ಮಾದರಿಯಾದ ಎಸ್.ಎಂ.ಕೃಷ್ಣ

Update: 2017-01-29 18:34 GMT

ಹಿರಿಯ ರಾಜಕೀಯ ನಾಯಕ ಎಸ್.ಎಂ.ಕೃಷ್ಣ ಅವರ ರಾಜೀನಾಮೆಯಿಂದ ಕಾಂಗ್ರೆಸ್ ಬಹಿರಂಗವಾಗಿ ಬಹಳ ದುಃಖಗೊಂಡಂತೆ ವರ್ತಿಸುತ್ತಿದೆಯಾದರೂ, ಒಳಗೊಳಗೆ ಅದು ಮೈಕೊಡವಿ ಕೂತಿದೆ. ಸದ್ಯದ ಕಾಂಗ್ರೆಸ್‌ನೊಳಗಿರುವ ಅತೀ ದೊಡ್ಡ ಸಮಸ್ಯೆಯೆಂದರೆ, ಆ ಪಕ್ಷದೊಳಗಿರುವ 70 ದಾಟಿದ ಹಿರಿಯರು.

ಕಾಂಗ್ರೆಸ್ ಪಕ್ಷ ತನ್ನೊಳಗೆ ಒಂದು ದೊಡ್ಡ ವೃದ್ಧಾಶ್ರಮವನ್ನು ಹೊಂದಿದೆ. ಈ ಹಿರಿಯರ ಅತೀ ದೊಡ್ಡ ಸಮಸ್ಯೆಯೆಂದರೆ, ಕಾಂಗ್ರೆಸ್‌ನ್ನು ಮುಂದಕ್ಕೆ ಚಲಿಸದಂತೆ ನೋಡಿಕೊಳ್ಳುತ್ತಿರುವುದು. ಎಲ್ಲಿ ಕಾಂಗ್ರೆಸ್ ನಮ್ಮನ್ನು ಮೂಲೆಗುಂಪು ಮಾಡುತ್ತಿದೆಯೋ ಎಂಬ ಅಭದ್ರತೆಯಲ್ಲಿ, ಉಳಿದ ಯುವ ನಾಯಕರಿಗೆ ಮುಂದುವರಿಯಲು ಅವಕಾಶವನ್ನೂ ನೀಡದೆ, ತಾವೂ ಮುಂದುವರಿಯದೆ ಕಾಂಗ್ರೆಸ್‌ನನ್ನು ಜಡಗೊಳಿಸುತ್ತಾ ಬಂದಿದ್ದಾರೆ. ಒಂದಾನೊಂದು ಕಾಲದಲ್ಲಿ ಮುತ್ಸದ್ಧಿಗಳಾಗಿ ಕಾರ್ಯನಿರ್ವಹಿಸಿರುವ ಈ ಹಿರಿಯ ನಾಯಕರು, ಇದೀಗ ತಮ್ಮ ವಯಸ್ಸು, ದೌರ್ಬಲ್ಯಗಳನ್ನು ಒಪ್ಪಿಕೊಳ್ಳದೆ ಅಧಿಕಾರದ ಚಪಲ ಹೊಂದಿರುವುದು ಕಾಂಗ್ರೆಸ್‌ನೊಳಗಿನ ಇಂದಿನ ಅತೀ ದೊಡ್ಡ ಸಮಸ್ಯೆಯಾಗಿದೆ. ‘ಹಳೇ ಬೇರು, ಹೊಸ ಚಿಗುರು, ಮರ ಸೊಬಗು’ ಎನ್ನುವ ಮಾತುಗಳನ್ನು ಸಂಪೂರ್ಣ ಮರೆತಿರುವ ಹಿರಿಯರು, ಹೊಸ ಚಿಗುರುಗಳನ್ನು ಮುರುಟಿಸಿ ಆ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಯಯಾತಿ ರಾಜಕಾರಣ. ಪುರಾಣದಲ್ಲಿ ಬರುವ ವೃದ್ಧ ಯಯಾತಿ ತನ್ನ ಯುವ ಮಗನನ್ನು ‘ಬ್ಲಾಕ್‌ಮೇಲ್’ ಮಾಡಿ ಅವನ ಯೌವನವನ್ನು ಕಿತ್ತುಕೊಂಡು ತಾನು ಅಧಿಕಾರ ಅನುಭವಿಸಿದಂತೆಯೇ, ಇಂದು ಕಾಂಗ್ರೆಸ್‌ನಲ್ಲಿ ಅಧಿಕಾರದ ಆಕಾಂಕ್ಷೆ ಹೊಂದಿರುವ ಹಲವು ಹಿರಿಯ ನಾಯಕರಿದ್ದಾರೆ. ಇವರಿಗೆ ಕಾಂಗ್ರೆಸ್‌ನಲ್ಲಿ ಈ ಹಿಂದೆ ಸಮರ್ಥಸ್ಥಾನಗಳು ದೊರಕಿಯೇ ಇಲ್ಲವೆ ಎಂದು ಪರಿಶೀಲಿಸಿದರೆ, ಕಾಂಗ್ರೆಸ್‌ನಿಂದ ಸಿಗುವ ಸಕಲ ಅಧಿಕಾರವನ್ನೂ ಅನುಭವಿಸಿ ಇದೀಗ ದೈಹಿಕವಾಗಿ ಅಸಮರ್ಥರಾಗಿ ಮೂಲೆಗುಂಪಾದವರು. ದುರದೃಷ್ಟವಶಾತ್ ಇಷ್ಟಾಗಿಯೂ ‘ಕಾಂಗ್ರೆಸ್ ತನ್ನನ್ನು ನಿರ್ಲಕ್ಷಿಸಿದೆ’ ಎಂದು ಗೊಣಗುತ್ತಾ ಆರಾಮಕುರ್ಚಿಗೆ ಒರಗಿದ್ದಾರೆ. ಏನೂ ಅಲ್ಲದ ತನ್ನನ್ನು ಏನೇನೋ ಮಾಡಿ ಮೆರೆಯಿಸಿದ ಕಾಂಗ್ರೆಸ್ ಬೆಳೆಯಲು ಸಲಹೆ ಸೂಚನೆಗಳನ್ನು ನೀಡುವುದಿರಲಿ, ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ನೊಳಗೆ ಬಿಕ್ಕಟ್ಟನ್ನು ಸೃಷ್ಟಿಸಲು ಸಂಚು ಹೂಡುತ್ತಾ ತಮ್ಮ ವೃದ್ಧಾಪ್ಯ ಜೀವನವನ್ನು ಕಳೆಯುತ್ತಿದ್ದಾರೆ.

ಈ ನಿಟ್ಟಿನಲ್ಲಿ ಎಸ್. ಎಂ. ಕೃಷ್ಣ ಅವರು ಕಾಂಗ್ರೆಸ್‌ನೊಳಗಿರುವ ಉಳಿದೆಲ್ಲ ನಾಯಕರಿಗೆ ಮಾದರಿಯಾಗಿದ್ದಾರೆ. ಕಾಂಗ್ರೆಸ್‌ನೊಳಗಿದ್ದು ಸಂಘಟಕರ ಕಾಲೆಳೆಯುತ್ತಾ ಇರುವುದಕ್ಕಿಂತ ಇರುವ ವಾಸ್ತವವನ್ನು ಒಪ್ಪಿಕೊಂಡು ಅವರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನ ಸದ್ಯದ ಮುಖಂಡರ ಕುರಿತಂತೆ ಹತ್ತುಹಲವು ಅಸಮಾಧಾನಗಳನ್ನು ವ್ಯಕ್ತಪಡಿಸಿದ್ದಾರಾದರೂ, ಅವರು ನೀಡಿರುವ ರಾಜೀನಾಮೆಯ ಕೊಡುಗೆಯ ಮುಂದೆ, ಈ ಅಸಮಾಧಾನವನ್ನು ಪಕ್ಷದ ಮುಖಂಡರು ಸಹಿಸಿಕೊಂಡರೆ ನಷ್ಟವೇನೂ ಇಲ್ಲ. ಪಕ್ಷ ತನ್ನನ್ನು ನಿರ್ಲಕ್ಷಿಸಿದೆ ಎಂಬ ಅವರ ಮಾತುಗಳನ್ನು ಕಾಂಗ್ರೆಸ್‌ನೊಳಗಿನ ಜನರು ಬಿಡಿ, ಪಕ್ಷದ ಹೊರಗಿರುವವರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೃಷ್ಣ ಅವರ ರಾಜೀನಾಮೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್‌ನ ಕೆಲವು ನಾಯಕರು ಕಾಂಗ್ರೆಸ್‌ನೆಡೆಗೆ ಬಾಣಗಳನ್ನು ಬಿಡುತ್ತಿದ್ದಾರಾದರೂ, ಅವೆಲ್ಲವೂ ಮೊಂಡು ಬಾಣಗಳು. ಬೇರೆ ಬೇರೆ ಪಕ್ಷದವರು ಅವರನ್ನು ಆಹ್ವಾನಿಸುತ್ತಿದ್ದಾರೇನೋ ನಿಜ. ಆದರೆ ಕಾಂಗ್ರೆಸ್‌ಗೆ ಮುಜುಗರ ಮಾಡುವ ಉದ್ದೇಶದಿಂದಷ್ಟೇ ಈ ಆಹ್ವಾನವನ್ನು ನೀಡುತ್ತಿದ್ದಾರೆ. ಅದಕ್ಕೆ ಹೊರತಾದಂತೆ, ಕೃಷ್ಣ ಎನ್ನುವ ಮುದಿಯಾಗಿರುವ ಬಿಳಿಯಾನೆಯನ್ನು ಸಾಕುವುದಕ್ಕೆ ಬೇಕಾದ ಕೊಟ್ಟಿಗೆ ಇತರ ಯಾವ ಪಕ್ಷಗಳಲ್ಲೂ ಇಲ್ಲ ಎನ್ನುವುದು ಆಯಾ ಪಕ್ಷದ ನಾಯಕರಿಗೆ ಚೆನ್ನಾಗಿಯೇ ಗೊತ್ತಿದೆ. ಬೇರೆ ಪಕ್ಷಗಳಿಗೆ ಸೇರಿದರೆ ಅಲ್ಲಿ ತನ್ನ ಸ್ಥಾನ ಎಲ್ಲಿರುತ್ತದೆ ಎನ್ನುವುದು ಕೃಷ್ಣ ಅವರಿಗೂ ಚೆನ್ನಾಗಿ ಗೊತ್ತಿರುವುದರಿಂದ, ತಾನು ಪ್ರತಿನಿಧಿಸುವ ಒಕ್ಕಲಿಗ ಸಮುದಾಯದ ಮತಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಅವರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ.

ತನ್ನನ್ನು ತಾನು ಸಮಾಜವಾದಿ ಎಂದು ಕರೆದುಕೊಳ್ಳುವ ಎಸ್.ಎಂ.ಕೃಷ್ಣ, ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟು ಸುದ್ದಿಯಾಗಿದ್ದರು. ಇಡೀ ಕರ್ನಾಟಕವೆಂದರೆ ಬೆಂಗಳೂರಷ್ಟೇ ಎಂದು ತಿಳಿದುಕೊಂಡು ಸರಕಾರ ನಡೆಸಿದ ಕೃಷ್ಣ ಅವಧಿಯಲ್ಲಿ, ಅವರ ಸಮಾಜವಾದ ಕೇವಲ ಐಟಿ ಬಿಟಿ ಕಂಪೆನಿಗಳಷ್ಟೇ ಸೀಮಿತವಾಗಿತ್ತು. ಇಡೀ ಬೆಂಗಳೂರನ್ನು ಈ ಕ್ಷೇತ್ರಗಳಿಗೆ ಹರಿದು ಹಂಚಿದ ಕುಖ್ಯಾತಿಯೂ ಕೃಷ್ಣ ಅವರಿಗೆ ಸೇರಿದೆ. ಈ ಕಾರಣಕ್ಕಾಗಿಯೇ ಮುಂದೆ ಮಾಧ್ಯಮಗಳಲ್ಲಿ ‘ನಂಬರ್ ವನ್’ ಮುಖ್ಯಮಂತ್ರಿ ಎಂದು ಗುರುತಿಸಿಕೊಂಡರು. ಕಾಂಗ್ರೆಸ್ ತನ್ನ ಆಡಳಿತದಲ್ಲಿ ಮೃದು ಹಿಂದುತ್ವವನ್ನು ಜಾರಿಗೊಳಿಸಿದ್ದೂ ಇವರ ಅವಧಿಯಲ್ಲೇ. ಕೃಷ್ಣ ಅವರ ಆಡಳಿತದ ಅಂತಿಮ ಪರಿಣಾಮ ಏನಾಯಿತು ಎನ್ನುವುದು ನಮಗೆಲ್ಲ ಗೊತ್ತಿದೆ. ಆವರೆಗೆ ರಾಜ್ಯದಲ್ಲಿ ಬಹುಮತದಿಂದ ಆರಿಸಿ ಬರುತ್ತಿದ್ದ ಕಾಂಗ್ರೆಸ್ ನೆಲಕಚ್ಚಿತು. ಮುಂದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ರಾಜ್ಯದಲ್ಲಿನ್ನು ತ್ರಿಶಂಕು ಸರಕಾರವೇ ಗತಿ ಎಂಬ ಸ್ಥಿತಿಯಲ್ಲಿರುವಾಗ, ಕಾಂಗ್ರೆಸ್‌ಗೆ ಹೊಸ ವ್ಯಕ್ತಿತ್ವವನ್ನು ನೀಡಿದವರು ಸಿದ್ದರಾಮಯ್ಯ ಎನ್ನುವುದರಲ್ಲೂ ಎರಡು ಮಾತಿಲ್ಲ. ಮಾಜಿ ಮುಖ್ಯಮಂತ್ರಿಯಾದ ಬಳಿಕವೂ ಎಸ್. ಎಂ. ಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ಅತ್ಯುನ್ನತ ಸ್ಥಾನಗಳನ್ನು ಪಡೆಯುತ್ತಲೇ ಹೋದರು.

ಯುಪಿಎ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ, ಅತ್ಯಂತ ಮಹತ್ವದ ವಿದೇಶಾಂಗ ಖಾತೆ ಎಸ್.ಎಂ.ಕೃಷ್ಣ ಅವರಿಗೆ ಒಲಿಯಿತು. ಜನರಿಂದ ನೇರವಾಗಿ ಆಯ್ಕೆಯಾಗದ ಕೃಷ್ಣ ಅವರಿಗೆ ಇದು ನಿಜಕ್ಕೂ ಒಂದು ದೊಡ್ಡ ಉಡುಗೊರೆಯಾಗಿತ್ತು. ಅವರ ಸೂಟುಬೂಟುಗಳಿಗೆ ಮತ್ತು ಇಂಗ್ಲಿಷ್‌ಗಳಿಗೆ ಒಪ್ಪುವ ಸ್ಥಾನವೂ ಆಗಿತ್ತು. ಆದರೆ ವಿದೇಶಾಂಗ ಸಚಿವರಾಗಿ ಅವರು ಕೆಲವು ಅಧ್ವಾನಗಳನ್ನು ಮಾಡಿದರು. ವೃದ್ಧಾಪ್ಯ, ಕೆಲಸ ಮಾಡುವುದಕ್ಕೆ ಅವರಿಗೆ ಹಲವು ತೊಡಕುಗಳನ್ನು ನಿರ್ಮಿಸಿತ್ತು. ಒಮ್ಮೆ, ವಿದೇಶದಲ್ಲಿ ಅದಾವುದೋ ಸಭೆಯಲ್ಲಿ, ಇನ್ನಾವುದೋ ಭಾಷಣವನ್ನು ಓದಿ ದೇಶವನ್ನು ನಗೆಪಾಟಲಿಗೀಡು ಮಾಡಿದ್ದರು. ಕೆಲವರ್ಷ ಈ ಸ್ಥಾನವನ್ನು ಸವಿದರಾದರೂ, ವಿದೇಶಾಂಗ ವ್ಯವಹಾರಗಳಿಗೆ ಇವರಿಂದ ದೊರಕಿದ ಕೊಡುಗೆ ಮಾತ್ರ ಶೂನ್ಯ. ಬಳಿಕ ಅನಿವಾರ್ಯವಾಗಿ ಇವರನ್ನು ಆ ಸ್ಥಾನದಿಂದ ತೆರವುಗೊಳಿಸಬೇಕಾಯಿತು. ಆದರೆ ಇದಾದ ಬಳಿಕವೂ ಕಾಂಗ್ರೆಸ್ ಪಕ್ಷ ಇವರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿ ಆಯ್ಕೆ ಮಾಡಿತು. ಇದು ಇವರಿಗೆ ಕಾಂಗ್ರೆಸ್ ವರಿಷ್ಠರು ನೀಡಿದ್ದ ಗರಿಷ್ಠ ಮರ್ಯಾದೆಯಾಗಿದೆ. ತಮ್ಮ ವೃದ್ಧಾಪ್ಯ ಜೀವನದಲ್ಲೂ ಇಷ್ಟೆಲ್ಲ ಸ್ಥಾನಗಳನ್ನು ಅನಾಯಾಸವಾಗಿ ನೀಡಿದ ಪಕ್ಷಕ್ಕೆ ಇಂದು ಎಸ್.ಎಂ.ಕೃಷ್ಣ ರಾಜೀನಾಮೆ ಪತ್ರವನ್ನು ನೀಡುವ ಮೂಲಕ ತನ್ನ ಋಣವನ್ನು ತೀರಿಸುತ್ತಿದ್ದಾರೆ. ಪಕ್ಷದೊಳಗಿದ್ದು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಕಾಲ ಕಳೆಯುತ್ತಿರುವ ಇತರ ಹಿರಿಯ ವೃದ್ಧ ಮುತ್ಸದ್ಧಿಗಳಿಗೆ ಎಸ್.ಎಂ.ಕೃಷ್ಣ ಮಾದರಿಯಾಗಬೇಕಾಗಿದೆ. ತಮ್ಮ ತಮ್ಮ ರಾಜೀನಾಮೆಗಳನ್ನು ಇನ್ನಾದರೂ ವರಿಷ್ಠರಿಗೆ ನೀಡಿ, ಪಕ್ಷದ ಏಳಿಗೆಗೆ ತಮ್ಮ ಕೊಡುಗೆಗಳನ್ನು ನೀಡಲು ಅವರಿಗೆ ಇದೊಂದು ಸದಾವಕಾಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News