×
Ad

ಈಶ್ವರಪ್ಪವಿರುದ್ಧ ಅಂತಿಮ ಹಣಾಹಣಿಗೆ ಬಿಎಸ್‌ವೈ ಸಜ್ಜು

Update: 2017-01-25 22:57 IST

ಸಂಸದರು, ಶಾಸಕರಿಂದ ಈಶ್ವರಪ್ಪ ವಿರುದ್ಧ ದೂರು
ಬಿ. ರೇಣುಕೇಶ್
 ಶಿವಮೊಗ್ಗ, ಜ. 25: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆದುಕೊಂಡು ಬಂದಿರುವ ಕಲಹವು ಬಹುತೇಕ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಬಿ.ಎಸ್.ಯಡಿಯೂರಪ್ಪ ಕೆ.ಎಸ್.ಈಶ್ವರಪ್ಪವಿರುದ್ಧ ಅಂತಿಮ ಹಣಾಹಣಿಗೆ ಸಜ್ಜಾ ಗಿದ್ದು, ಇದೀಗ ಅಂತಃಕಲಹವು ಕುತೂಹಲಕಾರಿ ಘಟ್ಟ ತಲುಪಿದೆ. ಬ್ರಿಗೇಡ್ ರಚಿಸಿಕೊಂಡು ಪಕ್ಷದ ಸಂಘಟನೆಗೆ ಧಕ್ಕೆ ತರುತ್ತಿರುವ ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸಿ, ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ದಿಲ್ಲಿಯಲ್ಲಿ ಪಕ್ಷದ ವರಿಷ್ಠರಿಗೆ ಹಲವು ಬಾರಿ ಬಿ.ಎಸ್.ವೈ, ದೂರು ಸಲ್ಲಿಸಿದ್ದಾರೆ.

ಅನಿವಾರ್ಯವಾದಲ್ಲಿ ಪಕ್ಷದಿಂದ ಅಮಾನತುಗೊಳಿಸುವಂತೆಯೂ ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ವರಿಷ್ಠರು ಈ ದೂರಿನ ಬಗ್ಗೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಜೊತೆಗೆ ಈಶ್ವರಪ್ಪಗೆ ಯಾವುದೇ ಸೂಚನೆ ನೀಡುವ ಗೋಜಿಗೂ ಹೋಗಿಲ್ಲವೆನ್ನಲಾಗಿದೆ. ಇನ್ನೊಂದೆಡೆ ಸಂಘಪರಿವಾರದ ಕೆಲ ಹಿರಿಯ ನಾಯಕರು, ಪಕ್ಷದ ಕೆಲ ಮುಖಂಡರ ಜೊತೆಗೆ ಬಿ.ಎಸ್.ವೈ. ವಿರೋಧಿ ಪಾಳೇಯದಲ್ಲಿರುವವರು ಈಶ್ವರಪ್ಪ ಪರ ಬೆಂಬಲವಾಗಿ ನಿಂತುಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಈಶ್ವರಪ್ಪ ಬ್ರಿಗೇಡ್ ಚಟುವಟಿಕೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ್ದರು.

ಈ ಇಬ್ಬರು ನಾಯಕರ ತವರೂರು ಶಿವಮೊಗ್ಗದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದ ಬೆಂಬಲಿಗ ಕಾರ್ಯಕರ್ತರು, ಪಕ್ಷದ ಜಿಲ್ಲಾ ಕಚೇರಿಯ ಆವರಣದಲ್ಲಿಯೇ ಹೊಡೆದಾಡಿಕೊಂಡಿದ್ದ ಘಟನೆಯೂ ನಡೆದಿತ್ತು. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿಯೂ ಭಿನ್ನಮತ ಕಾಣಿಸಿಕೊಂಡಿತ್ತು.

 ಇಷ್ಟೆಲ್ಲ ಅವಾಂತರದ ನಡುವೆಯೂ ಈ ಇಬ್ಬರು ನಾಯಕರು ತಮ್ಮ ನಿಲುವಿಗೆ ಬಿಗಿಯಾಗಿ ಅಂಟಿಕೊಂಡಿದ್ದಾರೆ. ಈಶ್ವರಪ್ಪ ಬ್ರಿಗೇಡ್ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂದು ಬಿ.ಎಸ್.ವೈ. ಪಟ್ಟು ಹಿಡಿದಿದ್ದರೆ, ಇದು ಸಾಧ್ಯವೇ ಇಲ್ಲ ಎಂದು ಈಶ್ವರಪ್ಪ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಈ ನಡುವೆ ರಾಷ್ಟ್ರೀಯ ನಾಯಕರು ಮಧ್ಯಪ್ರವೇಶಿಸದಿರುವುದರಿಂದ ಕಮಲ ಕಲಹ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳಲಾರಂಭಿಸಿದ್ದು, ಭಿನ್ನಮತೀಯ ಚಟುವಟಿಕೆಗಳು ತಾರಕಕ್ಕೇರುವಂತೆ ಮಾಡಿದೆ. ಒತ್ತಡ ತಂತ್ರ?: ಕಳೆದ ಹಲವು ವರ್ಷಗಳಿಂದ ಈಶ್ವರಪ್ಪ ಜೊತೆ ನಡೆದುಕೊಂಡು ಬರುತ್ತಿರುವ ಕಲಹಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದಂತಿರುವ ಬಿ.ಎಸ್.ವೈ, ಶತಾಯಗತಾಯ ಈಶ್ವರಪ್ಪಗೆ ತಕ್ಕ ಪಾಠ ಕಲಿಸುವ ತೀರ್ಮಾನ ಮಾಡಿದ್ದಾರೆನ್ನಲಾಗಿದೆ.

ಅವರನ್ನು ಪಕ್ಷದಿಂದ ಉಚ್ಚಾಟಿಸಲು ರಾಷ್ಟ್ರೀಯ ಮುಖಂಡರ ಮೇಲೆ ಒತ್ತಡ ಹಾಕುವ ಕೆಲಸಕ್ಕೆ ಚಾಲನೆ ನೀಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಸಂಸದರು, ವಿಧಾನಸಭೆ-ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಶಾಸಕರ ಮೂಲಕ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಈಶ್ವರಪ್ಪ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರಗಿಸಬೇಕು’ ಎಂದು ಈ ಮುಖಂಡರುಗಳು ಕೇಂದ್ರ ವರಿಷ್ಠರಿಗೆ ಆಗ್ರಹಿಸಲು ನಿರ್ಧರಿಸಿದ್ದು, ಇಷ್ಟರಲ್ಲಿಯೇ ಪ್ರತ್ಯೇಕ ತಂಡಗಳಲ್ಲಿ ದಿಲ್ಲಿಗೆ ತೆರಳಿ ದೂರು ನೀಡುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸುಮಾರು 12 ಸಂಸದರು ಸಹಿ ಹಾಕಿದ ಪತ್ರ ವರಿಷ್ಠರಿಗೆ ರವಾನೆಯಾಗಿದೆ ಎಂಬ ಮಾಹಿತಿಯೂ ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರದ ಗದ್ದುಗೆಯೇರುವ ಶಕ್ತಿಯಿದ್ದರೂ ಈಶ್ವರಪ್ಪ ಬ್ರಿಗೇಡ್ ರಚಿಸಿಕೊಂಡು ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯದಂತೆ ಮಾಡಿ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಸ್ಥಿತಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಗೇಡ್‌ಗೆ ಕಡಿವಾಣ ಹಾಕಿ ಇಲ್ಲವೇ ಈಶ್ವರಪ್ಪರನ್ನು ಪಕ್ಷದಿಂದ ಉಚ್ಚಾಟಿಸಿ’ ಎಂದು ಬಿ.ಎಸ್.ವೈ. ಬೆಂಬಲಿಗ ಜನಪ್ರತಿನಿಧಿಗಳು ವರಿಷ್ಠರಿಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News