×
Ad

ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಕರ್ನಾಟಕದ ನೂತನ ಲೋಕಾಯುಕ್ತರಾಗಿ ನೇಮಕ

Update: 2017-01-26 09:30 IST

ಬೆಂಗಳೂರು, ಜ.26: ನೂತನ ಲೋಕಾಯುಕ್ತರನ್ನಾಗಿ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕಳುಹಿಸಿಕೊಟ್ಟಿದ್ದ ಶಿಫಾರಸ್ಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

ಕಳೆದ ಒಂದು ವರ್ಷದಿಂದ ಖಾಲಿಯಿದ್ದ ಲೋಕಾಯುಕ್ತಕ್ಕೆ ನೂತನ ಸಾರಥಿ ಲಭಿಸಿದಂತಾಗಿದೆ. ರಾಜ್ಯ ಸರಕಾರವು ಮೊದಲ ಬಾರಿ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಹೆಸರನ್ನು ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡಿದ್ದಾಗ, ಕೆಲವು ಸ್ಪಷ್ಟೀಕರಣಗಳನ್ನು ಕೇಳಿ ರಾಜ್ಯಪಾಲರು ಕಡತವನ್ನು ಹಿಂದಕ್ಕೆ ಕಳುಹಿಸಿದ್ದರು.

ಸರಕಾರಕ್ಕೆ ಪತ್ರ ಬರೆದಿದ್ದ ರಾಜ್ಯಪಾಲರು, ನ್ಯಾ.ಪಿ.ವಿಶ್ವನಾಥ ಶೆಟ್ಟಿ ವಿರುದ್ಧ ಕೆಲವು ಗುರುತರವಾದ ಆರೋಪಗಳಿವೆ. ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವರು ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಅಗತ್ಯವಾದ ಪೂರಕ ಮಾಹಿತಿಗಳನ್ನು ಒದಗಿಸುವಂತೆ ಸೂಚಿಸಿ ಶಿಫಾರಸ್ಸನ್ನು ತಿರಸ್ಕರಿಸಿದ್ದರು.

ರಾಜ್ಯಪಾಲರ ಹುಟ್ಟುಹಬ್ಬದ ನಿಮಿತ್ತ ಶುಭ ಕೋರಲು ರಾಜಭವನಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ ಔಪಚಾರಿಕವಾಗಿ ಚರ್ಚೆ ನಡೆಸಿದ್ದರು.

ನ್ಯಾಯಾಂಗ ಬಡಾವಣೆಯಲ್ಲಿ ವಿಶ್ವನಾಥ ಶೆಟ್ಟಿ ನಿವೇಶನ ಪಡೆದದ್ದು ಅಕ್ರಮವೇನಲ್ಲ. ಈ ಬಡಾವಣೆಯಲ್ಲಿ ಬಹುತೇಕ ಎಲ್ಲ ನ್ಯಾಯಮೂರ್ತಿಗಳು ನಿವೇಶನಗಳನ್ನು ಪಡೆದಿದ್ದಾರೆ. ಈ ವಿಚಾರವನ್ನು ಹೊರತುಪಡಿಸಿದರೆ ಶೆಟ್ಟಿಯವರ ವಿರುದ್ಧ ಯಾವುದೆ ಗುರುತರವಾದ ಆರೋಪಗಳಿಲ್ಲ ಎಂದು ರಾಜ್ಯಪಾಲರಿಗೆ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದರು.

ವಿಶ್ವನಾಥಶೆಟ್ಟಿಯ ಕಾರ್ಯವೈಖರಿ ಮತ್ತು ನಿಷ್ಪಕ್ಷಪಾತದ ಮನೋಭಾವನೆ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ವಕೀಲರಾಗಿ ವಿವಿಧ ಪ್ರಕರಣಗಳಲ್ಲಿ ವಾದಿಸಿರುವುದು, ಅಲ್ಲದೆ, ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಶೆಟ್ಟಿ ಸಾಕಷ್ಟು ಹೆಸರು ಮಾಡಿರುವುದನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ.

ಮುಖ್ಯಮಂತ್ರಿ ನೀಡಿದ್ದ ಸ್ಪಷ್ಟೀಕರಣಕ್ಕೆ ಸಹಮತ ವ್ಯಕ್ತಪಡಿಸಿದ ರಾಜ್ಯಪಾಲರು, ನ್ಯಾ.ಪಿ.ವಿಶ್ವನಾಥ ಶೆಟ್ಟಿ ನೇಮಕಕ್ಕೆ ಸಂಬಂಧಿಸಿದ ಶಿಫಾರಸ್ಸಿಗೆ ಅಂಕಿತ ಹಾಕಿ, ಹಲವುದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News