×
Ad

ಮಹಾದಾಯಿಗಾಗಿ ಪ್ರಧಾನಿ ನಿವಾಸದ ಎದುರು ಉಪವಾಸ: ಎಚ್.ಡಿ.ದೇವೇಗೌಡ

Update: 2017-01-30 20:26 IST

ಹುಬ್ಬಳ್ಳಿ, ಜ.30: ಉತ್ತರ ಕರ್ನಾಟಕ ಭಾಗದ ಜನತೆಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಪ್ರಧಾನಿ ನಿವಾಸದ ಎದುರು ಉಪವಾಸ ಸತ್ಯಾಗ್ರಹ ಕೂರಲು ಸಿದ್ಧ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದ ಸಾಂಸ್ಕೃತಿಕ ಭವನದಲ್ಲಿ ಡಾ.ಪಾಟೀಲ್ ಪುಟ್ಟಪ್ಪ ವಿಚಾರ ವೇದಿಕೆ ಹಾಗೂ ಅವ್ವ ಟ್ರಸ್ಟ್ ವತಿಯಿಂದ ನಾಡೋಜ ಡಾ.ಪಾಟೀಲ್ ಪುಟ್ಟಪ್ಪನವರ 98ನೆ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ‘ಅಭಿನಂದನಾ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜನರ ನೀರಿಗಾಗಿ ಪ್ರಧಾನಮಂತ್ರಿ ಮನೆಯ ಎದುರು ಧರಣಿ ಮಾಡಲು ಸಿದ್ಧನಿದ್ದೇನೆ. ಕಾವೇರಿ ಮತ್ತು ಮಹಾದಾಯಿ ವಿಚಾರದಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅನ್ಯಾಯ ಮಾಡಿವೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹುಮತ ಪಡೆದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು, ರಾಜ್ಯದ ಜನತೆ ಅವಕಾಶ ಮಾಡಿಕೊಡಬೇಕು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಯಾವುದೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದು, ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲು. ಬೆಂಗಳೂರಿನಲ್ಲಿ ಕುಳಿತುಕೊಂಡು ನಾವು ಸಮಸ್ಯೆಗಳನ್ನು ತಿಳಿದುಕೊಂಡು, ಅದನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲು ಅನುಕೂಲವಾಗುತ್ತದೆ ಎಂದು ದೇವೇಗೌಡ ತಿಳಿಸಿದರು.

ಬಿಜೆಪಿ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಆದರೆ, ಈವರೆಗೆ ಜನತೆಗೆ ಏನನ್ನೂ ಕೊಟ್ಟಿಲ್ಲ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ 48 ಸಕ್ಕರೆ ಕಾರ್ಖಾನೆಯನ್ನು ಕೊಟ್ಟಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ತಮ್ಮ ಅಧಿಕಾರವಧಿಯಲ್ಲಿ ರಾಜ್ಯಕ್ಕೆ ಏನು ಕೊಡುಗೆ ನೀಡಿವೆ ಎಂಬುದನ್ನು ತಿಳಿಸಲಿ ಎಂದು ದೇವೇಗೌಡ ಸವಾಲು ಹಾಕಿದರು.

ಪಾಟೀಲ್ ಪುಟ್ಟಪ್ಪ(ಪಾಪು) ಅವರಿಗೆ 98 ವಯಸ್ಸಾಗಿದೆ. ಆದರೆ, ಅವರು ಯುವಕರಂತೆ ದಿನಚರಿ ಆರಂಭಿಸುತ್ತಾರೆ. ಅವರು 125 ವರ್ಷ ಅಲ್ಲ, ಇನ್ನೂ ಹೆಚ್ಚು ವರ್ಷಗಳ ಕಾಲ ಆರೋಗ್ಯವಾಗಿರಲಿ. ಕಾವೇರಿ ಹಾಗೂ ಮಹಾದಾಯಿ ವಿಷಯದಲ್ಲಿ ಪಾಪು ನನ್ನನ್ನು ಸೇರಿದಂತೆ ಇಡೀ ರಾಜ್ಯವನ್ನು ಎಚ್ಚರಿಸಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಕರ್ನಾಟಕವನ್ನು ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಅಂತಹ ಬೇರೆ ಬೇರೆ ಮಾಡಬಾರದು. ರಾಜ್ಯದ ಏಕೀಕರಣಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಏಕೀಕರಣದ ಹೋರಾಟದಲ್ಲಿ ಪಾಲ್ಗೊಂಡಿದ್ದ ಪಾಟೀಲ್ ಪುಟ್ಟಪ್ಪರನ್ನು ಗೌರವಿಸಿದ್ದು ನನ್ನ ಸೌಭಾಗ್ಯ ಎಂದು ದೇವೇಗೌಡ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪಾಟೀಲ್ ಪುಟ್ಟಪ್ಪ, ದೇವೇಗೌಡರ ಕಾರ್ಯವೈಖರಿಯನ್ನು ನಾನು ಮೆಚ್ಚಿಕೊಂಡಿದ್ದೇನೆ. ನಾನು ಅನೇಕ ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ, ದೇವೇಗೌಡರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ಎಂದರು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅನೇಕ ದುಂದು ವೆಚ್ಚಗಳನ್ನು ಮಾಡಿದ್ದಾರೆ. ಕೇಂದ್ರ ವಿದೇಶಾಂಗ ಸಚಿವರಾಗಿದ್ದಾಗ ವಿದೇಶದಲ್ಲಿ ನಮ್ಮ ದೇಶದ ಬದಲು ಬೇರೆ ದೇಶದ ಭಾಷಣವನ್ನು ಓದಿ, ದೇಶವನ್ನು ನಗೆಪಾಟಲಿಗೆ ಈಡಾಗುವಂತೆ ಮಾಡಿದ್ದರು ಎಂದು ಪಾಟೀಲ್‌ಪುಟ್ಟಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ‘ಪಾಪು: ದಣಿವರಿಯದ ಚೇತನ’ ಹಾಗೂ ‘ನಮ್ಮ ಗುರುಗಳು’ ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ತೋಂಟದಾರ್ಯ ಮಠ ಸಿದ್ದಲಿಂಗಸ್ವಾಮಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News