×
Ad

​ ಉರ್ದು ಭಾಷೆ ತನ್ನದೇ ಆದ ಮಹತ್ವ ಹೊಂದಿದೆ: ಪ್ರೊ. ಜೋಗನ್ ಶಂಕರ್

Update: 2017-01-28 22:55 IST


ಶಿವಮೊಗ್ಗ, ಜ. 28: ‘ಉರ್ದು ಭಾಷೆಯು ಒಂದು ಮೋಹಕ ಭಾಷೆಯಾಗಿದ್ದು, ಹೃದಯವನ್ನು ತಟ್ಟುವ ಕೌಶಲ್ಯವನ್ನು ಹೊಂದಿದೆ. ನಮ್ಮ ಅನಿಸಿಕೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಭಾಷೆ ಇದಾಗಿದೆ. ಇದರಲ್ಲಿರುವ ಸುಂದರ ಶಬ್ದಗಳಿಂದಾಗಿ ಉರ್ದು ಸಾಹಿತ್ಯ ಜಗತ್ತಿನ ಶ್ರೀಮಂತ ಸಾಹಿತ್ಯದಲ್ಲಿ ಒಂದಾಗುವಂತೆ ಮಾಡಿದೆ’ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜೋಗನ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜ್‌ನಲ್ಲಿ ಆರಂಭವಾದ ಎರಡು ದಿನಗಳ ‘ಪ್ರಸಕ್ತ ಸನ್ನಿವೇಶದಲ್ಲಿ ಉರ್ದು ಅಭಿವೃದ್ಧಿ ಮತ್ತು ಪ್ರೋತ್ಸಾಹ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಯಾವುದೇ ಭಾಷೆ ಜನರಿಗೆ ಹತ್ತಿರವಾದಾಗ ಮಾತ್ರ ಅದು ಬೆಳೆಯಲು ಸಾಧ್ಯ. ಬಳಕೆಯಲ್ಲಿ ಹೆಚ್ಚಿದಷ್ಟೂ ಅದು ಜನಪ್ರಿಯವಾಗುತ್ತದೆ. ಉರ್ದು ಮಾತನಾಡುವವರು ಕೇವಲ ಮುಸ್ಲಿಮರಷ್ಟೇ ಅಲ್ಲ. ಉತ್ತರ ಕರ್ನಾಟಕದಲ್ಲಿ ಬಹುತೇಕ ಜನರು ಉರ್ದು ಮಾತನಾಡುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಉರ್ದು ಸ್ನಾತಕೋತ್ತರ ಮತ್ತು ಸಂಶೋಧನಾ ಕೆಂದ್ರದ ಮುಖ್ಯಸ್ಥ ಪ್ರೊ. ಎಸ್. ಮಸೂದ್ ಸಿರಾಜ್ ದಿಕ್ಸೂಚಿ ಭಾಷಣ ಮಾಡಿದರು. ಸಾಹಿತ್ಯದಲ್ಲಿ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಉರ್ದು ಭಾಷೆಯನ್ನು ಇನ್ನಷ್ಟು ಪ್ರಖರಗೊಳಿಸುವ ಕೆಲಸ ನಡೆಯಬೇಕಿದೆ ಎಂದರು.
ಸಾಮಾಜಿಕ ಜಾಲ ತಾಣಗಳಲ್ಲಿ, ಸಂಪರ್ಕ ಸಾಧನಗಳಲ್ಲಿ, ಕಂಪ್ಯೂಟರ್‌ಗಳಲ್ಲಿ, ವಿಜ್ಞಾನ-ತಂತ್ರಜ್ಞ್ಞಾನದಲ್ಲಿ ಉರ್ದು ಬಳಕೆ ಹೆಚ್ಚಬೇಕಿದೆ. ಈ ರೀತಿ ಬೆಳವಣಿಗೆಯಾದಾಗ ಮಾತ್ರ ಉರ್ದು ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯ ಮತ್ತು ವಿಶೇಷ ಪ್ರೋತ್ಸಾಹ ಇದಕ್ಕೆ ದೊರೆಯಬಹುದೆಂದು ಅಭಿಪ್ರಾಯಪಟ್ಟರು. ಉರ್ದು ಅಕಾಡಮಿ ಸದಸ್ಯ ಶರ್ಫುದ್ದೀನ್ ಸೈಯದ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಜಿ. ಶಕುಂತಲಾ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ರಹಮತುಲ್ಲಾ ಬೇಗ್, ಕುವೆಂಪು ವಿವಿ ಉರ್ದು ವಿಭಾಗದ ನಿವೃತ್ತ ಪ್ರೊ. ಸೈಯದ್ ಖಲೀಲ್ ಅಹ್ಮದ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News