5 ಲಕ್ಷ ರೂ. ಪತ್ತೆಯಾಗಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ: ರಮೇಶ್ ಜಾರಕಿಹೊಳಿ ಸವಾಲು
ಬೆಂಗಳೂರು, ಜ. 25: ತಮ್ಮ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿಯ ಮೇಲೆ 2 ಸಾವಿರ ರೂ. ಮುಖಬೆಲೆ 41ಲಕ್ಷ ರೂ. ನಗದು ಪತ್ತೆಯಾಗಿರುವುದು ಸುಳ್ಳು. ತಮ್ಮ ಮನೆಯಲ್ಲಿ ಕನಿಷ್ಠ 5 ಲಕ್ಷ ರೂ. ಸಿಕ್ಕಿದ್ದರೂ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ತಿಳಿಸಿರುವಂತೆ ತಮ್ಮ ಬಳಿ ಅಷ್ಟೊಂದು ದೊಡ್ಡ ಮೊತ್ತದ ನಗದು, ಚಿನ್ನಾಭರಣ ಇಲ್ಲ. ತಮ್ಮ ನಿವಾಸದಲ್ಲಿ ಕೇವಲ 41 ಸಾವಿರ ರೂ. ಪತ್ತೆಯಾಗಿದೆ. ಆದರೆ, ಅಧಿಕಾರಿಗಳು 41 ಲಕ್ಷ ರೂ. ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ತಮ್ಮ ರಾಜೀನಾಮೆಯನ್ನು ಕೇಳಿಲ್ಲ. ರಾಜೀನಾಮೆಯನ್ನು ಕೇಳುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ರಾಜೀನಾಮೆ ಕೇಳಿದರೆ ನೀಡಲು ಸಿದ್ಧ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಒಟ್ಟು 16 ಮಂದಿ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ತಮ್ಮ ಹೆಸರಿನಲ್ಲಿ ಇಲ್ಲದ ಆಸ್ತಿಯ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಆದರೂ ಆದಾಯ ತೆರಿಗೆ ಇಲಾಖೆಯ ಮೇಲೆ ವಿಶ್ವಾಸವಿದೆ ಎಂದು ಅವರು ಹೇಳಿದರು.
ತಾನು ಸೌಭಾಗ್ಯ ಲಕ್ಷೀ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ತಮ್ಮ ಬಳಿ ಅಷ್ಟೊಂದು ದೊಡ್ಡ ಮೊತ್ತ ಹಣ ಪತ್ತೆಯಾಗಿಲ್ಲ. ಆದರೂ. ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.
‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಅಸಮಾಧಾನ ಇರುವಂತೆಯೇ ಎಲ್ಲ ಪಕ್ಷಗಳಲ್ಲಿ ಇದು ಸಹಜ. ಅದೇ ರೀತಿಯಲ್ಲೆ ಕಾಂಗ್ರೆಸ್ ಪಕ್ಷದಲ್ಲಿಯೂ ಕೆಲವರು ಅಂತಹ ಪಿತೂರಿ ನಡೆಸಿರಬಹುದು’
-ರಮೇಶ್ ಜಾರಕಿಹೊಳಿ ಸಣ್ಣ ಕೈಗಾರಿಕಾ ಸಚಿವ