ಬರುತ್ತಿದೆ. ಪೈಪೋಟಿ ಒಳ್ಳೆಯದೇ. ಆದರೆ, ಇದಕ್ಕಾಗಿ ವಸೂಲಿಬಾಜಿ ನಡೆಸುವುದು ಸರಿಯಲ್ಲ. ರಾಜಕಾರಣಿಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಬೀಳಬೇಕು. 
ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮಾತ್ರ ಈ ಪ್ರಶಸ್ತಿ ಸಿಗುವಂತಾಗಬೇಕು’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಸರಕಾರಿ ನೌಕರರೊಬ್ಬರು ಹೇಳುತ್ತಾರೆ. ತಮ್ಮ ನೇರ-ನಿರ್ಭೀತ ಕಾರ್ಯವೈಖರಿಯ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿರುವ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪಅವರು ದಕ್ಷ-ಪ್ರಾಮಾಣಿಕ ನೌಕರರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಒತ್ತಡ ಹಾಗೂ ಪ್ರಭಾವಕ್ಕೆ ಮಣೆ ಹಾಕಬಾರದು ಎಂದು ಸರಕಾರಿ ನೌಕರರು ಮನವಿ ಮಾಡಿದ್ದಾರೆ.


 ಸರ್ವೋತ್ತಮ ಸೇವಾ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ನೌಕರರ ಸೇವಾ ದಕ್ಷತೆ, ಪ್ರಾಮಾಣಿಕತೆಯ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು. ಆಯ್ಕೆಯಲ್ಲಿ ಯಾವುದೇ ಶಿಫಾರಸುಗಳೂ ನಡೆಯುವುದಿಲ್ಲ. ನೌಕರರು ಕೂಡ ಶಿಫಾರಸು ಮಾಡಿಸುವುದಿಲ್ಲ. ಈ ಬಾರಿ ಸುಮಾರು 22 ಅರ್ಜಿಗಳು ಆಗಮಿಸಿವೆ. ಇಷ್ಟರಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಚೆನ್ನಬಸಪ್ಪ
ಅಪರ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News