ದರೋಡೆ ಆರೋಪ: 11 ಮಂದಿ ಸೆರೆ , ಮಾರಕಾಸ್ತ್ರ ವಶ
ಶಿವಮೊಗ್ಗ, ಜ. 31: ಶಿವಮೊಗ್ಗ ನಗರ ಹಾಗೂ ಹೊರವಲಯದ ಪ್ರದೇಶಗಳಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗನಾಣ್ಯ ದೋಚುತ್ತಿದ್ದ ಆರೋಪದ ಮೇರೆಗೆ 11 ಜನರ ತಂಡವನ್ನು ದೊಡ್ಡಪೇಟೆ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಮಾಮ್‌ಬಾಡಾ ಬಡಾವಣೆಯ 1 ನೆ ಕ್ರಾಸ್‌ನ ನಿವಾಸಿ ಅಬ್ದುಲ್ ರೋಷನ್ (19), ಚಿಕ್ಕಲ್ ಬಡಾವಣೆಯ ನಿವಾಸಿ ಸಾದಿಕ್‌ಖಾನ್ (19), ಕ್ಲಾರ್ಕ್‌ಪೇಟೆ ನಿವಾಸಿ ಆಸೀಫ್ ಖಾನ್ (19), ಮಾರ್ನಾಮಿ ಬೈಲ್ ಬಡಾವಣೆಯ ನಿವಾಸಿಗಳಾದ ಮುಹಮ್ಮದ್ ಕಾಸೀಫ್ (24), ಆಕೀಫ್ (20), ಶರಾವತಿ ನಗರ 4 ನೆ ಕ್ರಾಸ್ ನಿವಾಸಿ ಆರ್. ಪ್ರತಾಪ್ (20), ವಾದಿ ಎ ಹುದಾ ನಿವಾಸಿ ಮುಹಮ್ಮದ್ ಶಾಹೀದ್ (19), ಸೂಳೇಬೈಲು ಬಡಾವಣೆ ನಿವಾಸಿಗಳಾದ ಶೇಖ್ ಅಹ್ಮದ್ ಶಾರೂ (20), ಕಲೀಂ ಖಾನ್ (19), ಆರ್.ಎಂ.ಎಲ್ ನಗರ ನಿವಾಸಿ ಸೈಯದ್ ಆಸೀಂ (26) ಹಾಗೂ ಭದ್ರಾವತಿಯ ಮೆಹಬೂಬ್ ನಗರ ನಿವಾಸಿ ಮುಹಮ್ಮದ್ ಸಲ್ಮಾನ್ ಖುರೈಶಿ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ 8 ಮೊಬೈಲ್ ಫೋನ್, ಡೆವಿಲ್ ಚಿತ್ರವಿರುವ ಮಾಸ್ಕ್ ಕರ್ಚಿಫ್‌ಗಳು, ಒಂದು ಜೊತೆ ಬಂಗಾರದ ಕಿವಿಯೊಲೆ, ಬೈಕ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳು ಗಾರೆ ಕೆಲಸ, ಪೈಂಟಿಂಗ್, ಬಟ್ಟೆ ಅಂಗಡಿ, ಹಮಾಲಿ, ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಅಭಯಪ್ರಕಾಶ್ ಸೋಮನಾಳ್, ಅನಿತಾಕುಮಾರಿ ಮತ್ತವರ ಸಿಬ್ಬಂದಿ ಶೇಖರ್, ಕಿರಣ್‌ಕುಮಾರ್, ಚಂದ್ರಶೇಖರ್, ವಿಜಯ, ಮನೋಹರ, ಫಾರೂಕ್, ಶ್ರೀನಿವಾಸ್, ಪ್ರಸನ್ನ, ಉಮೇಶ್, ಸುರೇಶ್, ಪ್ರದೀಪ್, ಅಣ್ಣಪ್ಪಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಹಿತಿ:
ಮಂಗಳವಾರ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ‘ಸೋಮವಾರ ನಗರದ ಹೊರವಲಯದ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಕೂಲಂಕಷ ವಿಚಾರಣೆ ನಡೆಸಿದಾಗ ಕಳೆದ ಎರಡು ತಿಂಗಳ ಅವಧಿಯಲ್ಲಿ ಶಿವಮೊಗ್ಗ ನಗರದ ಸುತ್ತಮುತ್ತಲು ನಡೆಸಿದ್ದ ಎರಡು ಹೈವೇ ಡಕಾಯಿತಿ, 3 ರಾಬರಿ ಹಾಗೂ ಒಂದು ಮನೆ ಕಳ್ಳತನ ಕೃತ್ಯ ಬಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಬ್ಲೇಡ್, ಲಾಂಗ್‌ನಿಂದ ಹಲ್ಲೆ ನಡೆಸುತ್ತಿದ್ದರು...
ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಆರ್.ಪುರಂ ರಸ್ತೆಯಲ್ಲಿರುವ ವೈನ್‌ಶಾಪ್‌ವೊಂದರ ಬಳಿ ಆನಂದ್ ಎಂಬವರನ್ನು ಅಡ್ಡಗಟ್ಟಿ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದು, ಕಲ್ಲಿನಿಂದ ಹಲ್ಲೆ ನಡೆಸಿ 2,200 ರೂ. ಕಿತ್ತುಕೊಂಡು ಪರಾರಿಯಾಗಿದ್ದರು. ಇದೇ ಠಾಣಾ ವ್ಯಾಪ್ತಿಯ ಎನ್.ಎಚ್. 206 ರ ಬೈಪಾಸ್ ರಸ್ತೆಯ ಬಳಿ ನಿಂತಿದ್ದ ಲಾರಿಯ ಚಾಲಕ ಹಾಗೂ ಕ್ಲೀನರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅವರ ಬಳಿಯಿದ್ದ 55 ಸಾವಿರ ರೂ. ಅಪಹರಿಸಿದ್ದರು.
ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಜಪೇಯಿ ಬಡಾವಣೆಯ ಬಳಿ ವಿರುಪಿನಕೊಪ್ಪದ ರಾಜು ಎಂಬವರು ಪತ್ನಿಯೊಂದಿಗೆ ತೆರಳುತ್ತಿದ್ದಾಗ ಇವರನ್ನು ಅಡ್ಡಗಟ್ಟಿದ ಆರೋಪಿಗಳು 5,500 ನಗದು, ಮೊಬೈಲ್, ಚಿನ್ನದ ತಾಳಿ, ಸರ ಅಪಹರಿಸಿದ್ದರು. ಇದೇ ಠಾಣಾ ವ್ಯಾಪ್ತಿಯ ವಾಜಪೇಯಿ ಲೇ ಔಟ್‌ನಲ್ಲಿ ಸಂಜಿತ್ ಎಂಬವರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದರು. ಆದರೆ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದರಿಂದ ಎಚ್ಚೆತ್ತುಕೊಂಡು ಪರಾರಿಯಾಗಿದ್ದರು.
ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಾಳ್ಳಿ ನಿವಾಸಿ ನಾಗರಾಜ್ ಎಂಬವರು ತಮ್ಮ ತಂಗಿ ರತ್ನಮ್ಮ ಎಂಬವರನ್ನು ಆಸ್ಪತ್ರೆಗೆ ತೋರಿಸಿ ವಾಪಸ್ ಬೈಕ್‌ನಲ್ಲಿ ಊರಿಗೆ ಹೋಗುತ್ತಿದ್ದಾಗ ಎನ್.ಎಚ್. 13ರ ಜಾವಳ್ಳಿ ಜ್ಞಾನದೀಪ ಶಾಲೆ ಹತ್ತಿರ ಅವರನ್ನು ಅಡ್ಡಗಟ್ಟಿದ ಆರೋಪಿಗಳು, ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ 8,500 ನಗದು, ಮೊಬೈಲ್ ಫೋನ್, 5 ಗ್ರಾಂ ಕಿವಿಯೊಲೆ ಕಿತ್ತುಕೊಂಡು ಪರಾರಿಯಾಗಿದ್ದರು. ಅದೇ ದಿನದಂದು ಇದೇ ಠಾಣಾ ವ್ಯಾಪ್ತಿಯ ಎನ್. ಎಚ್. 13ರಲ್ಲಿಯೇ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿ ಕ್ಲೀನರ್ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿ, ಚಾಲಕನ ಬಳಿಯಿದ್ದ 80 ಸಾವಿರ ರೂ. ದೋಚಿದ್ದರು.
ಹದಿಹರಿಯದವರು ಭಾಗಿ : ಎಸ್ಪಿ ಕಳವಳ
‘ಶಿವಮೊಗ್ಗದಂತಹ ನಗರದಲ್ಲಿ ಇತ್ತೀಚೆಗೆ ಸಣ್ಣ ವಯೋಮಾನದ ಯುವಕರು, ಹೊಸಬರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ಮೂಲಕ ತಮ್ಮ ಅಮೂಲ್ಯ ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.