×
Ad

​ಅರಣ್ಯಾಧಿಕಾರಿಗಳ ವರ್ಗಾವಣೆ ಆರೋಪ

Update: 2017-01-25 23:01 IST

ಶಿವಮೊಗ್ಗ, ಜ.25: ತಮ್ಮ ನೇರ-ನಿರ್ಭೀತ ಕಾರ್ಯ ವೈಖರಿಯ ಮೂಲಕ ದಕ್ಷ-ಪ್ರಾಮಾಣಿಕ ಅಧಿಕಾರಿಗಳೆಂದು ಹೆಸರು ಸಂಪಾದಿಸಿದ್ದ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಹಾಗೂ ಅವರ ಪತಿ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಿವಶಂಕರ್ ಅವರ ದಿಢೀರ್ ವರ್ಗಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಕಾರಣಕರ್ತರಾಗಿದ್ದಾರೆ ಎಂದು ಅಣ್ಣಾ ಹಝಾರೆ ಹೋರಾಟ ಸಮಿತಿ ಆರೋಪಿಸಿದೆ.

ತಕ್ಷಣವೇ ಪ್ರಾಮಾಣಿಕ ಅಧಿಕಾರಿ ದಂಪತಿಯ ವರ್ಗಾವಣೆ ರದ್ದುಗೊಳಿಸಬೇಕು. ಅವರನ್ನು ಶಿವಮೊಗ್ಗದಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿ, ಬುಧವಾರ ಅಣ್ಣಾ ಹಝಾರೆ ಹೋರಾಟ ಸಮಿತಿಯು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿತು. ವರ್ಗಾವಣೆ ಶಿಕ್ಷೆ: ಜಿಲ್ಲೆಯಲ್ಲಿ ಪಶ್ಚಿಮಘಟ್ಟ ಪರ್ವತ ಶ್ರೇಣಿ ಸೇರಿದಂತೆ ಅತ್ಯಮೂಲ್ಯ ಅರಣ್ಯ ಪ್ರದೇಶವಿದೆ. ಅರಣ್ಯ ಸಂರಕ್ಷಣೆಗೆ ಕಾನೂನು ಪ್ರಕಾರ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆ ಮುಖಂಡ ಅಶೋಕ್ ಯಾದವ್‌ವಹಿಸಿದ್ದರು.

ಯಾದಗಿರಿ, ಕಲಬುರಗಿ ಡಿಎಫ್‌ಒ ಆಗಿ ನೇಮಕ
2016ರ ಜನವರಿಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಂ.ಎಂ. ವಾನತಿ ಹಾಗೂ ಅವರ ಪತಿ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಿವಶಂಕರ್ ಅವರು ಶಿವಮೊಗ್ಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ವಾನತಿ ಅವರಿಗೆ ಯಾದಗಿರಿಯ ಡಿಎಫ್‌ಒ ಹಾಗೂ ಶಿವಶಂಕರ್‌ಗೆ ಕಲಬುರ್ಗಿಯ ಡಿಎಫ್‌ಒ ಆಗಿ ವರ್ಗಾಯಿಸಿ ಮಂಗಳವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News