×
Ad

​ಸರಕಾರದ ಅನುದಾನ ಬಿಡುಗಡೆಯ ಶ್ವೇತಪತ್ರ ಹೊರಡಿಸಲು ಈಶ್ವರಪ್ಪಒತ್ತಾಯ

Update: 2017-01-30 22:57 IST

ಚಿಕ್ಕಮಗಳೂರು,ಜ.30: ರಾಜ್ಯದಲ್ಲಿ ತಾಂಡವ ವಾಡುತ್ತಿರುವ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ವಿನಾ ಕಾರಣ ಕೇಂದ್ರದತ್ತ ಬೆರಳು ತೋರಿಸುತ್ತಿದೆ. ಹಿಂದಿನ ಯುಪಿಎ ಹಾಗೂ ಇಂದಿನ ಬಿಜೆಪಿ ಸರಕಾರದ ಅವಧಿಗಳಲ್ಲಿ ಎಷ್ಟೆಷ್ಟು ಅನುದಾ ನಗಳು ಬಿಡುಗಡೆಯಾಗಿವೆ ಎಂದು ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಸೋಮವಾರ ಕಡೂರು ತಾಲೂಕಿನ ಖಂಡುಗದಹಳ್ಳಿ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಏಕಾದಶವಾರು ರುದ್ರಹೋಮ ಕಾರ್ಯಕ್ರಮದಲ್ಲಿ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬರಗಾಲ ಪರಿಸ್ಥಿತಿಗೆ ಹೆಚ್ಚು ಹಣ ಬಿಡುಗಡೆ ಮಾಡಿರುವುದು ಮೋದಿ ಸರಕಾರ. ಇದು ವಾಸ್ತವಿಕ ಸಂಗತಿ. ಕರ್ನಾಟಕಕ್ಕೆ ಬರಗಾಲ ಹೊಸದೇನಲ್ಲ. ಯುಪಿಎ ಸರಕಾರದ ಅವಧಿಯಲ್ಲಿಯೂ ಬರವಿತ್ತು. ಆಗೆಷ್ಟು ಹಣವನ್ನು ಕೇಂದ್ರ ರಾಜ್ಯಕ್ಕೆ ನೀಡಿತ್ತು. ಈಗ ಮೋದಿಯವರೆಷ್ಟು ನೀಡಿದ್ದಾರೆಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ನಾಡಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ಜಾನುವಾರುಗಳನ್ನು ಕಟುಕರಿಗೆ ಮಾರುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಬರ ಎದುರಿಸಲು ಕೇಂದ್ರದಿಂದ ಬಂದಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ರೈತರ ಸಮಸ್ಯೆ ತೀರಾ ಹದಗೆಡಲಿದೆ. ಪಕ್ಷದ ನಾಯಕರನ್ನು ಉಳಿಸಿಕೊಳ್ಳುವುದರಲ್ಲಿಯೇ ತಮ್ಮ ಸಮಯ ವ್ಯರ್ಥ ಮಾಡಿ ಜನರನ್ನು ಅನಾಥರನ್ನಾಗಿಸಬಾರದು ಎಂದು ಲೇವಡಿ ಮಾಡಿದರು.

ಅಧಿಕಾರ ಎಂದಿಗೂ ಶಾಶ್ವತವಲ್ಲ. ಇರುವಷ್ಟು ದಿನವೂ ಜನೋಪಯೋಗಿಯಾಗಿರಬೇಕು. ಆಗ ಮಾತ್ರ ಸಿದ್ದರಾಮಯ್ಯ ಪೂರ್ಣಾವಧಿ ಸರಕಾರ ನಡೆಸುತ್ತಾರೆ. ಇಲ್ಲದಿದ್ದರೆ ಅದು ಕಷ್ಟ ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News