×
Ad

ಪೊಲೀಸರೆಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ನಾಲ್ವರು ವಂಚಕರು!

Update: 2017-01-31 20:55 IST

ಶಿವಮೊಗ್ಗ, ಜ. 31: ಪೊಲೀಸರೆಂದು ನಂಬಿಸಿ ಮಹಿಳೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದ ಪಾರ್ಕ್ ಬಡಾವಣೆ ಮುಖ್ಯ ರಸ್ತೆಯಲ್ಲಿ ನಡೆದಿದೆ  ವರದಿಯಾಗಿದೆ.
   

ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮದ ನಿವಾಸಿ ಶಾರದಮ್ಮ (64) ಚಿನ್ನಾಭರಣ ಕಳೆದುಕೊಂಡವರೆಂದು ಗುರುತಿಸಲಾಗಿದೆ. 

ಇವರ ಪತಿ ಜೊತೆಯಲ್ಲಿದ್ದಾಗಲೇ ವಂಚಕರು ಈ ಕೃತ್ಯ ನಡೆಸಿದ್ದಾರೆ. ಒಟ್ಟಾರೆ ಚಿನ್ನದ ಆರು ಬಳೆ ಹಾಗೂ ಒಂದು ಸರವನ್ನು ಕಳ್ಳರು ಅಪಹರಿಸಿದ್ದಾರೆ. ಇವುಗಳ ಅಂದಾಜು ಮೌಲ್ಯ 1 ಲಕ್ಷ ರೂ.ಗೂ ಅಧಿಕವಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ:

ಶಾರದಮ್ಮ ಅವರು ಪತಿ ಜಯದೇವಪ್ಪರೊಂದಿಗೆ ಅಗರದಹಳ್ಳಿ ಗ್ರಾಮದಲ್ಲಿರುವ ಮನೆಯಿಂದ ಶಿವಮೊಗ್ಗ ನಗರದ ಮನೆಗೆ ಆಗಮಿಸಿದ್ದರು. ಪಾರ್ಕ್ ಬಡಾವಣೆ ಮುಖ್ಯ ರಸ್ತೆಯ ನವರಂಗ್ ಐಸ್‌ಕ್ರೀಂ ಅಂಗಡಿಯ ಬಳಿ ದಂಪತಿ ನಡೆದುಕೊಂಡು ಹೋಗುವಾಗ ವಂಚಕರು ಪೊಲೀಸರ ರೀತಿಯಲ್ಲಿ ಸೋಗು ಹಾಕಿ ನಿಂತುಕೊಂಡಿದ್ದರು. ಅವರದೇ ತಂಡದ ಓರ್ವ ಸದಸ್ಯನ ಬಳಿಯಿದ್ದ ಚಿನ್ನದ ಸರ ತೆಗೆಯಿಸಿ, ಕರವಸ್ತ್ರವೊಂದರಲ್ಲಿ ಕಟ್ಟಿ ಕೊಡುವ ನಾಟಕವಾಡಿದ್ದಾರೆ.

ತದನಂತರ ಶಾರದಮ್ಮರನ್ನು ಕರೆದು, ‘ನಗರದಲ್ಲಿ ಸರಗಳ್ಳರ ಹಾವಳಿ ವಿಪರೀತವಾಗಿದೆ. ಆದಾಗ್ಯೂ ಇಷ್ಟೊಂದು ಬೆಲಬಾಳುವ ಆಭರಣ ಹಾಕಿಕೊಂಡು ಹೋಗುತ್ತಿದ್ದೀರಿ..’ ಎಂದು ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ನಂತರ ಅವರ ಬಳಿಯಿದ್ದ ಚಿನ್ನದ ಬಳೆ ಹಾಗೂ ಸರಗಳನ್ನು ಅವರ ಕೈಯಿಂದ ತೆಗೆಯಿಸಿದ್ದಾರೆ.

ಪೇಪರ್‌ವೊಂದರಲ್ಲಿ ಸುತ್ತಿ ಕೊಡುವ ನಾಟಕ ಮಾಡಿ ಬ್ಯಾಗ್‌ನಲ್ಲಿಟ್ಟಿದ್ದಾರೆ. ಮನೆಗೆ ಹೋಗಿ ತೆರೆಯುವಂತೆ ಸೂಚಿಸಿ, ಬೈಕ್‌ನಲ್ಲಿ ತೆರಳಿದ್ದಾರೆ. ಆದರೆ ಮನೆಗೆ ತೆರಳಿ ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ದಂಪತಿಯ ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸರ ಗಮನಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News