ಅಗತ್ಯವಿದ್ದರೆ ಕಂಬಳಕ್ಕೆ ಸುಗ್ರೀವಾಜ್ಞೆ: ಸಿದ್ಧರಾಮಯ್ಯ
ಮೈಸೂರು, ಜ.24: "ಜಲ್ಲಿಕಟ್ಟು ಹಾಗೂ ಕಂಬಳ ಬೇರೆ ಬೇರೆ ಆಚರಣೆಯಾಗಿವೆ. ಸದ್ಯ ಕಂಬಳ ಆಚರಣೆ ವಿಚಾರ ಕೋರ್ಟ್‌ನಲ್ಲಿದೆ. ಆದಾಗ್ಯೂ ಅಗತ್ಯಬಿದ್ದರೆ ಕಂಬಳ ಆಚರಣೆಗೆ ಸರಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಸಿದ್ಧವಿದೆ''ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ತಮಿಳುನಾಡಿನ ಜಾನಪದ ಕ್ರೀಡೆ ಜಲ್ಲಿಕಟ್ಟು ಆಚರಣೆಗೆ ಅಲ್ಲಿನ ಸರಕಾರ ಕೇಂದ್ರ ಸರಕಾರದ ಸೂಚನೆಯಂತೆ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಕರ್ನಾಟಕದ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳ ಆಚರಣೆಗೆ ಅವಕಾಶ ನೀಡಬೇಕೆಂಬ ಆಗ್ರಹ ಕೇಳಿಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
‘‘ನಾನು ಸರ್ವಪಕ್ಷಗಳೊಂದಿಗೆ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಒಂದು ತಿಂಗಳು ಕಳೆದಿದೆ. ಆದರೆ, ಒಂದು ನಯಾ ಪೈಸೆಯನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯುಡಿಯೂರಪ್ಪ ಅವರು ಇಲ್ಲಿ ಮಾತನಾಡುವ ಬದಲಿಗೆ ದಿಲ್ಲಿಗೆ ಹೋಗಿ ಮಾತನಾಡಲಿ’’ ಎಂದು ಬರಪರಿಹಾರ ಮೊತ್ತವನ್ನು ಬಿಡುಗಡೆ ಮಾಡದ ಕೇಂದ್ರ ಸರಕಾರದ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.