×
Ad

ನಿರಾಶ್ರಿತರಿಗೆ ಲಾಟರಿ ಮೂಲಕ ವಿವಿಧೆಡೆ ನಿವೇಶನ

Update: 2017-01-28 18:32 IST

ಸಿದ್ದಾಪುರ, ಜ.28: ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳಿಗೆ ಜಿಲ್ಲಾಡಳಿತ ನಿವೇಶನ ನೀಡಲು ಮುಂದಾಗಿರುವ ಹಿನ್ನಲೆ ಶನಿವಾರ ದಿಡ್ಡಳ್ಳಿಯ ಆಶ್ರಮಶಾಲೆಯಲ್ಲಿ ಆದಿವಾಸಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಡಳಿತ ಲಾಟರಿ ಮೂಲಕ ನಿವೇಶನದ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

   ಉಪವಿಭಾಗಾಧಿಕಾರಿ ನಂಜುಂಡಗೌಡ, ತಹಶೀಲ್ದಾರ್ ಮಹದೇವಸ್ವಾಮಿ ನೇತೃತ್ವದಲ್ಲಿ ಜಿಲ್ಲಾಡಳಿತ ಗುರುತಿಸಿರುವ ಸೋಮವಾರಪೇಟೆ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ 171 ಕುಟುಂಬ, ಬಸವನಹಳ್ಳಿಯಲ್ಲಿ 181 ಕುಟುಂಬ ಮತ್ತು ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ 176 ಕುಟುಂಬಗಳು ಸೇರಿದಂತೆ ಒಟ್ಟು 528 ಕುಟುಂಬಗಳನ್ನು (30*30 ಅಳತೆಯ) ನಿವೇಶನಕ್ಕಾಗಿ ಆಯ್ಕೆ ಮಾಡಿದರು.

   ದಿಡ್ಡಳ್ಳಿ ನಿರಾಶ್ರಿತರಲ್ಲಿ 577 ಕುಟುಂಬಗಳಿದ್ದು, ನಂತರದ ದಿನಗಳಲ್ಲಿ 611ಕ್ಕೆ ಏರಿಕೆಯಾಗಿತ್ತು. ಇದೀಗ ನಿರಾಶ್ರಿತರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿವೇಶನ ರಹಿತ 528 ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, ಲಾಟರಿ ಆಯ್ಕೆಯ ವಿವರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಸಂದರ್ಭ ಅಧಿಕಾರಿಗಳಾದ ಪ್ರಕಾಶ್, ಸಿದ್ದಲಿಂಗಮೂರ್ತಿ, ಫಡ್ನೇಕರ್, ಚಂದ್ರಶೇಖರ್, ರಾಮೇಗೌಡ ಸೇರಿದಂತೆ ಮತ್ತಿತರರು ಇದ್ದರು.

    ಆಶ್ರಮ ಶಾಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದರೂ ಸಮೀಪದಲ್ಲಿಯೇ ಇದ್ದ ದಿಡ್ಡಳ್ಳಿ ನಿರಾಶ್ರಿತರು ಆಯ್ಕೆ ಸ್ಥಳಕ್ಕೆ ತೆರಳದೆ ಜಿಲ್ಲಾಡಳಿತದ ಕ್ರಮದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ದಿಡ್ಡಳ್ಳಿಯಲ್ಲೇ ಪೈಸಾರಿ ಜಾಗ ಇದ್ದು, ಇಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಇರುವುದರಿಂದ ನಮಗೆ ಇಲ್ಲಿಯೇ ನಿವೇಶನ ನೀಡಲಿ. ಜಿಲ್ಲಾಡಳಿತ ಗುರುತಿಸಿರುವ ಜಾಗಗಳಲ್ಲಿ ಸ್ಥಳೀಯರಿಗೆ ನಿವೇಶನ ನೀಡಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಸಚಿವರುಗಳನ್ನು ಒಳಗೊಂಡ ಸಭೆ ನಡೆಸಲಿದ್ದಾರೆ ಆದ್ದರಿಂದ ನಮಗೆ ಇಲ್ಲಿಯೇ ನಿವೇಶನ ಸಿಗುವ ವಿಶ್ವಾಸವಿದ್ದು, ಇದರ ಮಧ್ಯದಲ್ಲಿ ತರಾತುರಿಯಲ್ಲಿ ಜಿಲ್ಲಾಡಳಿತ ಲಾಟರಿ ಮೂಲಕ ಆಯ್ಕೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಆದಿವಾಸಿಗಳು ಆರೋಪಿಸಿದರು.

   ಈ ಸಂದರ್ಭ ಗಿರಿಜನ ಮುಖಂಡರಾದ ಸ್ವಾಮಿ, ಮುತ್ತಮ್ಮ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News