​ಖಾದಿ ಆಯೋಗದ ಕ್ಯಾಲೆಂಡರ್‌ನಲ್ಲಿ ಮೋದಿ ಭಾವಚಿತ್ರ

Update: 2017-01-23 17:50 GMT

 ಶಿವಮೊಗ್ಗ, ಜ.23: ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗದ ಆಯೋಗದ ಕ್ಯಾಲೆಂಡರ್‌ಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಚಿತ್ರಕ್ಕೆ ಬದಲಾಗಿ ಪ್ರಧಾನಿ ಮೋದಿ ಅವರ ಭಾವಚಿತ್ರ ಮುದ್ರಿಸಿರುವುದನ್ನು ವಿರೋಧಿಸಿ ನಗರ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಸಂಘಟನೆಯು ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಗೋಡೆ ಕ್ಯಾಲೆಂಡರ್ ಮತ್ತು ಟೇಬಲ್ ಕ್ಯಾಲೆಂಡರ್‌ಗಳಲ್ಲಿ ಈ ಹಿಂದಿನಿಂದಲೂ ಚರಕ ಹಿಡಿದು ನೂಲುತ್ತಿರುವ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಹಾಕುತ್ತಿತ್ತು. ಆದರೆ ಈ ವರ್ಷ ಅದೇ ಜಾಗದಲ್ಲಿ ಮಹಾತ್ಮಾ ಗಾಂಧಿ ರೀತಿಯಲ್ಲಿ ಪೋಸು ನೀಡಿರುವ ಪ್ರಧಾನಿ ಮೋದಿಯ ಚಿತ್ರವನ್ನು ಬಳಸಿಕೊಳ್ಳಲಾಗಿದೆ.

ಇದು ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಗಾಂಧೀಜಿಯವರ ಚಿತ್ರವನ್ನು ಎತ್ತಂಗಡಿ ಮಾಡಿ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇಷ್ಟಾದರೂ ಆಯೋಗದ ಅಧ್ಯಕ್ಷ ವಿನಯ್ ಸಕ್ಸೇನಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಖಾದಿ ಉತ್ಪನ್ನಗಳ ರಾಯಭಾರಿ ಎಂದು ಹೇಳಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಕವನ್ನೇ ಹಿಡಿಯದ ಪ್ರಧಾನಿ ಮೋದಿ ಅವರ ಒಪ್ಪಿಗೆ ಮೇರೆಗೆ ಈ ಚಿತ್ರ ಪ್ರಕಟಿಸಲಾಗಿದೆಯೇ ಅಥವಾ ನಿಜಕ್ಕೂ ಖಾದಿ ರಾಯಭಾರಿ ಆಗಿದ್ದಾರೆಯೇ ಎನ್ನುವುದನ್ನು ಕೇಂದ್ರ ಸರಕಾರ ಬಹಿರಂಗಗೊಳಿಸಬೇಕು. ಇಲ್ಲವಾದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಧಾನಿ ಈ ರೀತಿ ಮಾಡಿದ್ದಾರೆಂದು ಜನ ಭಾವಿಸುತ್ತಾರೆ.


ಮೋದಿಯವರ ಭಾವಚಿತ್ರವನ್ನು ಹಾಕಿರುವ ಕ್ಯಾಲೆಂಡರ್‌ಗಳನ್ನು ಆಯೋಗ ರದ್ದು ಪಡಿಸಬೇಕು. ಆಯೋಗದ ಅಧ್ಯಕ್ಷ ಸಕ್ಸೇನಾ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಕಾಶಿ, ಮುಖಂಡರಾದ ಎ.ಎಚ್. ಸುನೀಲ್, ಯೋಗೀಶ್‌ಗೌಡ, ಮಲ್ಲೇಶ, ಎಚ್.ಎಂ. ಮಧು, ಕೆ.ಚೇತನ್, ರಾಜಶೇಖರ, ರಫೀಕ್, ಚಿನ್ನಪ್ಪ, ಶಾಮ್‌ಸುಂದರ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News