ಕರುಣಾಜನಕ ಸ್ಥಿತಿಯಲ್ಲಿ ಬರ ಪೀಡಿತ ಪ್ರದೇಶ
ಚಿಕ್ಕಮಗಳೂರು, ಜ.29: ಬರಗಾಲಪೀಡಿತ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿ ಭಾಗದಲ್ಲಿರುವ ಅಮೃತ್ ಮಹಲ್ ಕಾವಲ್‌ನಲ್ಲಿ ಕಳೆದ 3 ತಿಂಗಳಲ್ಲಿ ತಿನ್ನಲು ಮೇವಿಲ್ಲದೆ 10 ರಾಸುಗಳು ಜೀವ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಅಜ್ಜಂಪುರದ ಅಮೃತ್ ಮಹಲ್ ತಳಿಯ ರಾಸುಗಳು ರಾಜ್ಯದ ಮೊದಲ ತಳಿ. ವಿಜಯನಗರದ ಅರಸ ಕೃಷ್ಣದೇವರಾಯ ಮತ್ತು ಟಿಪ್ಪುಸುಲ್ತಾನ್ ಕಾಲದಲ್ಲೂ ವಿಶ್ವವಿಖ್ಯಾತವಾಗಿದ್ದ ಅಮೃತ ಮಹಲ್ ತಳಿಯ ರಾಸುಗಳ ಅಭಿವೃದ್ಧಿಗೆ ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶವಿತ್ತು ಎನ್ನುವ ದಾಖಲೆಗಳಿವೆ. ಆದರೆ ಇಂದು ಉಳಿದಿರುವುದು ಕೇವಲ 50 ರಿಂದ 60 ಸಾವಿರ ಎಕರೆ ಭೂಮಿ ಮಾತ್ರ. ಈ ಪೈಕಿ, ಅಜ್ಜಂಪುರದಲ್ಲಿ 651 ಎಕರೆ ಪ್ರದೇಶದಲ್ಲಿ ಗೋ ತಳಿ ಸಂವರ್ಧನಾ ಕಾರ್ಯ ನಡೆಯುತ್ತಿದೆ. ಸರಕಾರದ ನಿರ್ಲಕ್ಷ್ಯದಿಂದ ಈ ಮೂಕ ಪ್ರಾಣಿಗಳು ಸಂತತಿ ವಿನಾಶದ ಅಂಚಿನಲ್ಲಿವೆೆ. ರಾಸುಗಳು ತಿನ್ನಲು ಮೇವಿಲ್ಲದೆ ಸರಣಿ ಸಾವನ್ನಪ್ಪುತ್ತಿರುವ ಘಟನೆಗಳು ಜನರ ಮೈಮನಗಳನ್ನು ಕಲಕುತ್ತಿವೆ.
ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪ್ರತೀವರ್ಷ ಕೋಟ್ಯಂತರ ರೂ. ಅನುದಾನ ಬರುತ್ತದೆ. ಮಳೆಗಾಲದಲ್ಲಿ ಮೇವಿಗೆ ಅಗತ್ಯವಿರುವ ಮೆಕ್ಕೆಜೋಳ, ಹುಲ್ಲನ್ನು ಬೆಳೆಯಬೇಕು. ರಾಸುಗಳ ಸಾವನ್ನು ಗಮನಿಸಿದರೆ ಬಂದ ಹಣ ಗುಳುಂ ಆಗುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ.
ರಾಜ್ಯದ 6 ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲ್‌ಗಳಲ್ಲಿ ಅಜ್ಜಂಪುರ ಕೂಡ ಒಂದು. 2.50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ರಾಸುಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಬಡಕಲಾಗಿವೆ.
ರಾಸುಗಳ ಸಾವಿನ ಬಗ್ಗೆ ತಿಳಿದ ರಾಜ್ಯ ಪಶುಪಾಲನಾ ಇಲಾಖೆ ನಿರ್ದೇಶಕ ಡಾ. ಜಪ್ಪುಲ್ಲಾಖಾನ್ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ನಡೆಸಿದ್ದಾರೆ. 2 ತಿಂಗಳಿಗೆ ಬೇಕಾದಷ್ಟು ಒಂದು ರಾಸುವಿಗೆ ಪ್ರತೀ ನಿತ್ಯ 7 ಕೆ.ಜಿಯಂತೆ 475 ರಾಸುಗಳಿಗೆ 3.50 ಟನ್ ಮೇವಿನ ಅಗತ್ಯವಿದೆ. ತಕ್ಷಣ ಅಗತ್ಯವಾಗಿರುವ 50 ಟನ್ ಒಣ ಹುಲ್ಲು ಖರೀದಿಸಿ ಸಂಗ್ರಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಐತಿಹಾಸಿಕ ಹಿನ್ನೆಲೆಯುಳ್ಳ ಅಮೃತ್ ಮಹಲ್ ತಳಿಯ ರಾಸುಗಳನ್ನು ರಕ್ಷಿಸಬೇಕಾದ ಸರಕಾರ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಅಳಿವಿನಂಚಿನಲ್ಲಿರುವ ಈ ಮೂಕಪ್ರಾಣಿಗಳು ಹಸಿನಿಂದ ಸಾಯದಂತೆ ನೋಡಿಕೊಂಡರೆ ಸಾಕು ಎನ್ನುವುದು ಸ್ಥಳೀಯರ ಅಭಿಲಾಷೆಯಾಗಿದೆ.
ಅಮೃತ ಮಹಲ್ ಕೇಂದ್ರದಲ್ಲಿ ಸಿಬ್ಬಂದಿಯ ಕೊರತೆಯಿಂದ ಮೇವು ಬೆಳೆಯುತ್ತಿಲ್ಲ. ಮೇವು ತಯಾರಿಕೆಗೆ ವಿದೇಶಗಳಿಂದ ತರಿಸಿಕೊಂಡಿದ್ದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಮೇವು ತಯಾರಿಕಾ ತೊಟ್ಟಿಗಳು ಪಾಳು ಬಿದ್ದಿವೆ. ಬರಗಾಲಪೀಡಿತ ತರೀಕೆರೆ ಭಾಗದಲ್ಲಿ ಇಂತಹ ಅಪರೂಪದ ತಳಿಗಳು ಮೇವಿಲ್ಲದೆ ಹಸಿವಿನಿಂದ ಬಳಲಿ ಪ್ರಾಣ ಬಿಡುತ್ತಿವೆ. ಬದುಕಿ ಉಳಿದ ರಾಸುಗಳು ಮೇವಿನ ಕೊರತೆಯಿಂದ ಸಾಯುವ ಸ್ಥಿತಿಯಲ್ಲಿವೆೆ. ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಈ ತಳಿ ವಿನಾಶವಾದರೂ ಆಶ್ಚರ್ಯವಿಲ್ಲ.
ಮಹೇಶ್, ಸ್ಥಳೀಯರು
ಕಾವಲ್‌ನಲ್ಲಿ ಸಾಕಷ್ಟು ಮೇವಿನ ಸಂಗ್ರಹವಿದೆ. ಮೇವಿಲ್ಲದೆ ರಾಸುಗಳು ಸಾಯುತ್ತಿಲ್ಲ. ವಯೋ ಸಹಜವಾಗಿ ಸಾಯುತ್ತಿವೆ. ಅಲ್ಲದೇ ಕಡೂರು ತಾಲೂಕಿನ ಬಾಸೂರು ಕಾವಲ್‌ನಿಂದ ಹೆಚ್ಚಿನ ರಾಸುಗಳು ಮೇವಿಲ್ಲದೆ ಇಲ್ಲಿಗೆ ಬಂದಿರುವ ಹಿನ್ನೆಲೆಯಲ್ಲಿ ಮೇವಿಗೆ ಕೊಂಚ ಸಮಸ್ಯೆ ಎದುರಾಗಿದೆ ಡಾ.ವೀರಭದ್ರಪ್ಪ, ಪ್ರಭಾರಿ ನಿರ್ದೇಶಕ, ಅಮೃತ ಮಹಲ್ ಕಾವಲ್, ಅಜ್ಜಂಪುರ.