ರಾಯಣ್ಣನಿಗೆ ಮಣಿದ ಬಿಜೆಪಿ : ಈಶ್ವರಪ್ಪಗೆ ಒಬಿಸಿ ಮೋರ್ಚಾ ಉಸ್ತುವಾರಿ
ಬೆಂಗಳೂರು, ಜ.28: ‘ಕ್ರಾಂತಿವೀರ’ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲೇ ಎಲ್ಲ ಜಿಲ್ಲೆಗಳಲ್ಲಿ ನಾನು ಹಾಗೂ ಈಶ್ವರಪ್ಪ ಜೊತೆಯಲ್ಲಿ ಪ್ರವಾಸ ಕೈಗೊಂಡು ಹಿಂದುಳಿದ ವರ್ಗಗಳ ಸಂಘಟನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ದಿಲ್ಲಿಯಿಂದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ಆಗಮಿಸಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾವನ್ನು ಮತ್ತಷ್ಟು ಬಲಪಡಿಸಲು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪಗೆ ಮೋರ್ಚಾದ ಉಸ್ತುವಾರಿಯನ್ನು ನೀಡಲಾಗುತ್ತಿದೆ. ಅವರ ಜೊತೆಯಲ್ಲಿ ಹಾಲಿ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಶುಕ್ರವಾರ ರಾತ್ರಿ ಸುಮಾರು 3 ಗಂಟೆಗಳ ಚರ್ಚೆ ನಡೆಸಿ, ಹಲವಾರು ವಿಷಯಗಳ ಕುರಿತು ಮಾತನಾಡಿದ್ದೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಒಂದಂಶದ ಕಾರ್ಯಸೂಚಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಲಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಪ್ರಮುಖ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಸಮಾವೇಶಗಳನ್ನು ಆಯೋಜಿಸಿ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಗೆಲ್ಲುವಂತೆ ಶ್ರಮಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇರುವಂತಹ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲೂ ಹಿಂದುಳಿದ ವರ್ಗಗಳ ಸಹಕಾರವನ್ನು ಪಡೆದುಕೊಳ್ಳಲಾಗುವುದು. ಪಕ್ಷದಲ್ಲಿ ಇತ್ತೀಚೆಗೆ ನಡೆದಂತಹ ಗೊಂದಲಗಳ ಕುರಿತು ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸುವುದಾಗಿ ಯಡಿಯೂರಪ್ಪ ಹೇಳಿದರು.
ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಕೆಲ ಗೊಂದಲಗಳಿದ್ದು, ಶೀಘ್ರವಾಗಿ ನಿವಾರಣೆಯಾಗಲಿದೆ. ನಾಲ್ಕು ಜಿಲ್ಲೆಗಳ ಅಧ್ಯಕ್ಷರು ಕೆಲ ಜಿಲ್ಲೆಗಳ ಪದಾಧಿಕಾರಿಗಳ ನೇಮಕದಲ್ಲಿ ಗೊಂದಲ ಇರುವುದು ನಿಜ ಎಂದು ಯಡಿಯೂರಪ್ಪ ಒಪ್ಪಿಕೊಂಡರು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಎಂದು ಈ ಹಿಂದೆಯೆ ಹೇಳಿದ್ದೇನೆ. ಈಗಲೂ ಅದನ್ನು ಪುನರುಚ್ಚರಿಸುತ್ತಿದ್ದೇನೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಂತೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಸಂಗೊಳ್ಳಿರಾಯಣ್ಣ ಬ್ರಿಗೇಡ್ ಒಂದು ರಾಜಕೀಯೇತರ ಸಂಘಟನೆ. ಅದಕ್ಕೂ ಬಿಜೆಪಿಗೂ ಯಾವುದೆ ಸಂಬಂಧವಿಲ್ಲ. ರಾಯಣ್ಣ ಬ್ರಿಗೇಡ್‌ನ ಸಮಾವೇಶಗಳಲ್ಲಿ ಭಾಗವಹಿಸಬೇಕೆ ಅಥವಾ ಬೇಡವೆ ಎಂಬುದರ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
ನನ್ನ ಹಾಗೂ ಈಶ್ವರಪ್ಪ ನಡುವೆ ಇದ್ದಂತಹ ಗೊಂದಲಗಳನ್ನು ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಸವಿಸ್ತಾರವಾಗಿ ಚರ್ಚಿಸಿ, ಬಗೆಹರಿಸಿಕೊಂಡಿದ್ದೇವೆ. ವರಿಷ್ಠರ ಮಧ್ಯಸ್ಥಿಕೆಯಲ್ಲಿ ನಡೆದಂತಹ ಮಾತುಕತೆ ಯಶಸ್ವಿಯಾಗಿದ್ದು, ನಾವಿಬ್ಬರು ಅತ್ಯಂತ ಸಂತೋಷದಿಂದ ರಾಜ್ಯಕ್ಕೆ ವಾಪಸ್ ಆಗಿದ್ದೇವೆ. ಎಲ್ಲ ಪ್ರತಿಷ್ಠೆಗಳನ್ನು ಬದಿಗೊತ್ತಿ, ನಾವಿಬ್ಬರು ಮುಂದುವರೆಯುತ್ತೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದು ನಮ್ಮ ಒಂದಂಶದ ಕಾರ್ಯಸೂಚಿ. ನಾವಿಬ್ಬರು ಒಟ್ಟಿಗೆ ಸೇರಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡುತ್ತೇವೆ.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ