×
Ad

ಜಿಲ್ಲಾಡಳಿತದ ವಿರುದ್ಧ ದಿಡ್ಡಳ್ಳಿ ನಿರಾಶ್ರಿತರ ಅಸಮಾಧಾನ

Update: 2017-01-30 22:55 IST

ಮಡಿಕೇರಿ,ಜ.30: ದಿಡ್ಡಳ್ಳಿ ನಿರಾಶ್ರಿತ ಬುಡಕಟ್ಟು ಕುಟುಂಬಗಳಿಗೆ ಈ ಹಿಂದೆ ನೆಲೆ ಕಂಡುಕೊಂಡಿದ್ದ ಪ್ರದೇಶದಲ್ಲೇ ನಿವೇಶನ ನೀಡದೆ ಬೇರೆಡೆ ನಿವೇಶನ ಗುರುತಿಸುವ ಮೂಲಕ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಿರುವ ಜಿಲ್ಲಾಡಳಿತದ ಕ್ರಮ ಖಂಡನೀಯವೆಂದು ತಿಳಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಫೆ.14ರಿಂದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ.
 ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಪ್ರಮುಖರಾದ ನಿರ್ವಾಣಪ್ಪ, ಅಮೀನ್ ಮೊಹಿಸಿನ್ ಹಾಗೂ ವಸಂತ್, ಫೆ.13ರಂದು ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ದಿಡ್ಡಳ್ಳಿಗೆ ಭೇಟಿ ನೀಡಲಿದ್ದು, ರಾಜ್ಯದ ವಿವಿಧ ಸಂಘಟನೆಗಳ ಮೂಲಕ ಅಂದು ಎರಡನೆಯ ಸಂಕಲ್ಪ ಸಭೆ ನಡೆಸುವುದಾಗಿ ಹಾಗೂ ಫೆ.14ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ.

 2016ರ ಡಿ.7ರಂದು ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಪಾಲು ಮಾಡಿದ ಬಳಿಕ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ನೂರಾರು ಜನಪರ ಸಂಘಟನೆಗಳು ಹೋರಾಟ ನಡೆಸಿದವು. ಡಿ.23ರಂದು ಮಡಿಕೇರಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಸಂದರ್ಭ ಸಮಾಜ ಕಲ್ಯಾಣ ಸಚಿವ ಆಂಜನೇಯ ಮತ್ತು ಸದನ ಸಮಿತಿಯ ಸದಸ್ಯರು, ದಿಡ್ಡಳ್ಳಿಯ ಜಾಗ ಪೈಸಾರಿಯಾಗಿದ್ದರೆ ಆದಿವಾಸಿಗಳಿಗೆ ಅಲ್ಲಿಯೇ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು.


 ದಿಡ್ಡಳ್ಳಿಯ ಜಾಗ ಪೈಸಾರಿ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಸಂಗ್ರಹಿಸಿ ಸಚಿವ ಆಂಜನೇಯ ಮತ್ತು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತರಲಾಗಿತ್ತು. ಕಾನೂನು ತೊಡಕುಗಳು ಇಲ್ಲದಿದ್ದರೆ ದಿಡ್ಡಳ್ಳಿಯಲ್ಲೇ ನಿವೇಶನ ಒದಗಿಸುವುದಾಗಿ ಸಚಿವರು ತಿಳಿಸಿದ್ದರಾದರೂ ಇದೀಗ ಜಿಲ್ಲಾಡಳಿತ ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಲಾಟರಿ ಮೂಲಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆದಿವಾಸಿಗಳಿಗೆ ನಿವೇಶನ ನೀಡಲು ಮುಂದಾಗಿದೆ. ಆದಿವಾಸಿಗಳನ್ನು ಬೇರ್ಪಡಿಸಿ ಮತ್ತೆ ಜೀತಕ್ಕೆ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಮುಖರು ಆರೋಪಿಸಿದ್ದಾರೆ. ಆದಿವಾಸಿಗಳು ಮುಖ್ಯಮಂತ್ರಿಗಳ ನೇತೃತ್ವದ ಸಭೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಸಚಿವರು ಸಭೆಯನ್ನು ನಿಗದಿಪಡಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News