×
Ad

ಮುಂದುವರಿದ ಬ್ರಿಗೇಡ್ ಕಲಹ

Update: 2017-01-27 23:08 IST

ಶಿವಮೊಗ್ಗ, ಜ.27: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಹಾಗೂ ಪಕ್ಷದ ಮುಖಂಡ ಕೆ.ಎಸ್. ಈಶ್ವರಪ್ಪನಡುವಿನ ವೈಮನಸ್ಸಿನ ಫಲವಾಗಿ ಎರಡೂ ಬಣದ ಬೆಂಬಲಿಗರು ಅಂತರ್ಜಾಲ ಮಾಧ್ಯಮಗಳ ಮೂಲಕ ಸಮರಕ್ಕಿಳಿದಿದ್ದಾರೆ.


ಬಿಎಸ್‌ವೈ ಹಾಗೂ ಈಶ್ವರಪ್ಪ ಅವರ ಬೆಂಬಲಿಗರು ಪಕ್ಷದ ಒಳಗೆ ಹಾಗೂ ೊರಗೆ ತಮ್ಮ ನಾಯಕರ ನಡೆಯನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದು, ಈಗಾಗಲೇ ಶಿವಮೊಗ್ಗ ನಗರದಲ್ಲಿ ‘ಬೀದಿ ಕಾಳಗ’ ನಡೆದು ಸುದ್ದಿಯಾಗಿದ್ದರು.


ಇದೀಗ ಬೀದಿ ಜಗಳ ಮುಂದುವರಿದು ಸಾಮಾಜಿಕ ಜಾಲ ಸಂಪರ್ಕ ತಾಣ ‘ವಾಟ್ಸ್‌ಆ್ಯಪ್ ಮೆಸೇಜ್’ ಮೂಲಕ ಪರಸ್ಪರ ಕಾಲೆಳೆಯುತ್ತಿರುವ ಬಿಎಸ್‌ವೈ ಹಾಗೂ ಈಶ್ವರಪ್ಪ ಅವರ ಕೆಲ ಬೆಂಬಲಿಗರು ತಮ್ಮ ನಾಯಕರ ಗುಣಗಾನ ಮಾಡುವ, ಭರದಲ್ಲಿ ಎದುರಾಳಿ ನಾಯಕರನ್ನು ಕಾಲೆಳೆಯುವ ತಂತ್ರಗಾರಿಕೆ ರೂಪಿಸಿದ್ದು, ‘ವಾಟ್ಸ್ ಆ್ಯಪ್ ಸಂದೇಶಗಳ ಮೂಲಕ ಭಾರೀ ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಮೊಬೈಲ್‌ಗಳಿಗೆ ರವಾನಿಸಲಾರಂಭಿಸಿದ್ದಾರೆ.

ಈ ಮಸೇಜ್‌ಗಳ ಸೃಷ್ಟಿಕರ್ತರು ಯಾರೆಂಬು ವುದು ಯಾರಿಗೂ ತಿಳಿದಿಲ್ಲ. ಆದರೆ, ಬೆಂಬಲಿಗರ ವಾಟ್ಸ್ ಆ್ಯಪ್ ಖಾತೆ ಹಾಗೂ ಗ್ರೂಪ್‌ಗಳಿಗೆ ದಂಡಿದಂಡಿಯಾಗಿ ಮೆಸೇಜ್‌ಗಳು ಬಂದು ಬೀಳುತ್ತಿವೆ. ಇದನ್ನು ವಿರೋಧಿ ಪಾಳೆಯದವರಿಗೆ ಕಳುಹಿಸದಂತೆಯೂ ಎಚ್ಚರಿಕೆ ಸಂದೇಶ ಕೂಡ ನೀಡಲಾಗುತ್ತಿದೆ. ಇಬ್ಬರು ನಾಯಕರ ಬೆಂಬಲಿಗರು ‘ವಾಟ್ಸ್‌ಆ್ಯಪ್ ಮೆಸೇಜ್’ ಸಮರಕ್ಕಿಳಿದಿರುವುದು ಪಕ್ಷದಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪ್ರಸ್ತುತ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ಎರಡು ಕಡೆಯ ಬೆಂಬಲಿಗರಿಗೆ ನಿರ್ದೇಶನ ನೀಡಿ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದ ಹಿರಿಯ ಮುಖಂಡರು ‘ವ್ಯಾಟ್ಸ್‌ಆ್ಯಪ್ ಜಗಳ’ ನಿಯಂತ್ರಣ ಮಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ.


ಇಬ್ಬರೂ ನಾಯಕರ ಬೆಂಬಲಿಗರು ‘ವಾಟ್ಸ್‌ಆ್ಯಪ್ ಮೆಸೇಜ್’ಗಳಲ್ಲಿ ತಮ್ಮ ನಾಯಕರ ಗುಣಗಾನವನ್ನು ಭರ್ಜರಿಯಾಗಿ ನಡೆಸುತ್ತಿದ್ದಾರೆ. ಜಾತಿ, ವರ್ಗ, ನಿಷ್ಠೆಯನ್ನು ಮುಂದಿಟ್ಟು ತಮ್ಮ ನಾಯಕರ ನಡೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾ, ವಿರೋಧಿ ನಾಯಕರ ಮೇಲೆ ಟೀಕಾಪ್ರಹಾರ ನಡೆಸುತ್ತಿದ್ದಾರೆ.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News