ಎಬಿವಿಪಿಯ ಆರೋಪದಲ್ಲಿ ಹುರುಳಿಲ್ಲ
ಚಿಕ್ಕಮಗಳೂರು, ಜ.24: ಶೃಂಗೇರಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆಗೆ ನ್ಯಾಯ ಕೋರಿ ನಗರದಲ್ಲಿ ಎಬಿವಿಪಿ ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ವಿನಯ್ ಬಿದರೆ ಎಂಬವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಎಸ್ಪಿ ಕೆ.ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಭೆಯಲಿ ಭಾಷಣ ಮಾಡುವ ಸಂದರ್ಭದಲ್ಲಿ ವಿನಯ್ ಬಿದರೆ, ಎಸ್ಪಿಯವರು ಕಾಂಗ್ರೆಸ್ ಏಜೆಂಟರಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ, ಒಂದು ಸಂಘಟನೆಗೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಅವರ ಕೆಲವು ವೈಯಕ್ತಿಕ ಆಪಾದನೆಗಳಿಗೆ ನಾನು ಇಲಾಖೆ ಅಧಿಕಾರಿಯಾಗಿ ಪ್ರತಿಕ್ರಿಯಿಸದೇ ಸಾಮಾನ್ಯ ನಾಗರಿಕನಾಗಿ ಪ್ರತಿಕ್ರಿಯಿಸುವುದಾಗಿ ತಿಳಿಸಿರುವ ಎಸ್ಪಿ ಅಣ್ಣಾಮಲೈ, ನಾನು 2013ರ ಸೆ.4 ರಂದು ಸರಕಾರಿ ನೌಕರಿಗೆ ಸೇರಿದ್ದು, ಈತನಕ ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ, ಜಾತಿ ಧರ್ಮ ಎನ್ನದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದೇನೆ. ನಾನು ದೇಶದಲ್ಲಿನ 120 ಕೋಟಿ ಜನರಿಗಾಗಿ ಸರ್ವಧರ್ಮ ಸಮಾನತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಎಸ್ಪಿ ಅವರು ಹೆಣ್ಣು ಮಕ್ಕಳ ಬಗ್ಗೆ ಅಗೌರವ ತೋರಿದ್ದಾರೆಂದು ಆಪಾದಿಸಿದ್ದಾರೆ. ನಾನು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡು ಬಂದವ. ನಾನು ಯಾವಾಗಲೂ ಹೆಣ್ಣು ಮಕ್ಕಳು ಮತ್ತು ಹಿರಿಯರಿಗೆ ಅತಿಯಾದ ಗೌರವವನ್ನು ನೀಡುತ್ತಿದ್ದೇನೆ. ಯಾವುದೇ ಹೆಣ್ಣು ಮಕ್ಕಳಿಗೆ ಅಗೌರವ ತೋರಿಸಿರುವ ಬಗ್ಗೆ ಆ ಹೆಣ್ಣು ಮಗಳೇ ಬಂದು ನನ್ನ ವಿರುದ್ಧ ಆಪಾದನೆ ಮಾಡಿದರೆ ಅಥವಾ ಮಾಧ್ಯಮದವರ ಮುಂದೆ ಆಪಾದನೆ ಮಾಡಿದ್ದರೆ ನಾನು ತಲೆ ಬಾಗುತ್ತೇನೆ ಎಂದಿದ್ದಾರೆ.
ಯಾರೋ ಒಬ್ಬರು ಜನ ಸಮೂಹ ದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಇಲ್ಲದ ಸಲ್ಲದ ಆರೋಪಗಳನ್ನು ಹೊರಿಸುವುದರಿಂದ ನಾನು ಪ್ರತಿಕ್ರಿಯೆ ಹೆಚ್ಚಾಗಿ ನೀಡುವುದಿಲ್ಲ ಎಂದಿರುವ ಎಸ್ಪಿ, ನಾನೊಬ್ಬ ಸಾಮಾನ್ಯ ಮನುಷ್ಯ, ಜನಾಹಿತಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಿದರೆಯವರು ನನ್ನ ಮೇಲೆ ವೈಯಕ್ತಿಕವಾಗಿ ಕೆಲವು ಆಪಾದನೆಗಳನ್ನು ಮಾಡಿದ್ದಾರೆ. ಆದರೆ, ನಾನು ಶಿಸ್ತಿನ ಇಲಾಖೆಯ ಅಧಿಕಾರಿಯಾಗಿರುವ ಕಾರಣ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎಸ್ಪಿ ಕೆ.ಅಣ್ಣಾಮಲೈ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.