×
Ad

ಕಾಶ್ಮೀರ ಹಿಮಪಾತದಲ್ಲಿ ಸಾವು : ಮುಂದಿನ ತಿಂಗಳು ಹಸೆಮಣೆಯನ್ನೇರಲಿದ್ದ ಯೋಧ ಸಂದೀಪ್

Update: 2017-01-27 22:39 IST

ಹಾಸನ,ಜ.27: ಜಮ್ಮು-ಕಾಶ್ಮೀರದ ಗುರೇಜ್ ವಿಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಹಿಮಪಾತದಲ್ಲಿ ಹಾಸನ ಬಳಿಯ ದೇವಿಹಳ್ಳಿ ಗ್ರಾಮದ ಸಂದೀಪ ಕುಮಾರ್ ಶೆಟ್ಟಿ ಹುತಾತ್ಮರಾಗಿದ್ದಾರೆ. 28ರ ಹರೆಯದ ಸಂದೀಪ ಕಳೆದ ಎಂಟು ವರ್ಷಗಳಿಂದಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮುಂದಿನ ತಿಂಗಳು ಮೆಚ್ಚಿದ ಯುವತಿಯೊಡನೆ ಹಸೆಮಣೆಯನ್ನೇರಲಿದ್ದರು. ಆದರೆ ವಿಧಿ ಅವರನ್ನೇ ಕೊಂಡೊಯ್ದಿದೆ.

   ಹೆತ್ತವರಾದ ಪುಟ್ಟರಾಜು-ಗಂಗಮ್ಮ ದಂಪತಿಗೆ ಸಂದೀಪ ಹಿಮಪಾತದಲ್ಲಿ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಭಾರತೀಯ ಸೇನೆಯಿಂದ ಶುಕ್ರವಾರ ಬೆಳಿಗ್ಗೆ ಆರು ಗಂಟೆಗಷ್ಟೇ ತಲುಪಿತ್ತು. ಗಂಟೆಗಳ ಬಳಿಕ,ದಂಪತಿ ಇನ್ನೂ ಆಘಾತದಲ್ಲಿದ್ದಾಗಲೇ ಸಂದೀಪ ಶವ ಪತ್ತೆಯಾದ ಮಾಹಿತಿಯೂ ಲಭಿಸಿತ್ತು.

ಮೃತ ಯೋಧನ ಶವ ಶನಿವಾರ ದೇವಿಹಳ್ಳಿಯನ್ನು ತಲುಪುವ ನಿರೀಕ್ಷೆಯಿದ್ದು, ಕುಟುಂಬದವರು ಬೆಂಗಳೂರಿಗೆ ಧಾವಿಸಿದ್ದಾರೆ. ಸಂದೀಪರ ಹೆತ್ತವರು ಮತ್ತು ಸೋದರಿಯನ್ನು ಅಗಲಿದ್ದಾರೆ.

ಕಳೆದ ವರ್ಷದ ನವಂಬರ್‌ನಲ್ಲಿ ಕೊನೆಯ ಬಾರಿಗೆ ಊರಿಗೆ ಬಂದಿದ್ದ ಸಂದೀಪ ದೇವಸ್ಥಾನವೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರ ಭಾವೀ ಬಾಳಸಂಗಾತಿಗಾಗಿ ಹೆತ್ತವರು ಹುಡುಕಾಡುತ್ತಿದ್ದು, ಬೆಂಗಳೂರು ನಿವಾಸಿ ಯುವತಿಯೊಂದಿಗೆ ನಿಶ್ಚಿತಾರ್ಥವೂ ಆಗಿತ್ತು. ಫೆ.21ರಂದು ಮದುವೆ ನಡೆಸಲು ದಿನವೂ ನಿಗದಿಯಾಗಿತ್ತು.

ಸಂದೀಪ್ ಇನ್ನಿಲ್ಲವೆಂಬ ಕಟುಸತ್ಯವನ್ನು ಕುಟುಂಬಿಕರು ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನ.11ರಂದು ದೇವಸ್ಥಾನದ ಉದ್ಘಾಟನೆ ಸಂದರ್ಭ ಶಾಸಕ ಎಚ್.ಡಿ.ರೇವಣ್ಣ ಅವರು ಆತನನ್ನು ಸನ್ಮಾನಿಸಿ,ದೇಶದ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಪ್ರಶಂಸೆಯ ಸುರಿಮಳೆಗೈದಿದ್ದರು ಎಂದು ದೇವಿಹಳ್ಳಿ ನಿವಾಸಿ ಮಂಜೇಗೌಡ ಕಂಬನಿ ಮಿಡಿದರು.

ಸಂದೀಪ್ ಅವರ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕುಟುಂಬ ಸದಸ್ಯರ ವಿರೋಧದ ನಡುವೆಯೇ ದೇಶಸೇವೆಯ ಹಂಬಲದೊಂದಿಗೆ ಸಂದೀಪ್ ಸೇನೆಯನ್ನು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News