ಬ್ರಿಗೇಡ್ ಸಮಾವೇಶ
ಶಿವಮೊಗ್ಗ, ಜ.26: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿ ಸದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಎಚ್ಚರಿಕೆಯ ಹೊರತಾಗಿಯೂ ಗುರುವಾರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಆಯೋಜಿಸಿದ್ದ ಬ್ರಿಗೇಡ್ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದ ಮಾಹಿತಿಗಳು ಬಂದಿವೆ.
ಬುಧವಾರ ರಾತ್ರಿ ಶಿವಮೊಗ್ಗ ನಗರದಿಂದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಈಶ್ವರಪ್ಪಬೆಂಬಲಿಗರು ಕೂಡಲಸಂಗಮ ಸಮಾವೇಶಕ್ಕೆ ವಿವಿಧ ವಾಹನಗಳಲ್ಲಿ ತೆರಳಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಿದ್ದ ಈಶ್ವರಪ್ಪಬೆಂಬಲಿಗ ನಾಯಕರೊಬ್ಬರು ಮಾತನಾಡಿ, ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯಿಂದಲೂ ಸಾವಿರಾರು ಜನ ಸಮಾವೇಶದಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೂಡಲಸಂಗಮ ಸಮಾವೇಶದಲ್ಲಿ ಉತ್ತರ ಕರ್ನಾಟಕ ಭಾಗದ 16 ಜಿಲ್ಲೆಗಳ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ ಎಂದು ಬ್ರಿಗೇಡ್ ಸಂಘಟನೆಯ ಮುಂದಾಳುಗಳು ತಿಳಿಸಿದ್ದರು. ಇದೀಗ ಈ ಸಮಾವೇಶಕ್ಕೆ ಈಶ್ವರಪ್ಪ ತವರೂರು ಶಿವಮೊಗ್ಗದಿಂದಲೂ ಅವರ ಬೆಂಬಲಿಗರು ಭಾರೀ ದೊಡ್ಡ ಸಂಖ್ಯೆಯಲ್ಲಿ ತೆರಳಿರುವುದು ಜಿಲ್ಲಾ ಬಿಜೆಪಿ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಬಿ.ಎಸ್.ವೈ.ರವರು ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸದಂತೆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಇದರ ಹೊರತಾಗಿಯೂ ಅವರ ತವರೂರಿನ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಮತ್ತೊಂದೆಡೆ ಬಿ.ಎಸ್.ವೈ. ಬಣದವರು ಕೂಡಲಸಂಗಮ ಸಮಾವೇಶದಲ್ಲಿ ಭಾಗವಹಿಸಿರುವ ಪಕ್ಷದ ನಾಯಕರ ವಿವರ ಕಲೆ ಹಾಕುತ್ತಿದ್ದಾರೆಂಬ ಮಾಹಿತಿಗಳು ಕೂಡ ಕೇಳಿಬರುತ್ತಿವೆ.