ಲಂಚ ಸ್ವೀಕಾರ ಖಂಡನಾರ್ಹ: ಸಚಿವ ಪರಮೇಶ್ವರ್
ಚಿಕ್ಕಮಗಳೂರು, ಜ.25: ಅಧಿಕಾರಿಗಳು ಲಂಚ ಪಡೆಯುವುದು ಖಂಡನಾರ್ಹ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಲಂಚ ಸ್ವೀಕಾರದ ಆರೋಪದಲ್ಲಿ ಅಮಾನತುಗೊಂಡ ಕೊಪ್ಪ ತಾಪಂ ಇಒ ಲಕ್ಷ್ಮೀ ಮೋಹನ್ ಮರಳಿ ಅದೇ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗಲು ಕೆಇಟಿ ಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರ ಬಳಿ ವರದಿ ತೆಗೆದುಕೊಂಡು ಸಚಿವ ಸಂಪುಟದ ಮುಂದೆ ಇಡಲಾಗುವುದು. ಈ ಹಿಂದೇ ಇದೇ ರೀತಿ ಲಂಚ ಸ್ವೀಕರಿಸಿದ ಹಲವಾರು ಅಧಿಕಾರಿಗಳನ್ನು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಅಮಾನತು ಮಾಡಲಾಗಿದೆ ಎಂದು ನುಡಿದರು.
ಈ ಪ್ರಕರಣವನ್ನು ಕೂಡ ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗಿ ಚರ್ಚೆ ಮಾಡಿ ಅಧಿಕಾರಿಯನ್ನು ಅಧಿಕಾರದಿಂದ ವಜಾಗೊಳಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಜಾ ಮಾಡಲು ತೀರ್ಮಾನ ಮಾಡಲಾಗುವುದು. ಮತ್ತೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಅಧಿಕಾರಿಗಳು ಹಣ ತೆಗೆದುಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಭರವಸೆ ನೀಡಿದರು.
ಕೊಪ್ಪತಾಪಂನಲ್ಲಿ ಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀಮೋಹನ್ ಕಚೇರಿಯಲ್ಲಿಯೇ 2 ಸಾವಿರ ರೂ. ಲಂಚ ಸ್ವೀಕರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದ ಮೇಲೆ ಜಿಪಂ ಸಿಇಒ ರಾಘಪ್ರಿಯ ಅಧಿಕಾರಿಯನ್ನು ಅಮಾನತು ಪಡಿಸಿ ಆದೇಶ ಹೊರಡಿಸಿದ್ದರು.