×
Ad

ಪ್ರೇಮ ವೈಫಲ್ಯ ಕರೆ ಸ್ವೀಕರಿಸದ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

Update: 2017-01-29 23:03 IST

ಚನ್ನಗಿರಿ, ಜ.29: ಪ್ರೀತಿಸಿದ ಯುವತಿ ತನ್ನ ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಮನನೊಂದ ಪ್ರೇಮಿಯೊಬ್ಬ ಈ ಕುರಿತು ಮೊಬೈಲ್ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಹಾಕಿ, ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.


ಪ್ರವೀಣ್ ಉಪ್ಪಾರ(22) ಎಂಬಾತನೇ ಆತ್ಮಹತ್ಯೆಗೆ ಶರಣಾದ ಪ್ರೇಮಿ. ಪ್ರವೀಣ್ ಹಾಗೂ ಆತನ ಸೋದರ ಮಾವನ ಮಗಳು ಪರಸ್ಪರ ಕಳೆದ ಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಆಕೆ ಪ್ರವೀಣ್‌ನನ್ನು ಸರಿಯಾಗಿ ಭೇಟಿಯಾಗುತ್ತಿರಲಿಲ್ಲ. ಅಲ್ಲದೆ, ಕಳೆದೊಂದು ತಿಂಗಳಿಂದ ಎಷ್ಟೇ ಫೋನ್ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.


 ಇದರಿಂದ ಮನನೊಂದ ಪ್ರವೀಣ್ ಶನಿವಾರ ಈ ಕುರಿತು ಮೊಬೈಲ್‌ನಲ್ಲಿ ವೀಡಿಯೊ ಮಾಡಿದ್ದಾನೆ. ಅಲ್ಲದೆ, ವೀಡಿಯೊದಲ್ಲಿ ಆಕೆ ತನಗೆ ಮೋಸ ಮಾಡಿದ್ದಾಳೆಂದು ಆರೋಪಿಸಿರುವ ಪ್ರವೀಣ್, ಹುಡುಗರಿಂದ ಹುಡುಗಿಗೆ ಮೋಸವಾದರೆ ಕಾನೂನು ಹುಡುಗರಿಗೆ ಶಿಕ್ಷೆ ವಿಧಿಸುತ್ತದೆ. ಆದರೆ, ಹುಡುಗಿ ಮೋಸ ಮಾಡಿದರೆ ಅವರಿಗೇಕೆ ಶಿಕ್ಷೆ ನೀಡುವುದಿಲ್ಲ? ಎಂದು ಪ್ರಶ್ನಿಸಿರುವ ಆತ, ಮೋಸ ಮಾಡಿರುವ ಸೋದರ ಮಾವನ ಮಗಳಿಗೆ ಶಿಕ್ಷೆ ನೀಡಿ ಎಂದು ಅಲವತ್ತುಕೊಂಡಿರುವ ಹಾಗೂ ತನ್ನ ಕುಟುಂಬ ವರ್ಗಕ್ಕೆ ಕ್ಷಮೆ ಯಾಚಿಸಿರುವ ವೀಡಿಯೊ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದಾನೆ.


ನಂತರ ಪ್ರವೀಣ್ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಪ್ರವೀಣ್ ಕುಟುಂಬದವರು ಸಂತೆಬೆನ್ನೂರು ಠಾಣೆುಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News