ದಿಡ್ಡಳ್ಳಿಯಲ್ಲಿ ನಿವೇಶನ ನೀಡಲು 10 ದಿನಗಳ ಗಡುವು
ಮಡಿಕೇರಿ, ಜ.25: ದಿಡ್ಡಳ್ಳಿಯಲ್ಲಿ ನೆಲೆ ನಿಂತಿರುವ ನಿರಾಶ್ರಿತರಿಗೆ ಮುಂದಿನ 10 ದಿನಗಳ ಒಳಗೆ ನಿವೇಶನ ಹಂಚಲು ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ ಹಾಗೂ ಎ.ಕೆ. ಸುಬ್ಬಯ್ಯ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ಮತ್ತೊಮ್ಮೆ ದಿಡ್ಡಳ್ಳಿಯಿಂದ ಆರಂಭಿಸುವುದಾಗಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಎಸ್. ನಿರ್ವಾಣಪ್ಪ, ಡಿ.23ರಂದು ಪಾಲಿಬೆಟ್ಟದಲ್ಲಿ ಜೆ.ಎ. ಕರುಂಬಯ್ಯ ಅವರ ನೆೇತೃತ್ವದಲ್ಲಿ ನಡೆದ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದರು. ವಿಚಾರ ಸಂಕಿರಣ ನಡೆಸುವ ಮೂಲಕ ತೆಗೆದುಕೊಂಡಿರುವ 6 ನಿರ್ಣಯಗಳಿಗೆ ವಿರೋಧ ವ್ಯಕ್ತಪಡಿಸಿದ ನಿರ್ವಾಣಪ್ಪ, ದಿಡ್ಡಳ್ಳಿಯಲ್ಲಿ ನಿವೇಶನ ನೀಡಬೇಡಿ ಎಂದು ಒತ್ತಾಯಿಸಲು ಇವರು ಯಾರೆಂದು ಪ್ರಶ್ನಿಸಿದರು. ಕೊಡಗಿನಲ್ಲಿರುವ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸಲು ಸರಕಾರ ಇವರ ಅನುಮತಿ ಪಡೆಯಬೇಕೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಯ್ ಡೇವಿಡ್, ಜೆ.ಪಿ. ರಾಜು ಹಾಗೂ ಜೆ.ಕೆ. ರಾಮು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಿರ್ವಾಣಪ್ಪ, ಕಳೆದ 30 ವರ್ಷಗಳಿಂದ ಆದಿವಾಸಿಗಳ ಹೆಸರಿನಲ್ಲಿ ವಿದೇಶಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ರಾಯ್ ಡೇವಿಡ್ ಆದಿವಾಸಿಗಳಿಗಾಗಿ ಖರ್ಚು ಮಾಡಿರುವ ಹಣದ ಬಗ್ಗೆ ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು. ದಿಡ್ಡಳ್ಳಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆಯೆಂದು ಆರೋಪಿಸುತ್ತಿರುವವರು ಇದನ್ನು ಸಾಬೀತು ಪಡಿಸಲಿ ಎಂದು ನಿರ್ವಾಣಪ್ಪಸವಾಲೆಸೆದರು.
ಸಮಿತಿ ಸದಸ್ಯ ಅಮಿನ್ ಮೊಹ್ಸಿನ್, ಮಾತನಾಡಿ, ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದಿಡ್ಡಳ್ಳಿ ಹೋರಾಟವನ್ನು ಮೊಟಕು ಗೊಳಿಸಲು ಷಡ್ಯಂತ್ರ ನಡೆಯುತ್ತಿದೆಯೆಂದು ಆರೋಪಿಸಿದರು.
ಜೆ.ಕೆ. ಅಪ್ಪಾಜಿ ಮಾತನಾಡಿ, ಆದಿವಾಸಿಗಳ ಭಾಷೆಯನ್ನು ಕಲಿತುಕೊಂಡಿರುವ ರಾಯ್ ಡೇವಿಡ್ ಆದಿವಾಸಿಗಳಿಗೆ ವಂಚನೆ ಮಾಡಿರುವುದಲ್ಲದೆ, ಚುನಾವಣೆ ಸಂದರ್ಭ ಆದಿವಾಸಿಗಳ ಹೆಸರಿನಲ್ಲಿ 20 ಲಕ್ಷ ರೂ. ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವಸಂತ, ಸ್ವಾಮಿ ಹಾಗೂ ಮುತ್ತಮ್ಮ ಉಪಸ್ಥಿತರಿದ್ದರು.