ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಸ್ಲಿಂ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ
ದಾವಣಗೆರೆ , ಜ.31 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಸ್ಲಿಂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಜಿಲ್ಲಾ ಸಂಚಾಲಕಿ ಜಬೀನಾ ಖಾನಂ ಮಾತನಾಡಿ, ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಾದ ಮುಸ್ಲಿಂ ಸಮುದಾಯವು ಲಕ್ಷಾಂತರ ಜನಸಂಖ್ಯೆ ಹೊಂದಿದೆ. ಅದರಲ್ಲೂ ಈ ಸಮುದಾಯದ ಬಹುತೇಕ ಜನರು ಅಸಂಘಟಿತ ವಲಯಗಳಾದ ಕಟ್ಟಡ ನಿರ್ಮಾಣ, ಬೀಡಿ ಕೆಲಸ, ಹಮಾಲಿ, ಮಂಡಕ್ಕಿ ಭಟ್ಟಿ ಕೆಲಸ, ಆಟೋ ಡ್ರೈವರ್, ಗ್ಯಾರೇಜ್ ಮತ್ತಿತರ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಸಮಾಜದವರು ಪ.ಜಾತಿ ಹಾಗೂ ಪ.ವರ್ಗದವರಿಗಿಂತಲೂ ಹಿಂದುಳಿದಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಪ್ರಧಾನಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ಸಭೆಯನ್ನು 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ನಡೆಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಭಿವೃದ್ಧಿ ಯೋಜನೆಗಳಲ್ಲಿ ಭೌತಿಕವಾಗಿ ಮತ್ತು ಆರ್ಥಿಕವಾಗಿ ಶೇ. 15ರಷ್ಟು ಅನುದಾನವನ್ನು ಕಡ್ಡಾಯವಾಗಿ ಖರ್ಚು ಮಾಡಬೇಕು. ಆ ಕುರಿತು ಎಲ್ಲಾ ಇಲಾಖೆಗಳು ಸರ್ಕಾರಕ್ಕೆ ಮತ್ತು ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
2017-18ರ ಸಾಲಿನ ಶೇ. 15ರಷ್ಟು ಅನುದಾನವನ್ನು ಈ ಸಮುದಾಯಕ್ಕೆ ಖರ್ಚು ಮಾಡುವ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಎಲ್ಲಾ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಬೇಕು. ಮುಸ್ಲಿಂ ಮಹಿಳಾ ಒಕ್ಕೂಟದ ಪ್ರತಿನಿಧಿಗಳಿಗೆ ಜಿಲ್ಲಾ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಸರ್ಕಾರಿ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇನ್ನಿತರ ಎಲ್ಲಾ ಇಲಾಖೆಗಳ ಮುಖ್ಯ ಅಧಿಕಾರಿಗಳ ಸಭೆಯನ್ನು ಕರೆದು, ವಸ್ತು ರೂಪದ ಪ್ರಯೋಜನಗಳು ಮತ್ತು ಹಣಕಾಸು ವಿತರಣೆಗಳಲ್ಲಿ 15ರಷ್ಟನ್ನು ತೆಗೆದಿರಿಸುವಂತೆ ಹಾಗೂ ಈ ಸಮುದಾಯ ಅಭಿವೃದ್ಧಿಗೆ ಬಳಸುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿರಿನ್ ಬಾನು, ಸದಸ್ಯರುಗಳಾದ ಸಬ್ರೀನ್ ತಾಜ್, ಹಸೀನಬಾನು, ನಗೀನಬಾನು, ಗುಲ್ಜಾರ್ ಬಾನು, ನಾಹೇರ್ ಬಾನು, ನಾಜೀಮಾಬಾನು, ಯಾಸ್ಮಿನ್ ಬಾನು, ನೂರ್ ಫಾತಿಮಾ, ಗುಲ್ಜಾರ್, ರಮೀಜಾಬಿ, ದಿಲ್ ಷಾದಬೀ ಮತ್ತಿತರರು ಇದ್ದರು.