ಯಡಿಯೂರಪ್ಪ-ಈಶ್ವರಪ್ಪನಡುವೆ ಹುಳಿ ಹಿಂಡಿಲ್ಲ
ಶಿವಮೊಗ್ಗ, ಜ.24: ಇತ್ತೀಚೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಟೀಕಾಪ್ರಹಾರ ನಡೆಸಿ, ಕೆ.ಎಸ್. ಈಶ್ವರಪ್ಪರನ್ನುಸಮರ್ಥಿಸಿಕೊಂಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಬಿ.ಎಸ್.ವೈ. ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
‘ನಾವು ಭಿನ್ನಮತೀಯರಲ್ಲ. ಪಕ್ಷದ ನಿಷ್ಠಾವಂತರು. ರಾಯಣ್ಣ ಬ್ರಿಗೇಡ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ. ನಾನು ಪಕ್ಷ ಹೇಳಿದಂತೆ ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಹಾಗಾಗಿ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ. ಕೆ.ಎಸ್. ಈಶ್ವರಪ್ಪನೀಡುತ್ತಿರುವ ಹೇಳಿಕೆಗಳ ಬಗ್ಗೆ ಅವರನ್ನೇ ಕೇಳಬೇಕು’ ಎಂದು ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಆಯನೂರು ಮಂಜುನಾಥ್ ನಡೆಸಿದ ಟೀಕಾ ಪ್ರಹಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಜಿಲ್ಲಾಧ್ಯಕ್ಷನಾಗಬೇಕೆಂದು ಅವರು ಹಾರೈಸಿದ್ದಾರೆ. ಹಾರೈಕೆ ಇದ್ದರೆ ಅಧ್ಯಕ್ಷನಾಗುತ್ತೇನೆ.
ಜವಾಬ್ದಾರಿ ನಿಬಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ. ಹಾಗೆಯೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ತಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂಬಆಯನೂರು ಮಾತಿಗೆ, ‘ಶಿವಮೊಗ್ಗ ನಗರದಿಂದ ಪಕ್ಷದ ಯಾವ ಕಾರ್ಯಕರ್ತನಾದರೂ ಸ್ಪರ್ಧಿಸಬಹುದು. ಟಿಕೆಟ್ ಕೇಳಬಹುದಾಗಿದೆ’ ಎಂದು ಉತ್ತರಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿರುವುದು ನಿಜ ಎಂಬುದನ್ನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಮಾಧ್ಯಮಗಳ ಮೂಲಕ ಉತ್ತರ ನೀಡದಂತೆ ಪಕ್ಷದ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸುತ್ತೇನೆ. ಏನೇ ಇದ್ದರೂ ರಾಜ್ಯಾಧ್ಯಕ್ಷರ ಬಳಿಯೇ ಹೇಳುತ್ತೇನೆ’ ಎಂದು ಉತ್ತರಿಸಲು ನಿರಾಕರಿಸಿದರು. ಇತ್ತೀಚೆಗೆ ಪಕ್ಷದಲ್ಲಿ ನಡೆದಿರುವ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ನೋವುಂಟು ಮಾಡಿರುವುದು ಸತ್ಯ. ಪಕ್ಷದ ರಾಜ್ಯದ ಉಸ್ತುವಾರಿ ಮುರಳೀಧರರಾವ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಕಾರ್ಯಕರ್ತರ ನೋವು ಏನೆಂಬುದು ಅವರ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಬಿಕ್ಕಟ್ಟಿಗೆ ಪರಿಹಾರ ದೊರಕಲಿದೆ. ಪರಿಹಾರ ಮಾಡುವುದು ತಾನಲ್ಲ. ಹೈಕಮಾಂಡ್. ಆದಷ್ಟು ಬೇಗ ಇತ್ತ ಗಮನಹರಿಸಬೇಕು ಎಂದರು.