ಹೊನ್ನೇತಾಳು ಸಹಕಾರ ಸಂಘದಲ್ಲಿ ಅವ್ಯವಹಾರ
ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸಹಕಾರಿ ಇಲಾಖೆ ಅಧಿಕಾರಿಗಳು?
ಶಿವಮೊಗ್ಗ, ಜ. 25: ಜಿಲ್ಲೆಯ ಸಹಕಾರಿ ಬ್ಯಾಂಕಿಂಗ್‌ನಲ್ಲಿ ಬೆಳಕಿಗೆ ಬರುತ್ತಿರುವ ‘ಗೋಲ್‌ಮಾಲ್ ಸರಮಾಲೆ’ಗಳ ಸಾಲಿಗೆ ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾದ, ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣ ಹೊಸ ಸೇರ್ಪಡೆಯಾಗಿದೆ. ಈ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮುಚ್ಚಿ ಹಾಕುವ ಹುನ್ನಾರಗಳು ನಡೆಯಲಾರಂಭಿಸಿವೆ.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಹಕಾರಿ ಇಲಾಖೆ ಅಧಿಕಾರಿಗಳು, ಯಾವುದೇ ಸದ್ದುಗದ್ದಲವಿಲ್ಲದೆ ಈ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಗಳು ಕೇಳಿಬರಲಾರಂಭಿಸಿವೆ. ಈಗಾಗಲೇ ಸಹಕಾರಿ ಇಲಾಖೆಯು ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎರಡು ವರ್ಷದ ವಹಿವಾಟಿನ ತನಿಖೆ ನಡೆಸಿದ್ದು, ಪ್ರಾಥಮಿಕ ಹಂತದ ತನಿಖೆಯಲ್ಲಿಯೇ ಗಂಭೀರ ಸ್ವರೂಪದ ಹಣಕಾಸು ಅವ್ಯವಹಾರ ನಡೆದಿರುವುದು ತಿಳಿದುಬಂದಿದೆ ಎನ್ನಲಾಗಿದೆ.
ಈ ನಡುವೆ ಹಗರಣ ಬೆಳಕಿಗೆ ಬರುತ್ತಿದ್ದಂತೆ ಅವ್ಯವಹಾರ ನಡೆಸಿದವರಲ್ಲಿ ನಡುಕ ಉಂಟಾಗಿದೆ. ಈ ನಡುವೆ ಅವ್ಯವಹಾರದ ವ್ಯಾಪ್ತಿಯಲ್ಲಿದ್ದ ಮೊತ್ತದ ಬಾಬು 26 ಲಕ್ಷ ರೂ.ವನ್ನು ಇತ್ತೀಚೆಗೆ ಸಂಘದ ಖಾತೆಗೆ ಜಮಾ ಆಗಿದೆ ಎಂದು ಹೇಳಲಾಗುತ್ತಿದೆ. ಭಾರೀ ಹಗರಣ: ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ವಾರ್ಷಿಕ 13 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸುತ್ತದೆ. ಪ್ರತಿಷ್ಠಿತ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕೆಲ ವರ್ಷಗಳಿಂದ ಸಂಘದ ಹಣಕಾಸು ವ್ಯವಹಾರದಲ್ಲಿ ಭಾರೀ ದೊಡ್ಡ ಮಟ್ಟದ ಅವ್ಯವಹಾರ ನಡೆದುಕೊಂಡು ಬಂದಿತ್ತು. ಸಹಕಾರಿ ನಿಯಮ ಉಲ್ಲಂಘನೆ, ಹಣಕಾಸು ದುರ್ಬಳಕೆ, ಷೇರುದಾರ ಸದಸ್ಯರ ಹಣ ವಂಚನೆ, 2007 ಹಾಗೂ 2012 ರಲ್ಲಿ ರಾಜ್ಯ ಸರಕಾರದ ರೈತರ ಸಾಲಮನ್ನಾ ಮೊತ್ತ ದುರುಪಯೋಗ, ಸಾಲಮನ್ನಾ ಹಾಗೂ ಸಾಲ ತೀರುವಳಿ, ಸಾಲ ನವೀಕರಣ ಅರ್ಜಿಗೆ ಸಹಿ ಪಡೆಯುವ ಸಂದರ್ಭ ರೈತರಿಗೆ ಗೊತ್ತಿಲ್ಲದಂತೆ ದಾಖಲೆ ಸೃಷ್ಟಿಸಿ ವಂಚನೆ, ಕಿಸಾನ್ ಸಾಲ ಮಂಜೂರಾತಿಯಲ್ಲಿಯೂ ಲಕ್ಷಾಂತರ ಅಕ್ರಮ, ಪಿಗ್ಮಿ, ಠೇವಣಿ, ಷೇರುದಾರ ಶುಲ್ಕ, ಲಾಭಾಂಶ ಸೇರಿದಂತೆ ಸಂಘದ ಅನೇಕ ಬಾಬ್ತಿನಲ್ಲಿ ಕೋಟ್ಯಂತರ ರೂ. ಮೊತ್ತದ ಅವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಅವ್ಯವಹಾರದ ಮೊತ್ತ ಹಲವು ಕೋಟಿ ರೂ.ಗೂ ಅಧಿಕವೆಂದು ಹೇಳಲಾಗುತ್ತಿದ್ದು, ಇದು ಸಹಕಾರಿ ವಲಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಜಾಣಮೌನ: ಸಹಕಾರಿ ಸಂಘದಲ್ಲಿ ಕೋಟಿ ಕೋಟಿ ರೂ. ಮೌಲ್ಯದ ಗೋಲ್‌ಮಾಲ್ ನಡೆದಿದ್ದರೂ ಈ ಬಗ್ಗೆ ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿಯಾಗಲಿ ಅಥವಾ ಸಹಕಾರಿ ಇಲಾಖೆಯಾಗಲಿ ಉನ್ನತ ಮಟ್ಟದ ತನಿಖೆಗೆ ಮುಂದಾಗದೆ ಜಾಣ ಮೌನಕ್ಕೆ ಶರಣಾಗಿರುವುದು ಹಲವು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಘದ 2008 ರ ವಾರ್ಷಿಕ ಸಾಲಿನಿಂದ 2017 ರವರೆಗಿನ ಸಂಘದ ಹಣಕಾಸು, ಆಡಳಿತ ನಿರ್ವಹಣೆ ಕುರಿತು ತನಿಖೆ ನಡೆಸಬೇಕು ಎಂದು ಸಂಘದ ಆಡಳಿತ ಮಂಡಳಿ ನಿರ್ಣಯ ಕೈಗೊಂಡು ಸಹಕಾರಿ ಇಲಾಖೆಗೆ ಸಲ್ಲಿಸಿದೆ ಎನ್ನಲಾಗಿದೆ.
ಆದರೆ ಮತ್ತೊಂದೆಡೆ ಸಹಕಾರಿ ಇಲಾಖೆಯು, ಸಿಬ್ಬಂದಿಯ ಕೊರತೆಯ ಕುಂಟು ನೆಪವೊಡ್ಡಿ ಕೇವಲ 2016ರ ಎಪ್ರಿಲ್ 1 ರಿಂದ ಡಿಸೆಂಬರ್ ಅಂತ್ಯದ ಅವಧಿಯ ವ್ಯವಹಾರ ಕುರಿತು ತನಿಖೆಗೆ ಮುಂದಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಂಘದಲ್ಲಿ ನಡೆದಿರುವ ಗೋಲ್‌ಮಾಲ್ ಮುಚ್ಚಿ ಹಾಕಲು ಸಹಕಾರಿ ವಲಯದ ಪ್ರಭಾವಿ ಮುಖಂಡರು ರಂಗ ಪ್ರವೇಶ ಮಾಡಿದ್ದಾರೆಂದು ಹೇಳಲಾಗಿದ್ದು, ಇವರ ತಾಳಕ್ಕೆ ತಕ್ಕಂತೆ ಜಿಲ್ಲೆಯ ಸಹಕಾರಿ ಇಲಾಖೆಯ ಅಧಿಕಾರಿಗಳು ಕುಣಿಯಲಾರಂಭಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಒಟ್ಟಾರೆ ಜಿಲ್ಲೆಯ ಸಹಕಾರಿ ಬ್ಯಾಂಕಿಂಗ್‌ನಲ್ಲಿ ಒಂದರ ನಂತರ ಒಂದು ಹಗರಣ ಬಯಲಿಗೆ ಬರುತ್ತಿರುವುದು ಸಹಕಾರಿ ವಲಯಕ್ಕೆ ಕಪ್ಪುಚುಕ್ಕೆಯಾಗಿದ್ದು, ಪ್ರಸ್ತುತ ಹೊನ್ನೇತಾಳು ಸಹಕಾರಿ ಸಂಘದಲ್ಲಿ ನಡೆದಿರುವ ಕೋಟಿ ಕೋಟಿ ರೂ. ಗೋಲ್‌ಮಾಲ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲು ಜಿಲ್ಲಾಡಳಿತ ಮುಂದಾಗಲಿದೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.