ಅಕ್ರಮ ಕಲ್ಲು ಗಣಿಗಾರಿಕೆ
ಶಿವಮೊಗ್ಗ, ಜ.24: ಯಾವುದೇ ಪರವಾನಿಗೆಯಿಲ್ಲದೆ ಖಾತೆ ಜಮೀನಿನಲ್ಲಿ ಸ್ಫೋಟಕ ವಸ್ತು ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಗಣಿ ಮತ್ತು ಭೀ ವಿಜ್ಞಾನ ಇಲಾಖೆ ಹಾಗೂ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿದೆ. ಜೊತೆಗೆ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗ ತಾಲೂಕಿನ ಕಲ್ಲುಗಂಗೂರು ಗ್ರಾಮದಲ್ಲಿ ವರದಿಯಾಗಿದೆ. ಪ್ರಭು(36) ಹಾಗೂ ತಿಮ್ಮೇಶ್(40) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉಳಿದಂತೆ ಗಣಿಗಾರಿಕೆ ನಡೆಸುತ್ತಿದ್ದ ಜಮೀನಿನ ಮಾಲಕರು ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಫೋಟಕ ವಶ: ಖಾತೆ ಜಮೀನಿನಲ್ಲಿ ಕಳೆದ ಹಲವು ದಿನಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.
ವ್ಯಾಪಕ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಕೂಡ ಬಳಕೆ ಮಾಡಲಾಗುತ್ತಿತ್ತು. ಈ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯ ಸಾರ್ವಜನಿಕರಿಂದ ಖಚಿತ ವರ್ತಮಾನ ಲಭಿಸಿತ್ತು. ಇದರ ಆಧಾರದ ಮೇಲೆ ಅಧಿಕಾರಿಗಳು ಪೊಲೀಸರ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಕಲ್ಲುಗಳ ಸ್ಫೋಟಕ್ಕೆ ಸಂಗ್ರಹಿಸಿಡಲಾಗಿದ್ದ ಜೆಲ್ ಮಾದರಿಯ ಸುಮಾರು 92 ಸುಧಾರಿತ ಸ್ಫೋಟಕ ವಸ್ತುಗಳು ಸೇರಿದಂತೆ ಒಂದು ಕೇಪ್‌ನ್ನು ವಶಕ್ಕೆ ಪಡೆದುಕೊಂಡಿದ್ದು, ಗಣಿ ಮತ್ತು ಭೂ ವಿಜ್ಞ್ಞಾನ ಇಲಾಖೆಯ ಅಧಿಕಾರಿಗಳಾದ ರಶ್ಮಿ, ವಿಂಧ್ಯಾ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.