ಸಚಿವರ ಎದುರೇ ವಿಷ ಸೇವಿಸಿದ ಯುವತಿ: ಕೌಟುಂಬಿಕ ಭೂ ಕಲಹ ಹಿನ್ನೆಲೆ
ಶಿವಮೊಗ್ಗ, ಜ.27: ಭೂವಿವಾದದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಿಗೆ ದೂರು ನೀಡಲು ಬಂದಿದ್ದ ಯುವತಿಯೋರ್ವಳು ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಚಿವರ ಸಮ್ಮುಖದಲ್ಲೇ ವಿಷ ಸೇವಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರದ ನಿವಾಸಿ ನಯನಾ (16) ವಿಷ ಸೇವಿಸಿ ಅಸ್ವಸ್ಥಳಾದ ಯುವತಿ. ಈಕೆಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ನಯನಾ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಹಲವು ಸಮಯಗಳಿಂದ 4 ಎಕರೆ ಭೂಮಿಗಾಗಿ ಕೌಟುಂಬಿಕವಾಗಿ ನಡೆಯುತ್ತಿದ್ದ ಕಲಹದ ವಿಚಾರವಾಗಿ ಭೂಮಿಯನ್ನು ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಿಮಿತ್ತ ಆಗಮಿಸಿದ್ದ ಶಿವಮೊಗ್ಗ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಲು ಬಂದಿದ್ದರು.
ಆದರೆ, ಮಾತುಕತೆ ನಡೆಯುತ್ತಿರುವಂತೆಯೇ ಯುವತಿ ವಿಷ ಸೇವನೆ ಮಾಡಿದ್ದು, ಪಕ್ಕದಲ್ಲಿದ್ದವರು, ಯುವತಿಯಿಂದ ವಿಷದ ಬಾಟಲಿಯನ್ನು ಕಿತ್ತುಕೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಿಕಿತ್ಸೆ ಪಡೆದ ಬಳಿಕ ಯುವತಿ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.