ಮಹಾರಾಷ್ಟ್ರ ರಾಜಕಾರಣಕ್ಕೆ ಪದ್ಮವಿಭೂಷಣದ ಬಳಕೆ

Update: 2017-01-27 18:56 GMT

ಪ್ರತಿ ಬಾರಿ ಪದ್ಮಗೌರವ ಘೋಷಣೆಯಾದಾಗಲೂ ಅವು ಬೇರೆ ಬೇರೆ ಕಾರಣಗಳಿಗಾಗಿ ಚರ್ಚೆಗೀಡಾಗುತ್ತವೆ. ಅನೇಕ ಸಂದರ್ಭದಲ್ಲಿ, ಅರ್ಹರನ್ನು ಪಕ್ಕಕ್ಕಿಟ್ಟು ಅವರಿಗಿಂತ ಕಿರಿಯರನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಕೆಲವೊಮ್ಮೆ ಹಿರಿಯ ಸಾಧಕರಿಗೆ ಪದ್ಮಶ್ರೀ, ಕಿರಿಯ ಸಾಧಕರಿಗೆ ಪದ್ಮಭೂಷಣ ಅಥವಾ ಅದಕ್ಕಿಂತ ಮೇಲಿನ ಗೌರವವನ್ನು ನೀಡಿ ಹಿರಿಯರನ್ನು ಅವಮಾನಿಸುವ ಕಾರ್ಯವೂ ಈ ಪ್ರಶಸ್ತಿಯಿಂದ ನಡೆದು ಬಿಡುತ್ತದೆ. ಕೆಲವು ಹಿರಿಯರು ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ತಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸುವುದಿದೆ. ಸಾಧಕರಿಗೆ ಈ ಪ್ರಶಸ್ತಿ ಸಲ್ಲುತ್ತಾ ಬಂದಿದೆಯಾದರೂ, ಅನೇಕ ಸಂದರ್ಭಗಳಲ್ಲಿ ಲಾಬಿಗಳೂ ಈ ಪ್ರಶಸ್ತಿಯ ಹಿಂದೆ ಕೆಲಸ ಮಾಡುತ್ತವೆ.

ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಸರಕಾರದ ಸಿದ್ಧಾಂತ, ನಿಲುವುಗಳಿಗೆ ಪೂರಕವಾಗಿ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಆರೋಪಗಳೂ ಪ್ರತೀ ವರ್ಷ ಕೇಳಿ ಬರುವುದಿದೆ. ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಸರಕಾರದ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದರಲ್ಲಿ ಗುಟ್ಟೇನೂ ಇಲ್ಲ. ಈ ಬಾರಿ ಸರಕಾರದ ಕೆಲವು ಆಯ್ಕೆಗಳು ಶ್ಲಾಘನೆಗೆ ಕಾರಣವಾಗಿವೆ. ಮುಖ್ಯವಾಗಿ, ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಗಳಂತಿರುವ ಕೆಲವು ಪ್ರತಿಭೆಗಳನ್ನು ಪದ್ಮಗೌರವಕ್ಕೆ ಸರಕಾರ ಆಯ್ಕೆ ಮಾಡಿರುವುದು ಶ್ಲಾಘನಾರ್ಹ. ಅಕಾಡಮಿಕ್ ಅಲ್ಲ, ಬೇರೆ ಕೆಲವು ಸಾಧನೆಗಳನ್ನೂ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಗುರುತಿಸಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಈ ಪ್ರಶಸ್ತಿಯ ಹಿಂದೆ ರಾಜಕೀಯ ವಾಸನೆ ಅಡಗಿರುವುದೇ ಇದಕ್ಕೆ ಮುಖ್ಯ ಕಾರಣ. ಇದರರ್ಥ ರಾಜಕಾರಣಿಗಳು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅನರ್ಹರು ಎಂದಲ್ಲ. ದೇಶಕ್ಕೇ ಮಾದರಿಯಾಗುವಂತಹ ಹತ್ತು ಹಲವು ನಾಯಕರು ಬೇರೆ ಬೇರೆ ಪಕ್ಷಗಳಿಂದ ಹೊರಹೊಮ್ಮಿದ್ದಾರೆ. ಒಬ್ಬ ರಾಜಕಾರಣಿಯಾಗಿ ಹೇಗಿರಬೇಕು, ಹೇಗೆ ಆಡಳಿತ ನಡೆಸಬೇಕು ಎನ್ನುವುದಕ್ಕೆ ಮಾದರಿಯಾಗಿದ್ದಾರೆ. ಇಂತಹ ನಾಯಕರು ಬಿಜೆಪಿಯೊಳಗೂ ಇದ್ದಾರೆ. ಕಾಂಗ್ರೆಸ್, ಕಮ್ಯುನಿಸ್ಟ್‌ನಂತಹ ರಾಷ್ಟ್ರೀಯ ಪಕ್ಷಗಳೊಳಗೂ ಇದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ, ಭ್ರಷ್ಟಾಚಾರ ನಡೆಸದೆ ಸರಳ ಬದುಕನ್ನು ಆಯ್ದುಕೊಂಡ ನಾಯಕರೂ ನಮ್ಮ ನಡುವೆ ಇದ್ದಾರೆ. ಆಗಿ ಹೋದ ಹತ್ತು ಹಲವು ನಾಯಕರು ನಿಜಕ್ಕೂ ಭಾರತರತ್ನ ಪ್ರಶಸ್ತಿಗೆ ಅರ್ಹರಾದವರಿದ್ದಾರೆ.

ರಾಜಕಾರಣಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸರಕಾರ ಹೆಚ್ಚು ಜಾಗರೂಕವಾಗಿರಬೇಕಾಗುತ್ತದೆ. ರಾಜಕಾರಣಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಜನರು ಅದನ್ನು ಹೆಚ್ಚು ವಿಮರ್ಶಾ ಕಣ್ಣಿನಿಂದ ನೋಡುತ್ತಾರೆ. ಆದುದರಿಂದ, ಆಯ್ಕೆಯ ಸಂದರ್ಭದಲ್ಲಿ ರಾಜಕೀಯ ವಾಸನೆ ಸುಳಿಯದಂತೆ ನೋಡಿಕೊಳ್ಳಬೇಕು. ಅಂತಹ ಸಣ್ಣ ಅವಕಾಶವಿದ್ದರೂ, ಆ ಹೆಸರನ್ನು ಕೈ ಬಿಡುವುದು ಪ್ರಶಸ್ತಿಗೆ ನಾವು ನೀಡುವ ಗೌರವವಾಗುತ್ತದೆ. ಪದ್ಮವಿಭೂಷಣದಂತಹ ಪ್ರಶಸ್ತಿಯನ್ನು ಪಡೆದ ಇತರರಿಗೆ ಇದರಿಂದ ಅವಮಾನವಾಗುವುದು ತಪ್ಪುತ್ತದೆ. ಮಹಾರಾಷ್ಟ್ರದೊಳಗೆ ನಡೆಯುತ್ತಿರುವ ರಾಜಕೀಯ ಹಾವು ಏಣಿಯಾಟವೇ ಈ ಬಾರಿ, ಶರದ್ ಪವಾರ್‌ಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ತಂದುಕೊಟ್ಟಿದೆ ಎನ್ನುವುದು ಹಲವರ ಆರೋಪವಾಗಿದೆ. ಆ ಮೂಲಕ ಎನ್‌ಸಿಪಿಯನ್ನು ತನ್ನೆಡೆಗೆ ಓಲೈಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಮತ್ತು ಒಂದು ವೇಳೆ ಶಿವಸೇನೆಯೇನಾದರೂ ಕೈಕೊಟ್ಟರೆ, ಶರದ್‌ಪವಾರ್ ನೇತೃತ್ವದ ಎನ್‌ಸಿಪಿಯ ಬೆಂಬಲವನ್ನು ಪಡೆದು ಸರಕಾರವನ್ನು ಉಳಿಸಿಕೊಳ್ಳುವುದು ಅದರ ಹುನ್ನಾರ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೇ ಶಿವಸೇನೆಯ ಜೊತೆಗೆ ತಿಕ್ಕಾಟ ಆರಂಭವಾಗಿತ್ತು. ‘ತಾನು ಬೆಂಬಲ ನೀಡದೇ ಇದ್ದರೆ, ಆ ಅವಕಾಶವನ್ನು ಶರದ್‌ಪವಾರ್ ನೇತೃತ್ವದ ಎನ್‌ಸಿಪಿ ಬಳಸಿಕೊಳ್ಳುತ್ತದೆ’ ಎನ್ನುವ ಒಂದೇ ಕಾರಣಕ್ಕಾಗಿ ಶಿವಸೇನೆ ಬಿಜೆಪಿಯನ್ನು ಬೆಂಬಲಿಸಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೂ ಶಿವಸೇನೆ ಬಿಜೆಪಿಯೊಂದಿಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದೆ. ಮೈತ್ರಿಯ ಸಂದರ್ಭದಲ್ಲಿ ಶಿವಸೇನೆಯ ಮುಖ್ಯ ಬೇಡಿಕೆಗಳನ್ನು, ಅದರಲ್ಲೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಬಿಜೆಪಿ ಖಡಾಖಂಡಿತವಾಗಿ ನಿರಾಕರಿಸಿದ್ದು ಶಿವಸೇನೆಗಾಗಿರುವ ದೊಡ್ಡ ಮುಖಭಂಗವಾಗಿತ್ತು. ಶಿವಸೇನೆ ಸರಕಾರಕ್ಕೆ ಬೆಂಬಲ ನೀಡದೇ ಇದ್ದರೆ, ಎನ್‌ಸಿಪಿ ಬೆಂಬಲದೊಂದಿಗೆ ಸರಕಾರ ರಚಿಸುವುದಾಗಿ ಬಹಿರಂಗ ಬೆದರಿಕೆಯನ್ನು ಬಿಜೆಪಿ ಹಾಕಿದಾಗ ಅನಿವಾರ್ಯವಾಗಿ ಸರಕಾರದೊಂದಿಗೆ ಶಾಮೀಲಾಗುವಂತಹ ಸ್ಥಿತಿ ಶಿವಸೇನೆಯದಾಯಿತು. ಆದರೆ ಇಂದಿಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಪಾಲಿಗೆ ವಿರೋಧಪಕ್ಷಗಳಿಗಿಂತ ದೊಡ್ಡ ತಲೆನೋವು ಶಿವಸೇನೆಯೇ ಆಗಿದೆ.

ಬಿಜೆಪಿಯನ್ನು ಶಿವಸೇನೆ ಟೀಕಿಸಿದಷ್ಟು ತೀವ್ರವಾಗಿ, ವಿರೋಧ ಪಕ್ಷಗಳು ಟೀಕಿಸಿಲ್ಲ. ನೋಟು ನಿಷೇಧವಾದಾಗಲಂತೂ, ಮೋದಿಯ ವಿರುದ್ಧ ಶಿವಸೇನೆ ಮುಖಂಡರು ತೀಕ್ಷ್ಣ ಬಾಣಗಳನ್ನೆಸೆದು ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರು. ಇದೇ ಹೊತ್ತಿನಲ್ಲಿ ಎನ್‌ಸಿಪಿ ಸಮಯಸಾಧಕನ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಶಿವಸೇನೆ-ಬಿಜೆಪಿ ತಿಕ್ಕಾಟದ ಲಾಭವನ್ನು ಎನ್‌ಸಿಪಿ ಸದಾ ತನ್ನದಾಗಿಸಿಕೊಂಡು ಬರುತ್ತಿದೆ. ಬಿಜೆಪಿ ಸರಕಾರ ಈಗಲೂ ಒಳಗಿಂದೊಳಗೆ ಎನ್‌ಸಿಪಿಯ ಜೊತೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದೆ. ಇದುವೇ ಶಿವಸೇನೆಗೆ ಇರುವ ಅತೀ ದೊಡ್ಡ ಬೆದರಿಕೆಯಾಗಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ ಮತ್ತು ರಾಜ್ಯದ ಇತರ ಪೌರ ಸಂಸ್ಥೆಗಳಿಗೆ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಬಿಜೆಪಿ-ಶಿವಸೇನೆ ಮೈತ್ರಿ ಸಂಪೂರ್ಣ ಮುರಿದು ಬಿದ್ದಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ಶಿವಸೇನೆಯ ಮುಖಂಡರೋರ್ವರು ‘‘ನಾವು ರಾಜೀನಾಮೆ ಪತ್ರವನ್ನು ಹೊತ್ತುಕೊಂಡೇ ತಿರುಗಾಡುತ್ತಿದ್ದೇವೆ’’ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ, ಯಾವಾಗ ಬೇಕಾದರೂ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆಗೆಯಲಿದ್ದೇವೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಇಂತಹ ಎಚ್ಚರಿಕೆಗಳಿಗೆ ಉತ್ತರವಾಗಿಯೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಶರದ್ ಪವಾರ್‌ಗೆ ಪದ್ಮವಿಭೂಷಣವನ್ನು ನೀಡಿದೆ ಎನ್ನುವುದು ಕೆಲವು ರಾಜಕೀಯ ಮುಖಂಡರ ಅಭಿಪ್ರಾಯವಾಗಿದೆ. ಶರದ್‌ಪವಾರ್ ಹಿರಿಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಮ್ಮ ಕ್ಷೇತ್ರಗಳಲ್ಲಿ ಇವರು ನೀರಾವರಿ ಮತ್ತು ಕೃಷಿ ವಿಭಾಗಗಳಲ್ಲಿ ಕೆಲವು ಅಭಿವೃದ್ಧಿಗಳನ್ನು ಮಾಡಿದ್ದಾರೆ. ಆದರೆ ರಾಜಕೀಯವಾಗಿ ಇವರು ಮಾಡಿರುವ ಸಾಧನೆಗಿಂತ, ಇವರ ಭ್ರಷ್ಟಾಚಾರವೇ ಸಾಕಷ್ಟು ಸುದ್ದಿಯಾಗಿತ್ತು. ಕೇಂದ್ರದಲ್ಲಿ ಆಹಾರ ಖಾತೆ ಸಚಿವರಾಗಿದ್ದಾಗ, ಕ್ರಿಕೆಟ್ ಉದ್ಯಮದಲ್ಲಿ ಕಾಲ ಕಳೆದು ಟೀಕೆಗೊಳಗಾದವರು ಪವಾರ್. ಕ್ರಿಕೆಟ್ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣವನ್ನು ದೋಚಿದ ಕುಖ್ಯಾತಿ ಇವರದು. ಕಾಂಗ್ರೆಸ್‌ನಿಂದ ಸಿಡಿದು, ಸೋನಿಯಾ ಪ್ರಧಾನಿಯಾಗದಂತೆ ತಡೆದವರಲ್ಲಿ ಪವಾರ್ ಒಬ್ಬರು. ಆದರೆ ಬಳಿಕ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು, ಸೋನಿಯಾಗಾಂಧಿಯನ್ನು ಹೊಗಳಿದರು. ರಾಜಕಾರಣದ ಕೊನೆ ದಿನಗಳಲ್ಲಿ, ದೇಶಕ್ಕಾಗಲಿ, ಮಹಾರಾಷ್ಟ್ರಕ್ಕಾಗಲಿ ಅವರ ಕೊಡುಗೆ ಶೂನ್ಯ. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ತೋರಿಸಿದ ‘ಕಾಗೆ ಬಿಲ್ಲು’ ಈ ಪದ್ಮವಿಭೂಷಣ. ಆ ಮೂಲಕ ಶಿವಸೇನೆಯನ್ನು ಬಾಯಿ ಮುಚ್ಚಿಸುವುದಕ್ಕೆ ಹೊರಟಿದೆ. ಹಾಗೆಯೇ ಎನ್‌ಸಿಪಿಯ ಜೊತೆಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸಂದೇಶವನ್ನೂ ಕಳುಹಿಸಿದೆ. ಈ ಎಲ್ಲ ಬೆಳವಣಿಗೆಗಳಿಂದ ಪವಾರ್‌ಗೆ ಎರಡೂ ಕಡೆಯಿಂದಲೂ ಲಾಭವೇ ಆಗಿದೆ. ಬಿಜೆಪಿಯೊಂದಿಗೆ ಮೈತ್ರಿ ನಡೆಯದೇ ಇದ್ದರೂ, ಪವಾರ್ ನೇತೃತ್ವದ ಋಣದಲ್ಲೇ ಬಿಜೆಪಿ ಸರಕಾರ ಮುಂದುವರಿಯಬೇಕು. ಯಾಕೆಂದರೆ, ಶಿವಸೇನೆಯನ್ನು ಕೊನೆಯವರೆಗೂ ನಂಬುವಂತಹ ಸ್ಥಿತಿಯಲ್ಲಿ ಬಿಜೆಪಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News