ಸದಾಶಿವ ಆಯೋಗದ ವರದಿ ವಿರುದ್ಧ ಬೃಹತ್ ರ‍್ಯಾಲಿ

Update: 2017-01-23 17:46 GMT

ಪರಿಶಿಷ್ಟ ಸಮುದಾಯದ ಆರೋಪ
ಶಿವಮೊಗ್ಗ, ಜ. 23: ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಮೀಸಲಾತಿ ಸಂರಕ್ಷಣಾ ಒಕ್ಕೂಟವು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರಕಾರವನ್ನು ಒತ್ತಾಯಿಸಿತು. ಸೈನ್ಸ್ ಮೈದಾನದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಬಳಿಕ ಡಿ.ಸಿ. ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರ್ಯಾಲಿಯಲ್ಲಿ ಭಾರೀ ಜನ ಭಾಗವಹಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲ ಸಮಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಜಾರಿ ಬೇಡ: ಶ್ರೇಣೀಕೃತ ಜಾತಿ ವ್ಯವಸ್ಥೆ ಹೊಂದಿರುವ ಭಾರತ ಸಮಾಜದಲ್ಲಿ ಆಳುವ ವರ್ಗಗಳು ತಳ ಸಮುದಾಯಗಳನ್ನು ಒಡೆದು ಆಳುವ ನೀತಿಯನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿವೆ. ಈಗಲೂ ಕೂಡ ನಡೆಸುತ್ತಿವೆ. ಇದಕ್ಕೆ ರಾಜ್ಯದಲ್ಲಿ ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಹೊರಟಿರುವುದೇ ಸಾಕ್ಷಿಯಾಗಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.

ಪರಿಶಿಷ್ಟ ಸಮುದಾಯಗಳಿಗೆ ಆಗುತ್ತಿರುವ ತೊಂದರೆ ಮತ್ತು ಪರಿಹಾರದ ಬಗ್ಗೆ ವರದಿ ನೀಡಬೇಕಾಗಿದ್ದ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗವು, ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆ ತೂರುವ ಕೆಲಸ ಮಾಡಿದೆ. ಒಳ ಮೀಸಲಾತಿಗೆ ಶಿಫಾರಸು ಮಾಡುವ ಮೂಲಕ ಪರಿಶಿಷ್ಟ ಸಮುದಾಯಗಳಲ್ಲಿ ಭಿನ್ನಮತ ಉಂಟು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೆಲ ರಾಜಕಾರಣಿಗಳು ಮತ್ತು ಒಂದು ಸಮುದಾಯದ ಒತ್ತಡಕ್ಕೆ ಮಣಿದು ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಶಿಫಾರಸುಗಳನ್ನು ಮಾಡಲಾಗಿದೆ. ಇದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅವೈಜ್ಞಾನಿಕ ಕ್ರಮವಾಗಿದೆ. ಈ ಮೂಲಕ ಶೋಷಿತ ಸಮುದಾಯವನ್ನು ಒಡೆಯುವ ಕೆಲಸ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಸದಾಶಿವ ಆಯೋಗವು ಸಂವಿಧಾನದ ಕಲಂ 341 (2) ಪ್ರಕಾರ ಶಿಫಾರಸು ಮಾಡಿರುವ ಅಂಶಗಳು ಶೋಷಿತ ಸಮುದಾಯಗಳಿಗೆ ಆತಂಕವನ್ನುಂಟು ಮಾಡಿದೆ. ಈ ಕಲಂ ಪ್ರಕಾರ ಸಂಸತ್ತು ಯಾವುದೇ ಜಾತಿಯನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆದು ಹಾಕಬಹುದಾಗಿದೆ. ಆದ್ದರಿಂದ ರಾಜ್ಯ ಸರಕಾರ ಈ ವರದಿಯ ಸಾಚಾತನವನ್ನು ಬಯಲಿಗೆ ತ  ರಬೇಕು. ಒಳ ಮೀಸಲಾತಿಯ ನೆಪದಲ್ಲಿ ನಡೆಯುತ್ತಿರುವ ಹುನ್ನಾರವನ್ನು ಮುಖ್ಯಮಂತ್ರಿಯವರು ಸೂಕ್ಷ್ಮವಾಗಿ ಮನಗಾಣಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಯಾರದೋ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಯವರು ವರದಿ ಶಿಫಾರಸು ಜಾರಿಗೆ ಮುಂದಾಗಬಾರದು. ಒಂದು ವೇಳೆ ಶಿಫಾರಸು ಜಾರಿಗೊಳಿಸಿದರೆ ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಸರಕಾರ ಆಸ್ಪದ ಕೊಡಬಾರದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.


ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಶಾಸಕಿ ಶಾರದಾ ಪೂರ್ಯ ನಾಯ್ಕ, ನಾನ್ಯ ನಾಯ್ಕ, ದೇವರಾಜ್ ಮಂಡೇನಕೊಪ್ಪ, ಧೀರರಾಜ್ ಹೊನ್ನವಿಲೆ, ಹನುಮಂತಪ್ಪ, ಬೋಜ್ಯಾ ನಾಯ್ಕ, ಸುರೇಶ್ ಬನ್ನೂರು, ಗಂಗಾನಾಯ್ಕ, ಸಣ್ಣ ಹನುಮಂತಪ್ಪ, ವೆಂಕಟೇಶ್ ಸೇರಿದಂತೆ ಮೊದಲಾದವರು ನೇತೃತ್ವ ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News