​ದಿಡ್ಡಳ್ಳಿಯ ಆದಿವಾಸಿಗಳಿಗೆ ಶೀಘ್ರ ನಿವೇಶನ ನೀಡಲು ಒತ್ತಾಯ

Update: 2017-01-23 17:51 GMT

ಸಿದ್ದಾಪುರ, ಜ.23: ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳು ಅರಣ್ಯದಂಚಿನಲ್ಲಿ ಅನೇಕ ವರ್ಷಗಳಿಂದಲೂ ವಾಸಿಸುತ್ತಿದ್ದಾರೆ. ಸರಕಾರ ಇಂದಿಗೂ ಯಾವುದೇ ಸೌಲಭ್ಯಗಳನ್ನು ನೀಡದೆ ಆದಿವಾಸಿಗಳನ್ನು ವಂಚಿಸುತ್ತಿದೆ. ದಿಡ್ಡಳ್ಳಿಯಲ್ಲಿರುವ ಸ್ಥಳೀಯ ಆದಿವಾಸಿಗಳಿಗೆ ಮೊದಲು ನಿವೇಶನ ನೀಡಬೇಕೆಂದು ಆದಿವಾಸಿ ಮುಖಂಡರು ಒತ್ತಾಯಿಸಿದ್ದಾರೆ.


ಪಾಲಿಬೆಟ್ಟದ ಅನುಗ್ರಹ ಸಭಾಂಗಣದಲ್ಲಿ ಬುಡಕಟ್ಟು ಕೃಷಿಕರ ಸಂಘ, ಎರವ ಸಮಾಜ, ಸೋಲಿಗ ಸಮುದಾಯ, ಅರಣ್ಯ ಹಕ್ಕು ಸಮಿತಿ ಮತ್ತು ಬೆಳೆಗಾರರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಬುಡಕಟ್ಟು ಕೃಷಿಕರ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಜೆ.ಕೆ. ರಾಮು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬೆಳೆಗಾರರು ಹಾಗೂ ಆದಿವಾಸಿಗಳು ಅನ್ಯೋನತೆಯಿಂದ ಜೀವನ ನಡೆಸುತ್ತಿದ್ದು, ಇದುವರೆಗೂ ಯಾವುದೇ ಸಮಸ್ಯೆಗಳು ಉದ್ಭವವಾಗಿಲ್ಲ. ಕೆಲವರು ಆದಿವಾಸಿಗಳು ಹಾಗೂ ಬೆಳೆಗಾರರ ನಡುವೆ ಬಿರುಕು ಮೂಡಿಸುತ್ತಿರುವುದು ಖಂಡನೀಯ ಎಂದರು.


ಕಳೆದ ಹಲವು ವರ್ಷಗಳಿಂದ ನೆಲೆಸಿರುವ ಗಿರಿಜನರ ಸಮಸ್ಯೆಗಳನ್ನು ಬಗೆ ಹರಿಸದೆ ಇದೀಗ ದಿಢೀರಾಗಿ ದಿಡ್ಡಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು ಎಂಬ ಕಾರಣಕ್ಕೆ ಸೌಕರ್ಯ ನೀಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಅವರಿಗೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ನೀಡಲಿ. ಆದಿವಾಸಿಗಳಿಗೆ ಕೂಡಲೇ ಮೂಲ ಸೌಕರ್ಯವನ್ನು ಒದಗಿಸುವಂತೆ ಒತ್ತಾಯಿಸಿದರು.
ಆದಿವಾಸಿ ಮುಖಂಡೆ ಹಾಗೂ ಮಾಲ್ದಾರೆ ಗ್ರಾಪಂ ಸದಸ್ಯೆ ಇಂದಿರಾ ಮಾತನಾಡಿದರು. ಕೊಡಗು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜೆ.ಎ. ಕರುಂಬಯ್ಯ ವಿಚಾರ ಸಂಕೀರಣದ ಅಧ್ಯಕ್ಷತೆ ವಹಿಸಿದ್ದರು.


ವಿಚಾರ ಸಂಕಿರಣದಲ್ಲಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹಾಗೂ ಮಾಲ್ದಾರೆ ಗ್ರಾಪಂ ಉಪಾಧ್ಯಕ್ಷ ರಾಜು, ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ. ರಾಜು, ಎರವ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಸಿ. ಸಂಜೀವ, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎ.ಸಿ. ಗಣಪತಿ, ಜಿಪಂ ಸದಸ್ಯರಾದ ಲೀಲಾವತಿ, ಪಂಕಜ ಬೆಳೆಗಾರ ನಂದಾ ಸುಬ್ಬಯ್ಯ ಪ್ರಮುಖರಾದ ರಾಯ್ ಡೇವಿಡ್, ಸಿದ್ದಪ್ಪ, ಶಂಕರ ಸೇರಿದಂತೆ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News