ಮದ್ಯಪಾನ ನಿಷೇಧ ಬೆಂಬಲಿಸಿ ಮಾನವ ಸರಪಣಿ: ವಿಶ್ವದಾಖಲೆ ಬಿಹಾರ

Update: 2017-01-26 18:59 GMT

ಬಿಹಾರದ ಹೊರಗಿನ ಆಂಗ್ಲ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ, ಯಾಕೆಂದರೆ ನಗರ ಪ್ರದೇಶಗಳಲ್ಲಿರುವ ವೃತ್ತಪತ್ರಿಕೆಗಳು ತಮ್ಮ ಪಕ್ಷಪಾತದ ಸುದ್ದಿ ಪ್ರಸಾರಕ್ಕೆ ಕುಖ್ಯಾತವಾಗಿವೆ, ಇವುಗಳು ಬಿಹಾರದಂಥಾ ದೊಡ್ಡ ರಾಜ್ಯದಲ್ಲಿ ನಡೆದ ಅದರಲ್ಲೂ ಸರಕಾರವೇ ಆಯೋಜಿಸಿ ಕಾರ್ಯಕ್ರಮದ ಹೊರತಾಗಿಯೂ ದೊಡ್ಡ ನಗರಗಳಲ್ಲಿ ನಡೆಯುವ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತವೆ.

ಶನಿವಾರದಂದು ಭಾರತದ ಮೂವತ್ತು ನಗರಗಳ ಸಾವಿರಕ್ಕೂ ಅಧಿಕ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯ ಬೇಡಿಕೆಯನ್ನು ಮುಂದಿಟ್ಟು ಬೀದಿಗಿಳಿದ ಕೆಲವು ಗಂಟೆಗಳ ಮೊದಲು ಬಿಹಾರದಲ್ಲಿ ಅಂದಾಜು ಮೂರು ಕೋಟಿಗೂ ಅಧಿಕ ಜನರು ಇನ್ನೊಂದು ಪ್ರತಿಭಟನೆಗಾಗಿ ಕೈ ಜೋಡಿಸಿದ್ದರು- ಅದು ನಿಷೇಧವನ್ನು ಬೆಂಬಲಿಸಿ ಮಾನವ ಸರಪಳಿಯನ್ನು ರಚಿಸಿ ನಡೆದ ಪ್ರತಿಭಟನಾ ಪ್ರದರ್ಶನ.

ಆದರೆ ಕೇವಲ ಆಂಗ್ಲ ಪತ್ರಿಕೆಗಳನ್ನೇ ನೆಚ್ಚಿಕೊಂಡಿರುವ ಓದುಗರಿಗೆ ಮಾತ್ರ ಮರುದಿನ ಕೇವಲ ಮಹಿಳೆಯರು ನಡೆಸಿದ ಪ್ರತಿಭಟನೆಯ ಬಗ್ಗೆ ಮಾತ್ರ ಓದಲು ಸಿಕ್ಕಿರಬಹುದು. ಈ ಪ್ರತಿಭಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಲ್‌ಗೋಔಟ್ ಎಂಬ ಹ್ಯಾಶ್‌ಟ್ಯಾಗ್ ಮೂಲಕ ಪ್ರಸಾರ ಮಾಡಲಾಗಿತ್ತು. ಅತ್ಯಂತ ಪ್ರಮುಖ ಪತ್ರಿಕೆಗಳು ವಿಲ್‌ಗೋಔಟ್ ಸುದ್ದಿಯನ್ನು ತಮ್ಮ ಒಳಗಿನ ಪುಟಗಳಲ್ಲಿ ಒಂದು ಸಾಲಿನ ವರದಿಗಳಲ್ಲಿ ಮುದ್ರಿಸಿದ್ದವು. ಪ್ರತಿಭಟನೆಯ ಚಿತ್ರಗಳು ಅವುಗಳಿಗೆ ಅಂತಾರಾಷ್ಟ್ರೀಯ ಆವೃತಿಗಳಲ್ಲೂ ಸ್ಥಾನ ಒದಗಿಸಿದ್ದವು. ಇದರಿಂದ ಅದನ್ನು ಸಂಯುಕ್ತ ರಾಷ್ಟ್ರದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನಡೆದ ಪ್ರತಿಭಟನೆ ಎಂದು ತಪ್ಪಾಗಿ ಅರ್ಥೈಸಲಾಗಿತ್ತು. ಅದರಲ್ಲಿ ಬಹುತೇಕ ಯಾರೂ ಕೂಡಾ ಬಿಹಾರದ ಸುದ್ದಿಯ ಬಗ್ಗೆ ಯಾವ ಉಲ್ಲೇಖವನ್ನೂ ಮಾಡಲಿಲ್ಲ. ಶನಿವಾರ ಮಧ್ಯಾಹ್ನ ಬಿಹಾರದಾದ್ಯಂತ ನಗರ ಮತ್ತು ಪಟ್ಟಣಗಳಲ್ಲಿನ ದಾಖಲೆಯ 3.2 ಕೋಟಿ ಜನರು ಜೊತೆಯಾಗಿ ನಿಂತು 45 ನಿಮಿಷಗಳ ಕಾಲ ಕೈಕೈ ಹಿಡಿದು ನಿಲ್ಲುವ ಮೂಲಕ ಮದ್ಯಪಾನ ನಿಷೇಧವನ್ನು ಬೆಂಬಲಿಸಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ಎಪ್ರಿಲ್ ತಿಂಗಳಲ್ಲಿ ಮದ್ಯವನ್ನು ನಿಷೇಧಿಸಿ ಮನೆಯ ಯಾವೊಬ್ಬ ಸದಸ್ಯ ಕೂಡಾ ಮದ್ಯ ಹೊಂದಿದ್ದರೆ ಇಡೀ ಕುಟುಂಬ ಸದಸ್ಯರನ್ನೇ ಶಿಕ್ಷೆಗೊಳಪಡಿಸುವಂಥ ಕಠಿಣ ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನನ್ನು ರದ್ದು ಮಾಡಿದ ಪಟ್ನಾ ಉಚ್ಚನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ತಡೆಹಿಡಿಯಿತು. ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ಹಿರಿಯ ರಾಜಕಾರಣಿಗಳಿಂದ ಹಿಡಿದು ಶಾಲಾ ಮಕ್ಕಳನ್ನೂ ಹೊಂದಿದ್ದ 11,000 ಕಿ.ಮೀ. ಉದ್ದದ ಈ ಸರಪಳಿ ಜಗತ್ತಿನ ಅತ್ಯಂತ ಉದ್ದದ ಮಾನವ ಸರಪಳಿ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಖಚಿತಪಡಿಸಿದ್ದು ತನ್ನ 2018ರ ಮುದ್ರಣದಲ್ಲಿ ಸೇರಿಸಲಿದೆ. ‘‘ಈ ಸಂಖ್ಯೆಯನ್ನು ಹೆಚ್ಚಿಸಿ ಹೇಳಲಾಗಿಲ್ಲ ಎಂಬುದು ನನ್ನ ಯೋಚನೆ’’ ಎನ್ನುತ್ತಾರೆ ಕಾರ್ಯಕ್ರಮದ ಸಂದರ್ಭ ನಿಯಂತ್ರಣ ಕೊಠಡಿಯಲ್ಲಿ ಹಾಜರಿದ್ದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ವೀಕ್ಷಕ ನರೇಶ್ ಚಂದ್ರ ಮಾತುರ್.

ಪಾಟ್ನಾದ ಗಾಂಧಿ ಮೈದಾನದಲ್ಲೂ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಆರಂಭದಲ್ಲಿ ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಸಿಮೀತವಾಗಿತ್ತಾದರೂ ನಿಧಾನವಾಗಿ ಸಿಖ್, ಹಿಂದೂಗಳು, ಮುಸ್ಲಿಮರು ಮತ್ತು ಇತರ ಸಮುದಾಯದ ಜನರು ಕೂಡಾ ಪರಸ್ಪರ ಕೈಜೋಡಿಸುವ ಮೂಲಕ ಮೊದಲಿನ ಅಂದಾಜಿಗಿಂತಲೂ ದೊಡ್ಡದಾಗಿ ಬೆಳೆಯಿತು ಎನ್ನುತ್ತಾರವರು. ಇವೆಲ್ಲದರ ಹೊರತಾಗಿಯೂ ಕೆಲವು ಆಂಗ್ಲ ಮಾಧ್ಯಮ ಸಂಸ್ಥೆಗಳು ತಮ್ಮ ಯಾವುದೇ ವರದಿಗಾರರನ್ನು ಬಿಹಾರದ ಮಾನವ ಸರಪಳಿಯನ್ನು ವರದಿ ಮಾಡಲು ಕಳುಹಿಸಲಿಲ್ಲ ಅಥವಾ ತಮ್ಮ ರಾಷ್ಟ್ರೀಯ ಆವೃತಿಯಲ್ಲಿ ಅದನ್ನು ಪ್ರಕಟಿಸಲಿಲ್ಲ. ಇದರ ವರದಿಯನ್ನು ಆನ್‌ಲೈನ್ ಮಾಧ್ಯಮ ಸುದ್ದಿಗಾಗಿ ಮಾತ್ರ ಮೀಸಲಿಡಲಾಯಿತು. ಟೆಲಿಗ್ರಾಫ್ ಪತ್ರಿಕೆ ಅತೀ ದೀರ್ಘವಾದ ಸುದ್ದಿಯನ್ನು ಅಧಿಕಾರಿಗಳ ಹೇಳಿಕೆಗಳ ಜೊತೆಗೆ ಪ್ರಕಟಿಸಿತ್ತು. ಹಿಂದೂಸ್ಥಾನ್ ಟೈಮ್ಸ್‌ನಲ್ಲಿ ಸಂಪಾದಕೀಯ ಮತ್ತು ಸ್ಥಳೀಯ ಆವೃತಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಹಿಂದೂ ತನ್ನ ವರದಿಗಾರನನ್ನು ಸ್ಥಳಕ್ಕೆ ಕಳುಹಿಸಿತ್ತು. ಉಳಿದ ಬಹುತೇಕ ವರದಿಗಳು ಸುದ್ದಿ ಸಂಸ್ಥೆಗಳಿಂದ ಬಂದಂಥಾಗಿದ್ದವು. ಆಂಗ್ಲ ಮಾಧ್ಯಮಗಳು ತಪ್ಪಿಸಿಕೊಂಡಿದ್ದವಾದರೂ ಬಿಹಾರದ ಹಿಂದಿ ವೃತ್ತಪತ್ರಿಕೆಗಳು ಮಾನವ ಸರಪಳಿಯ ವರದಿಗಾಗಿ ಸ್ಥಳಕ್ಕೆ ತೆರಳಿದ್ದವು. ಈ ಕಾರ್ಯಕ್ರಮ ರಾಜಕೀಯ ಗಣ್ಯರ ಮಿಲನಕ್ಕೂ ಸಾಕ್ಷಿಯಾಯಿತು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತವರ ಮೈತ್ರಿಪಕ್ಷದ ನಾಯಕ ಲಾಲೂಪ್ರಸಾದ್ ಯಾದವ್ ಜಾಥಾವನ್ನು ಪಟ್ನಾದ ಗಾಂಧಿ ಮೈದಾನದಲ್ಲಿ ಸೇರಿಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿಯ ಶಾಸಕರು ಕೂಡಾ ಇಲ್ಲೇ ಸರಪಳಿಯಲ್ಲಿ ಕೈಜೋಡಿಸಿದರು. ಆರಂಭದಲ್ಲಿ ಈ ಸರಪಳಿಯ ಉದ್ದ ಐದು ಸಾವಿರ ಕಿ.ಮೀ. ಎಂದು ನಿರ್ಧರಿಸಲಾಗಿತ್ತು ಆದರೆ ಚರ್ಚೆಯ ನಂತರ ಅದನ್ನು 11,000 ಕಿ.ಮೀ.ಗೆ ಏರಿಸಲಾಯಿತು. ಶಾಲಾಮಕ್ಕಳು ಮಾತ್ರ ಭಾಗಿಯಾಗಲಿದ್ದ ಈ ಜಾಥಾ ಸಂಪೂರ್ಣವಾಗಿ ರಾಜಕೀಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭ ಕೆಲವು ದುರ್ಘಟನೆಗಳೂ ನಡೆದವು. ಈ ಸರಪಳಿಯಲ್ಲಿ ಭಾಗವಹಿಸಲೆಂದು ಆಗಮಿಸುತ್ತಿದ್ದ 15ರ ಹರೆಯದ ಬಾಲಕಿ ವೈಶಾಲಿ ಜಿಲ್ಲೆಯಲ್ಲಿ ಟ್ರಕ್‌ನಿಂದ ಬಿದ್ದು ಮೃತಪಟ್ಟಳು. ಇದರಿಂದ ರೊಚ್ಚಿಗೆದ್ದ ಆ ಗ್ರಾಮದ ಜನರು ಮಾನವ ಸರಪಳಿಯ ವಿರುದ್ಧ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆದರು. ಇನ್ನು 80 ವಿದ್ಯಾರ್ಥಿಗಳು ಬಿಸಿಲಿನಿಂದಾಗಿ ಪ್ರಜ್ಞೆ ತಪ್ಪಿಬಿದ್ದರು. 12:15ಕ್ಕೆ ಆರಂಭವಾದ ಸರಪಳಿ ಮಧ್ಯಾಹ್ನ ಒಂದು ಗಂಟೆಗೆ ಕೊನೆಯಾಯಿತು. ಈ ಬಗ್ಗೆ ಪ್ರಶ್ನಿಸಿದಾಗ ನಾವಿಲ್ಲಿ ಮಕ್ಕಳ ಬಗ್ಗೆ ಮಾತನಾಡುತ್ತಿದ್ದೇವೆ ಆದರೆ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ಆಚರಣೆಯ ಸಮಯದಲ್ಲಿ ತರಬೇತಿ ಪಡೆದ ಜವಾನರು ಎಲ್ಲಾ ತರಬೇತಿ ಮತ್ತು ಅಭ್ಯಾಸದ ನಂತರವೂ ಪ್ರಜ್ಞೆ ಕಳೆದುಕೊಳ್ಳುತ್ತಾರೆ ಮತ್ತು ಬೀಳುತ್ತಾರೆ ಎಂದು ಕುಮಾರ್ ಟೆಲಿಗ್ರಾಫ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು. ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾದ ಮುಖ್ಯಸ್ಥ ಜಿತನ್‌ರಾಮ್ ಮಾಂಝಿ, ತಾನು ನಿಷೇಧವನ್ನು ಬಿಂಬಲಿಸಿದರೂ ಸರಕಾರ ಶಾಲಾ ಮಕ್ಕಳು ಹೀಗೆ ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲುವಂತೆ ಒತ್ತಡ ಹೇರಕೂಡದು ಎಂಬ ಹೇಳಿಕೆ ನೀಡುವ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

 ಈ ಸಂದರ್ಭದಲ್ಲಿ ಇನ್ನೂ ಹಲವು ಘಟನೆಗಳು ನಡೆದವು. ಪಟ್ನಾದಲ್ಲಿ ಮಾನವ ಸರಪಳಿಯಿಂದ ಉಂಟಾದ ಸಂಚಾರ ತಡೆಯ ಕಾರಣದಿಂದ ಮಹಿಳೆಯೊಬ್ಬರು ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದರು. ಪಟ್ನಾ ಜಿಲ್ಲೆಯೊಂದರಿಂದಲೇ ಸುಮಾರು ಎಂಟು ಲಕ್ಷ ಮಂದಿ ಮಾನವ ಸರಪಳಿಯಲ್ಲಿ ಭಾಗವಹಿಸಿದರು. ಮಧುಬನಿ ಜಿಲ್ಲೆಯಲ್ಲಿ ಸರಪಳಿಯಲ್ಲಿ ಭಾಗವಹಿಸಿದ್ದ ಕೆಲಮಂದಿ ವಾಪಸ್ ತೆರಳುವಾಗ ಆರು ಶೇಂದಿ ಅಂಗಡಿಗಳನ್ನು ಧ್ವಂಸ ಮಾಡಿದರು. ಬಿಹಾರದ ಹೊರಗಿನ ಆಂಗ್ಲ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ, ಯಾಕೆಂದರೆ ನಗರ ಪ್ರದೇಶಗಳಲ್ಲಿರುವ ವೃತ್ತಪತ್ರಿಕೆಗಳು ತಮ್ಮ ಪಕ್ಷಪಾತ ಸುದ್ದಿ ಪ್ರಸಾರಕ್ಕೆ ಕುಖ್ಯಾತವಾಗಿವೆ. ಇವುಗಳು ಬಿಹಾರದಂಥ ದೊಡ್ಡ ರಾಜ್ಯದಲ್ಲಿ ನಡೆದ ಅದರಲ್ಲೂ ಸರಕಾರವೇ ಆಯೋಜಿಸಿ ಕಾರ್ಯಕ್ರಮದ ಹೊರತಾಗಿಯೂ ದೊಡ್ಡ ನಗರಗಳಲ್ಲಿ ನಡೆಯುವ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತವೆ. ಮತ್ತೊಂದೆಡೆ ವಿಲ್‌ಗೋಔಟ್ ಜಾಥಾ ಬೆಂಗಳೂರಿನಲ್ಲಿ ಹೊಸವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಲೈಂಗಿಕ ಕಿರುಕುಳದ ವಿರುದ್ಧ ತಕ್ಷಣದ ಪ್ರತಿಕ್ರಿಯೆಯಾಗಿತ್ತು ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಆಯೋಜಿಸಿದ್ದರು. ಸರಕಾರದ ಬೆಂಬಲದ ಹೊರತಾಗಿ ಮಹಿಳೆಯರ ಜಾಥಾ ಕೂಡಾ ಪೊಲೀಸ್ ಭದ್ರತೆ ಪಡೆಯುವಲ್ಲಿ ಕಷ್ಟವನ್ನು ಎದುರಿಸಿತು. ಮುಂಬೈಯತ್ತ ಎಂದು ನಿರ್ಧರಿಸಲಾಗಿದ್ದ ಜಾಥಾವು ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಕೊನೆಯ ಘಳಿಗೆಯಲ್ಲಿ ದಾದರ್‌ನಲ್ಲಿರುವ ಸಣ್ಣ ಉದ್ಯಾನವನಕ್ಕೆ ಬದಲಾಯಿಸಲ್ಪಟ್ಟಿತು. ದಿಲ್ಲಿಯಲ್ಲಿ ಜಾಥಾ ಆಯೋಜಕರನ್ನು ಪೊಲೀಸರು ತಮ್ಮ ಸ್ಥಳವನ್ನು ಕನೌಟ್ ಪ್ಲೇಸ್‌ನಿಂದ ಜಂತರ್ ಮಂತರ್‌ಗೆ ಬದಲಾಯಿಸುವಂತೆ ಸೂಚಿಸಿದ್ದರು. ಆದರೆ ಕೊನೆಯದಾಗಿ ನಿಗದಿಯಾಗಿದ್ದ ಸ್ಥಳದಲ್ಲೇ ನಡೆಸಲು ಅನುಮತಿ ನೀಡಿದರು. ಈ ಕೊನೆ ಕ್ಷಣದ ಸಮಸ್ಯೆಗಳ ಹೊರತಾಗಿಯೂ ವಿದೇಶಿ ಮಾಧ್ಯಮಗಳು ಈ ಕಾರ್ಯಕ್ರಮವನ್ನು ವರದಿ ಮಾಡಿದವು ಮತ್ತು ಇವುಗಳ ಚಿತ್ರಗಳನ್ನು ಜಗತ್ತಿನ ಇತರ ಕಡೆಗಳಲ್ಲಿ ಮಹಿಳೆಯರು ನಡೆಸಿದ ಜಾಥಾದ ಜೊತೆ ಸ್ಲೈಡ್‌ಶೋನಲ್ಲಿ ಹಾಕಿದವು. ಇದರಿಂದ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನಕ್ಕೇರುವುದರ ವಿರುದ್ಧ ಆ ಭಾಗದ ಮಹಿಳೆಯರು ನಡೆಸಿದ ಜಾಥಾದ ಭಾಗವೇ ‘ವಿಲ್‌ಗೋಔಟ್’ ಕೂಡಾ ಎಂಬ ತಪ್ಪುಕಲ್ಪನೆ ಮೂಡಲು ಕಾರಣವಾಯಿತು.

scroll.in

Writer - ಮೃದುಲಾ ಚಾರಿ

contributor

Editor - ಮೃದುಲಾ ಚಾರಿ

contributor

Similar News